ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಕೊಡಗಿನಲ್ಲಿರುವ ವಿಶೇಷಚೇತನರು ಮತ್ತು ಅವರ ಪಾಲಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಸುಂಟಿಕೊಪ್ಪದ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರ ಹಾಗೂ ಮಡಿಕೇರಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಹಯೋಗದಲ್ಲಿ ನಡೆಯಿತು.ಬುಧವಾರ ಸುಂಟಿಕೊಪ್ಪದ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರ ಹಾಗೂ ಮಡಿಕೇರಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಹಯೋಗದಲ್ಲಿ ಆರೋಗ್ಯ ತಪಾಸಣಾ ಶಿಬಿರವು ಸುಂಟಿಕೊಪ್ಪದ ಮಾದಾಪುರ ರಸ್ತೆಯಲ್ಲಿರುವ ಸ್ವಸ್ಥ ಶಾಲೆಯಲ್ಲಿ ಸಂಪನ್ನಗೊಂಡಿತು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ವಿಶಾಲ್ ಕುಮಾರ್ ಮಾತನಾಡಿ, ವಿಶೇಷಚೇತನರು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್ ಹೊಂದಿಕೊಂಡಲ್ಲಿ ಆಸ್ಪತ್ರೆಗಳಲ್ಲಿ ರು. 5 ಲಕ್ಷಗಳ ವರೆಗಿನ ಉಚಿತ ಚಿಕಿತ್ಸೆಯ ಪ್ರಯೋಜನ ಪಡೆದುಕೊಳ್ಳಬಹುದೆಂದರು. ವಿಶೇಷಚೇತನರಿಗಾಗಿ ಇರುವ ವಿಶೇಷ ಗುರುತಿನ ಚೇಟಿಯ ಮಹತ್ವದ ಬಗ್ಗೆ ತಿಳಿಸಿ, ವಿಶೇಷ ಗುರುತಿನ ಚೇಟಿ ಮಾಡಿಸದೇ ಇದ್ದವರು, ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿ.ಆರ್.ಡಬ್ಲ್ಯು.ಗಳ ಮುಖಾಂತರ ನೋಂದಾಯಿಸಿ ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ತಪಾಸಣೆಗೊಳಗಾಗಿ ಪಡೆದುಕೊಳ್ಳಬೇಕೆಂದು ತಿಳಿಸಿದರು.ವಿರಾಜಪೇಟೆಯ ಆಶೀರ್ವಾದ್ ವೈದ್ಯಕೀಯ ಸಂಸ್ಥೆ ಮುಖ್ಯಸ್ಥ, ಶಿಶುತಜ್ಞ ಡಾ. ಗೌರವ್ ಅಯ್ಯಪ್ಪ ಮಾತನಾಡಿ, ನವಜಾತ ಶಿಶುವಿನ ಜನನದ ಮೊದಲ ನಿಮಿಷದ ಮಹತ್ವ ಮತ್ತು ಆ ಸಮಯದ ನಿರ್ಲಕ್ಷ್ಯದಿಂದ ಆಗುವ ಪರಿಣಾಮಗಳ ಬಗ್ಗೆ ಎಚ್ಚರದ ಅರಿವು ಮೂಡಿಸುವ ಅಗತ್ಯತೆ ಬಗ್ಗೆ ಮಾಹಿತಿ ನೀಡಿದರು.
ದಿ ಕೂರ್ಗ್ ಫೌಂಡೇಷನ್‌ನ ಟ್ರಸ್ಟಿ ಗಂಗಾ ಚಂಗಪ್ಪ ಸ್ವಸ್ಥ ಸಂಸ್ಥೆಯ ಸ್ಥಾಪನೆಯ ಸಂದರ್ಭ ಮತ್ತು ಅದರ ಉದ್ದೇಶದ ಬಗ್ಗೆ ಮಾತನಾಡಿದರು.ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ ಅವರು 2010ರಿಂದ ಸ್ವಸ್ಥದ ಸಮುದಾಯ ಆಧಾರಿತ ಪುನರ್ವಸತಿ ಕೇಂದ್ರದ ಮುಖಾಂತರ ಕೊಡಗು ಜಿಲ್ಲೆಯಲ್ಲಿರುವ ವಿಶೇಷಚೇತನರನ್ನು ಗುರುತಿಸಿ, ಅವರಿಗೆ ವ್ಯದ್ಯಕೀಯ ಸೌಲಭ್ಯಗಳ ಅರಿವು ಮತ್ತು ಅವುಗಳ ನೇರ ಬಳಕೆಗೆ ಪ್ರೇರೇಪಿಸುವ ಪ್ರಯತ್ನದ ಬಗ್ಗೆ ವಿವರಿಸಿದರು. ಖಾಸಗಿ ಮತ್ತು ಸರ್ಕಾರಿ ವ್ಯದ್ಯಕೀಯ ಕಾರ್ಯಗಳ ನಡುವೆ ಸಹಭಾಗಿತ್ವದ ಮಾದರಿ ಇದ್ದಲ್ಲಿ, ಫಲಾನುಭವಿಗಳು ಪಡೆಯುವ ವ್ಯದ್ಯಕೀಯ ಸೌಲಭ್ಯಗಳ ಪ್ರಯೋಜನ ದೀರ್ಘಕಾಲಿಕವಾಗಿರುತ್ತದೆ ಎಂದು ತಿಳಿಸಿದರು.
ಡಾ. ಶ್ವೇತಾ (ಕಿವಿ ಮೂಗು ಗಂಟಲು ವಿಭಾಗ ಮುಖ್ಯಸ್ಥರು), ಡಾ. ಕೃಪಾಲಿನಿ (ನೇತ್ರವಿಜ್ಞಾನ ವಿಭಾಗ ಮುಖ್ಯಸ್ಥರು), ಡಾ. ಹರ್ಷವರ್ಧನ್ (ಚರ್ಮಶಾಸ್ತ್ರ ವಿಭಾಗ ಮುಖ್ಯಸ್ಥರು), ಡಾ. ವಿನಯ್ (ಮೂಳೆ ಮತ್ತು ಕೀಲು ಶಸ್ತçಚಿಕಿತ್ಸಕರು), ಡಾ. ಸಲ್ಮಾ (ಮಕ್ಕಳ ತಜ್ಞರು), ಕು. ಕಾವ್ಯ (ನೇತ್ರ ತಜ್ಞರು), ಶ್ರೀ ರಮೇಶ್ (ಮನಶಾಸ್ತ್ರಜ್ಞರು) ಮತ್ತು ಮೋಹನ್‌ಲಾಲ್ (ಶ್ರವಣಶಾಸ್ತ್ರಜ್ಞರು) ಇವರೊಂದಿಗೆ ಸಲಹೆ ಮತ್ತು ಸಮಾಲೋಚನೆಯ ಅವಕಾಶವನ್ನು 96 ಫಲಾನುಭವಿಗಳು ಶಿಬಿರದಲ್ಲಿ ಪಡೆದರು.ವನಿತಾ ಚೆಂಗಪ್ಪ ಸ್ವಾಗತಿಸಿದರು, ಮಂಜುಳಾ ವಂದಿಸಿದರು. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.