ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಅಪೂರ್ಣವಾಗಿರುವ ಕಾಮಗಾರಿ ಮುಂದುವರಿಸಬೇಕು ಎಂಬುದು ನಮ್ಮ ಆಶಯ. ಅಲ್ಲಿ ಮೂರ್ತಿಯನ್ನು ಪೂರ್ಣಗೊಳಿಸಿ ಸ್ಥಾಪಿಸಬೇಕು ಎಂದು ಸಿಎಂ ಹೇಳಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ದೇವರ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಬರುತ್ತಿರುವ ಕಾರ್ಕಳದ ಶಾಸಕ ಸುನಿಲ್ ಕುಮಾರ್, ಪರಶುರಾಮ ಥೀಮ್ ಪಾರ್ಕ್ ಮೂಲಕ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಮೋಸ ಮಾಡಿದ್ದಾರೆ. ಈಗ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಆಡುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದರು.ಗುರುವಾರ ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸುನಿಲ್ ಕುಮಾರ್ ಅವರು ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದವರು, ಈಗ ಪರಶುರಾಮನಿಗೆ ಮೋಸ ಮಾಡಿದ್ದಾರೆ. ಥೀಮ್ ಪಾರ್ಕ್‌ನಲ್ಲಿ ನಿರ್ಮಿಸಿದ್ದ ಪರಶುರಾಮನ ಮೂರ್ತಿ ಕಂಚಿನದ್ದೋ ಅಥವಾ ಫೈಬರಿನದ್ದೊ ಎಂಬುದು ಜಗಜ್ಜಾಹಿರಾಗಿದೆ. ಬಿಜೆಪಿಗೆ ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿ ಸತ್ಯ ಮಾಡುವುದು ಕರಗತವಾಗಿದೆ ಎಂದವರು ತೀವ್ರ ವಾಗ್ದಾಳಿ ನಡೆಸಿದರು.ಇನ್ನಾದರೂ ಉಡುಪಿ ಜಿಲ್ಲೆಯ ಜನತೆ ಎಚ್ಚೆತ್ತುಕೊಳ್ಳಬೇಕು. ಬಿಜೆಪಿಯವರು ದೇವರನ್ನೇ ಬಿಡ್ಲಿಲ್ಲ. ಇನ್ನು ಮನುಷ್ಯರು ಯಾವ ಲೆಕ್ಕ? ಹಿಂದಿನ ಬಿಜೆಪಿ ಆಡಳಿತದ ಕೊನೆಯ ಕ್ಯಾಬಿನೆಟ್ ಸಭೆಯಲ್ಲಿ ಗೋಮಾಳ ಭೂಮಿಯಾದ್ದರಿಂದ ಅಲ್ಲಿ ಪರಶುರಾಮ ಥೀಮ್ ಪಾರ್ಕ್ ಸ್ಥಾಪನೆ ಮಾಡಬಾರದು ಎಂದು ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೂ ಸ್ಥಾಪಿಸಲಾಗಿದೆ. ಈಗ ಅಲ್ಲಿ ಅಪೂರ್ಣವಾಗಿರುವ ಕಾಮಗಾರಿ ಮುಂದುವರಿಸಬೇಕು ಎಂಬುದು ನಮ್ಮ ಆಶಯ. ಅಲ್ಲಿ ಮೂರ್ತಿಯನ್ನು ಪೂರ್ಣಗೊಳಿಸಿ ಸ್ಥಾಪಿಸಬೇಕು ಎಂದು ಸಿಎಂ ಹೇಳಿದ್ದಾರೆ ಎಂದು ಸಚಿವೆ ಹೇಳಿದರು.
ಬೈಂದೂರಿನಲ್ಲಿ ಕಾಂಗ್ರೆಸ್ - ಬಿಜೆಪಿ ಜಟಾಪಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವೆ, ಶಾಸಕರ ಹಕ್ಕುಚ್ಯುತಿ ಎಂದರೇನು ಎಂದು ಎರಡು ಬಾರಿ ಶಾಸಕಿಯಾದ ನನಗೂ ಗೊತ್ತು. ಅಧಿಕಾರದ ಲಾಭ, ದುರ್ಲಾಭದ ಬಗ್ಗೆ ನನಗೂ ಸಾಮಾನ್ಯ ಜ್ಞಾನ ಇದೆ. ಯಾರ ಹಕ್ಕನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.ಸರ್ಕಾರಿ ಅಧಿಕಾರಿಗಳ ಸಭೆ ಎಲ್ಲಿ ಕರೀಬೇಕು, ಅಲ್ಲಿಯೇ ಕರೆಯಬೇಕು, ಆಗ ಏನೂ ತೊಂದರೆ ಆಗುವುದಿಲ್ಲ. ಆದರೆ ತನ್ನ ಖಾಸಗಿ ಸ್ಥಳದಲ್ಲಿ ಅಧಿಕಾರಿಗಳನ್ನು ಸಭೆಗೆ ಕರೆದರೆ ತೊಂದರೆಯಾಗುತ್ತದೆ. ಸರ್ಕಾರಿ ಕಾರ್ಯಕ್ರಮಗಳು ಸರ್ಕಾರಿ ಕಚೇರಿಯಲ್ಲಿ ಆಗುವುದೇ ಒಂದು ಶಿಷ್ಟಾಚಾರ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆಗೆ ಸಲಹೆ ನೀಡಿದರು.
----ನಮ್ಮ ಸಿಎಂ ಹುಲಿ ಇದ್ದಂತೆಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣದ ವೇಳೆ ಬುಲೆಟ್ ಪ್ರೂಫ್ ತೆಗೆಸಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಕರ್ನಾಟಕ ರಾಜ್ಯ ಈಗ ಶಾಂತಿ ಪ್ರಿಯವಾಗಿದೆ. ಈ ರಾಜ್ಯದಲ್ಲಿ ಬುಲೆಟ್ ಪ್ರೂಫ್ ಬೇಕಾ? ನಮ್ಮ ಸಿದ್ದರಾಮಯ್ಯನವರು ಯಾವತ್ತೂ ಸ್ಟ್ರಾಂಗ್, ಅದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಸಿದ್ದರಾಮಯ್ಯ ಅವರಿಗೆ ಹುಲಿ ಎಂದು ಹೆಸರು ಬಂದಿರುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.