ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವರು ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದ್ದಾರೆ.ಚಾಮರಾಜನಗರದ ಬೇಡರಪುರ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಎದುರಾಳಿ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಅವರನ್ನು 1,88,706 ಮತಗಳಿಂದ ಸೋಲಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ. 16 ಚುನಾವಣೆಯಲ್ಲಿ 10 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಕಳೆದ ಬಾರಿ ಬಿಜೆಪಿಯಿಂದ ವಿ.ಶ್ರೀನಿವಾಸಪ್ರಸಾದ್ ಅಲ್ಪಮತಗಳಿಂದ ಗೆಲುವು ಸಾಧಿಸಿದ್ದರಿಂದ ಕ್ಷೇತ್ರ ಕೈ ತಪ್ಪಿ ಹೋಗಿತ್ತು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ವರುಣಾ, ಟಿ.ನರಸೀಪುರ, ನಂಜನಗೂಡು ಮತ್ತು ಎಚ್.ಡಿ. ಕೋಟೆ ಕ್ಷೇತ್ರ ಕಾಂಗ್ರೆಸ್ ಹಾಗೂ ಹನೂರಿನಿಂದ ಜೆಡಿಎಸ್ ಶಾಸಕರು ಆಯ್ಕೆಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ತಂದೆ ಸಚಿವ ಎಚ್.ಸಿ. ಮಹದೇವಪ್ಪ ಅವರ ಕ್ಷೇತ್ರ ನರಸೀಪುರ, ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಕ್ಷೇತ್ರ ವರುಣಾ ವ್ಯಾಪ್ತಿಯಲ್ಲಿದ್ದರಿಂದ ಕ್ಷೇತ್ರವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಈ ಇಬ್ಬರು ನಾಯಕರಿಗೂ ಸೃಷ್ಠಿಯಾಗಿದ್ದರಿಂದ ಎಲ್ಲಾ ಶಾಸಕರನ್ನು ಹೆಚ್ಚಿನ ವಿಶ್ವಾಸಕ್ಕೆ ತೆಗೆದುಕೊಂಡ ಪರಿಣಾಮ ಗೆಲುವು ಸುಲಭವಾಗಿ ದಕ್ಕಿತು.
ಬಿಜೆಪಿ ನಾಯಕರು ಚಾಮರಾಜನಗರ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಹಾಗೂ ಸ್ಧಳೀಯ ಮಟ್ಟದಲ್ಲಿ ನಾಯಕತ್ವದ ಕೊರತೆಯಿಂದಾಗಿ, ಸಮರ್ಥವಾಗಿ ಚುನಾವಣೆಯನ್ನು ಎದುರಿಸಲು ಸಾಧ್ಯವಾಗದೆ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಸೋಲು ಅನುಭವಿಸಿದ್ದಾರೆ.ಪ್ರತಿ ಸುತ್ತಿನಲ್ಲೂ ಸುನಿಲ್ ಬೋಸ್ ಮುನ್ನಡೆ:
ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಪ್ರತಿ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ್ದು 1ನೇ ಸುತ್ತಿನಲ್ಲಿ 5263, 2ನೇ ಸುತ್ತಿನಲ್ಲಿ 10339, 3ನೇ ಸುತ್ತಿನಲ್ಲಿ 3554, 4ನೇ ಸುತ್ತಿನಲ್ಲಿ 2584, 5ನೇ ಸುತ್ತಿನಲ್ಲಿ 6616, 6ನೇ ಸುತ್ತಿನಲ್ಲಿ 4101, 7ನೇ ಸುತ್ತಿನಲ್ಲಿ 11510, 8ನೇ ಸುತ್ತಿನಲ್ಲಿ 17070, 9ನೇ ಸುತ್ತಿನಲ್ಲಿ 10 926, 10ನೇ ಸುತ್ತಿನಲ್ಲಿ 13512, 11ನೇ ಸುತ್ತಿನಲ್ಲಿ 4479, 12ನೇ ಸುತ್ತಿನಲ್ಲಿ 15031, 13ನೇ ಸುತ್ತಿನಲ್ಲಿ 12503, 14ನೇ ಸುತ್ತಿನಲ್ಲಿ 16129, 15ನೇ ಸುತ್ತಿನಲ್ಲಿ 13590, 16ನೇ ಸುತ್ತಿನಲ್ಲಿ 13611,17ನೇ ಸುತ್ತಿನಲ್ಲಿ 10983, 18ನೇ ಸುತ್ತಿನಲ್ಲಿ 7307, 19ನೇ ಸುತ್ತಿನಲ್ಲಿ 410, 20ನೇ ಸುತ್ತಿನಲ್ಲಿ 941, 21ನೇ ಸುತ್ತಿನಲ್ಲಿ 303 ಅಂತರದ ಮುನ್ನಡೆ ಸಾಧಿಸುವ ಮೂಲಕ ಬಿಜೆಪಿಯ ಬಾಲರಾಜು ಅವರನ್ನು ಸೋಲಿಸಿದ್ದಾರೆ.