ವಿನ್ಸೆಂಟ್ ಎಂ.ಬಿ.
ಕೊಡಗಿನ ಕೊಲ್ಕೊತ್ತಾ ಹಾಗೂ ಫುಟ್ಬಾಲ್ ಕಾಶಿ ಎಂದು ಬಣ್ಣಿಸಲಾಗುವ ಸುಂಟಿಕೊಪ್ಪ ಸಹಿತ ಕೊಡಗು ಜಿಲ್ಲೆಯಲ್ಲಿ ಸೂಕ್ತ ಆಟದ ಮೈದಾನದ ಕೊರತೆ ಇದೆ. ಸುಂಟಿಕೊಪ್ಪದ ಸರ್ಕಾರಿ (ಜಿಎಂಪಿ) ಶಾಲಾ ಮೈದಾನದಲ್ಲೆ ಇಂದಿಗೂ ಕ್ರೀಡಾ ಚಟುವಟಿಕೆ ಆಯೋಜಿಸಲಾಗುತ್ತಿದ್ದು, ಉದಯೋನ್ಮುಖ ಕ್ರೀಡಾಪಟುಗಳ ಅಭ್ಯಾಸಕ್ಕೆ ಸುಸಜ್ಜಿತ ಸ್ಥಳದ ಕೊರತೆ ಇದೆ.
ಸುಂಟಿಕೊಪ್ಪ ಹೋಬಳಿ ಫುಟ್ಬಾಲ್‌ಗೆ ಸೀಮಿತ ಆಗಿಲ್ಲ. ಇಲ್ಲಿನವರು ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಫುಟ್ಬಾಲ್‌ನಲ್ಲೇ ಕ್ರೀಡಾಬದುಕು ಪ್ರಾರಂಭಿಸಿ ಒಲಂಪಿಕ್ ಮತ್ತು ವಿಶ್ವಕಪ್ ಹಾಕಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿ ಗೆಲ್ಲಿಸಿದ ಪದ್ಮಶ್ರೀ ಪುರಸ್ಕೃತ ಡಾ.ಮೊಳ್ಳೇರ ಪಿ.ಗಣೇಶ್, ಟೆನ್ನಿಸ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಮಚ್ಚಂಡ ರೋಹನ್ ಬೋಪಣ್ಣ, ಬಾಸ್ಕೆಟ್‌ಬಾಲ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ ಪಟ್ಟೆಮನೆ ನವನೀತ, ಜಿಲ್ಲೆಯಲ್ಲಿ ಪುಟ್ಬಾಲ್ ಅಶೋಸಿಯೇಶನ್ ಹುಟ್ಟುಹಾಕಿದ ಪಿ.ಕೆ.ಜಗದೀಶ್ ರೈ, 25 ವರ್ಷಗಳಿಗೂ ಹೆಚ್ಚಿನ ಕಾಲ ತನ್ನ ತಂದೆಯವರ ನೆನಪಿನಲ್ಲಿ ರಾಜ್ಯ ಮಟ್ಟದ ಗೋಲ್ಡ್ ಕಪ್ ಪುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಕೊಂಡು ಬರುತ್ತಿರುವ ಬೆಟ್ಟಗೇರಿ ತೋಟದ ಮಾಲೀಕರಾದ ಡಿ.ವಿನೋದ್ ಶಿವಪ್ಪ ಮತ್ತಿತರರು ಈ ಭಾಗದವರು.ಸಾಮಾನ್ಯವಾಗಿ ಫುಟ್ಬಾಲ್‌ಗೆ ಸುಂಟಿಕೊಪ್ಪದಲ್ಲಿ ಅತೀ ಹೆಚ್ಚು ಅಭಿಮಾನಿಗಳು ಇದ್ದಾರೆ. ಈ ಹಿನ್ನೆಲೆಯಲ್ಲಿ ಸುಂಟಿಕೊಪ್ಪದಲ್ಲಿ 11 ಮಂದಿ ಆಟಗಾರರು ಒಂದು ತಂಡದಲ್ಲಿ ಆಡಲು ಸಾದ್ಯವಾಗುವಂತಹ ಮೈದಾನ ಹಾಗೂ ಪ್ರೇಕ್ಷಕರೂ ಕುಳಿತುಕೊಳ್ಳಲು ಅನುಕೂಲವಾಗುವ ಗ್ಯಾಲರಿ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಒಳಗೊಳ್ಳುವ ಸ್ಥಳಾವಕಾಶ ಬೇಕು. ಈಗಿನ ಶಾಲಾ ಮೈದಾನದ ಹೊರತು ಸುಸಜ್ಜಿತ ಜಾಗ ಗುರುತಿಸುವ ಕಾರ್ಯವೂ ಆಗಬೇಕು. ಸುಂಟಿಕೊಪ್ಪ ಶಾಲಾ ಮೈದಾನದಲ್ಲಿ ಯಾವುದೇ ವಯೋಮಾನದ ಪಂದ್ಯಾವಳಿ ನಡೆದರೂ ಸಹಸ್ರಾರು ಕ್ರೀಡಾಭಿಮಾನಿಗಳು ಸೇರಿಯೇ ಸೇರುತ್ತಾರೆ. ಈ ಭಾಗದಲ್ಲಿ ಹಿರಿಯ ಮತ್ತು ಕಿರಿಯ ಮಕ್ಕಳು ಅತೀವ ಫುಟ್ಬಾಲ್ ಆಸಕ್ತಿ ಹೊಂದಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳು 15 ಬಾರಿ ರಾಜ್ಯ ಮಟ್ಟದವರೆಗೂ, 10 ಸಲ ರಾಷ್ಟ್ರಮಟ್ಟದ ವರೆಗೂ ತೆರಳಿ ಸಾಧನೆ ಮಾಡಿ ತೋರಿಸಿದ್ದಾರೆ. 1960ರ ದಶಕದಿಂದಲೂ ಈ ಮೈದಾನಲ್ಲೇ ಫುಟ್ಬಾಲ್ ಸೇರಿದಂತೆ ಇತರೆ ಕ್ರೀಡಾಕೂಟಗಳು ನಡೆದುಕೊಂಡು ಬಂದಿವೆ. ಬದಲಾದ ಕಾಲಘಟ್ಟದಲ್ಲಿ ಸಮಕಾಲೀನ ಮೈದಾನ ಈಗಿನ ಮಕ್ಕಳಿಗೆ ಅಗತ್ಯವಾಗಿದೆ. ಎಲ್ಲಾ ಕ್ರೀಡೆಗಳೂ ಟರ್ಫ್ ಮೈದಾನದಲ್ಲಿ ನಡೆಯುತ್ತಿದ್ದರೂ ಸುಂಟಿಕೊಪ್ಪದ ಮೈದಾನದಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಕಲ್ಲು ಮಣ್ಣು ಮಿಶ್ರಿತ ನೆಲ ಹಾಗೂ ಬರಿಗಾಲಿನಲ್ಲಿ ಆಡುವಂತಾಗಿದೆ.ಈಗಿನ ಮೈದಾನಕ್ಕೆ ಮಿತಿಗಳಿವೆ:
1996 ರಲ್ಲಿ ಬ್ಲೂಬಾಯ್ಸ್ ಯೂತ್ ಕ್ಲಬ್‌ನವರು ಅಂದಿನ ಹಿರಿಯ ಫುಟ್ಬಾಲ್ ಪ್ರೇಮಿ ಕೆ.ಎಂ.ಇಬ್ರಾಹಿಂ ಮಾಸ್ಟರ್ ಅವರ ಮೂಲಕ ಕ್ರೀಡಾ ಪ್ರೇಮಿಯಾಗಿರುವ ಬೆಟ್ಟಗೇರಿ ಸಮೂಹ ತೋಟಗಳ ಮಾಲೀಕ ಡಿ.ವಿನೋದ್ ಶಿವಪ್ಪ ಮನವೊಲಿಸಿ ಅವರ ತಂದೆಯ ಹೆಸರಿನಲ್ಲಿ ರಾಜ್ಯ ಮಟ್ಟದ ಡಿ.ಶಿವಪ್ಪ ಸ್ಮಾರಕ ಗೋಲ್ಡ್ ಕಪ್ ಪುಟ್ಬಾಲ್ ಪಂದ್ಯಾವಳಿ ಆರಂಭಿಸಿದರು. ಈ ಪಂದ್ಯ ಈಗಾಗಲೇ 25 ವರ್ಷಗಳನ್ನು ಪೂರೈಸಿ ಮುಂದುವರಿದಿದೆ.
-ಪಿ.ಕೆ.ಜಗದೀಶ್, ರಾಜ್ಯ ಫುಟ್ಬಾಲ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ.ಸುಂಟಿಕೊಪ್ಪ ಫುಟ್ಬಾಲ್ ಕ್ರೀಡೆ ಮತ್ತು ಮೈದಾನಕ್ಕೆ ಏಳು ದಶಕಗಳ ಇತಿಹಾಸವಿದ್ದು ನಾನು 1970 ದಶಕದಿಂದ ನೋಡುತ್ತಾ ಬಂದಿದ್ದೇನೆ. 1960ರಲ್ಲಿ ಭಾರತ್ ಫುಟ್ಬಾಲ್, ಅನಂತರ ಕಾಮಧೇನು ಫುಟ್ಬಾಲ್ ಕ್ಲಬ್ ಅಸ್ತಿತ್ವದಲ್ಲಿದ್ದವು. 1974ರಲ್ಲಿ ಬ್ಲೂಬಾಯ್ಸ್ ಯೂತ್ ಉದಯವಾಯಿತು ನಾನು ತಾಲೂಕು ಪಂಚಾಯಿತಿ ಸದಸ್ಯನಾಗಿ ಉಪಾಧ್ಯಕ್ಷನಾಗಿ ಸಾಕಷ್ಟು ಅನುದಾನ ತಂದಿದ್ದೇನೆ. ಆದರೆ ಸರ್ಕಾರದ ಕೆಲವೊಂದು ನೀತಿ ನಿಯಮಗಳ ಹಿನ್ನಲೆಯಲ್ಲಿ ನಾವೆಷ್ಟು ಸಾಧಿಸುವ ಉದ್ದೇಶ ಹೊಂದಿದ್ದೆವೋ, ಅವೆಲ್ಲವನ್ನು ಸಾಧಿಸಲು ಆಗಲಿಲ್ಲ.
-ಕೆ.ಎಂ.ಆಲಿಕುಟ್ಟಿ, ಬ್ಲೂಬಾಯ್ಸ್ ಸಂಘದ ಅಧ್ಯಕ್ಷ.