ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ

KannadaprabhaNewsNetwork |  
Published : Dec 21, 2024, 01:20 AM IST
ಚಿತ್ರ.1: ಗುರುವಾರ ಆಯೋಜಿಸಿದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿರುವ ಸದಸ್ಯರು. | Kannada Prabha

ಸಾರಾಂಶ

ಸುಂಟಿಕೊಪ್ಪ ಗ್ರೇಡ್‌ 1 ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಾರ್ವಜನಿಕರ ಅರ್ಜಿಗಳು ವಿಲೇವಾರಿಗೊಳ್ಳದೇ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ ಎಂದು ಆಕ್ರೋಶ ವ್ಯಕ್ತವಾಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಗುರುವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ 3 ತಿಂಗಳಿನಿಂದ ಸಾಮಾನ್ಯ ಸಭೆ ಸರಿಯಾಗಿ ನಡೆಯದೆ ಸಾರ್ವಜನಿಕರ ಅರ್ಜಿಗಳು ವಿಲೇವಾರಿಗೊಳ್ಳದೆ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ.

ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ 20ಸದಸ್ಯ ಬಲವನ್ನು ಹೊಂದಿದೆ. ಈ ಪಂಚಾಯಿತಿಯಲ್ಲಿ ಗುರುವಾರದ ಸಭೆಗೆ ಕೇವಲ 9 ಮಂದಿ ಸದಸ್ಯರಾದ ಪಿ.ಆರ್.ಸುನಿಲ್‌ಕುಮಾರ್, ಮಂಜುನಾಥ್, ಬಿ.ಎಂ.ಸುರೇಶ್, ಪಿ.ಎಫ್.ಸಬಾಸ್ಟೀನ್, ಶಾಂತಿ, ವಸಂತಿ, ಮಂಜುಳ, ಗೀತಾ ಹಾಗೂ ಹಸೀನಾ ಆಗಮಿಸಿದ್ದರು.

ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಪ್ರಸಾದ್ ಕುಟ್ಟಪ್ಪ, ರಫೀಕ್‌ಖಾನ್, ಜೀನಾಸುದ್ದಿನ್, ಶಬ್ಬೀರ್, ಆಲಿಕುಟ್ಟಿ ಐ.ಸೋಮನಾಥ್, ಮಂಗಳ, ರೇಷ್ಮಾ, ವನಿತ ಹಾಗೂ ನಾಗರತ್ನ ಅವರು ಗೈರು ಹಾಜರಾಗಿದ್ದು ಸಭೆ ಮುಂದೂಡಲಾಯಿತು. ಕಳೆದ 3 ತಿಂಗಳಿನಿಂದ 2 ಸಾಮಾನ್ಯ ಸಭೆ ಹಾಗೂ 1 ವಿಶೇಷಸಭೆಯನ್ನು ಆಯೋಜಿಸಲಾಗಿದ್ದು ಕೆಲವು ವೈಯಕ್ತಿಕ ಪ್ರತಿಷ್ಠೆಗೋಸ್ಕರ ಸಾಮಾನ್ಯ ಸಭೆ ಮುಂದೂಡುತ್ತಿರುವುದು ಪಂಚಾಯಿತಿ ಆಡಳಿತ ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕಳೆದ 1 ವರ್ಷದಿಂದ ಸುಲಲಿತವಾಗಿ ಪಂಚಾಯಿತಿ ಸಾಮಾನ್ಯ ಸಭೆ ನಡೆಯುತ್ತಿದ್ದು, ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ಸಾಮಾನ್ಯ ಸಭೆ ಪರಿಪೂರ್ಣವಾಗಿ ನಡೆಯಿತು. ಆದರೆ ಅಕ್ಟೋಬರ್ ತಿಂಗಳಿನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ಖಾಸಗಿ ಆಸ್ಪತ್ರೆಯೊಂದಕ್ಕೆ ನಿರಾಕ್ಷೇಪಣಾ ಪತ್ರ ನೀಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿ ಸಭೆಯನ್ನು ಬಹಿಷ್ಕರಿಸಿ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಪರಿಣಾಮ ಸಭೆ ರದ್ದುಪಡಿಸಲಾಯಿತು. ಅನಂತರ ಸಾಮಾನ್ಯ ಸಭೆ ನಡೆಯದೆ ಗ್ರಾಮಸ್ಥರ 50ಕ್ಕೂ ಅಧಿಕ ಅರ್ಜಿಗಳು ವಿಲೇವಾರಿಯಾಗದೆ ಉಳಿದುಕೊಂಡಿತ್ತು. ಪಂಚಾಯಿತಿಯಿಂದ ದೊರೆಯಬೇಕಾದ ಅರ್ಜಿ ದಾಖಲಾತಿಗಳು ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ಕತ್ತರಿ ಬಿದ್ದಿತು.

ಈ ಭಾರಿ 40ಕ್ಕೂ ಮಿಕ್ಕಿ ಅರ್ಜಿಗಳು ಬಂದಿದೆ. ಒಟ್ಟು 90 ಅರ್ಜಿಗಳು ಸಾಮಾನ್ಯ ಸಭೆಯ ಅನುಮೋದನೆಗಾಗಿ ಅಲ್ಲಿಯೇ ಉಳಿದುಕೊಳ್ಳುವಂತಾಗಿದೆ. ಗುರುವಾರವು ಸಭೆ ನಡೆಯದ ಹಿನ್ನೆಲೆಯಲ್ಲಿ ಅರ್ಜಿಗಳು ವಿಲೇವಾರಿಗೊಳಿಸಲಾಗದೆ ಅರ್ಜಿಯನ್ನು ಸಲ್ಲಿಸಿದ್ದ ಗ್ರಾಮಸ್ಥರು ಮತ್ತಷ್ಟು ದಿನಗಳ ಕಾಲ ಕಾಯುವಂತಾಗಿದೆ ಎಂದು ಅರ್ಜಿದಾರರು ನೋವನ್ನು ತೋಡಿಕೊಂಡರು.

ಅಕ್ಟೋಬರ್ ತಿಂಗಳಿನಲ್ಲಿ ಕರೆಯಲಾದ ಸಭೆಯಲ್ಲಿ 14 ಮಂದಿ ಸದಸ್ಯರು ಹಾಜರಿದ್ದು, ಸಭೆಯಲ್ಲಿ ಕೆಲವು ನಿರ್ಣಯಗಳನ್ನು ಬಹಿಷ್ಕರಿಸಿ ಹೊರನಡೆದ ಪ್ರಸಂಗ ನಡೆಯಿತು. ನಂತರದ ದಿನಗಳಲ್ಲಿ ಒಂದು ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು. ಆ ಸಭೆಗೆ 8 ಮಂದಿ ಸದಸ್ಯರು ಹಾಜರಿದ್ದ ಕಾರಣ ಸಭೆಯನ್ನು ಮುಂದೂಡಲಾಗಿದೆ ಗ್ರಾ.ಪಂ.ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಹೇಳಿದರು.

ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಕೆಲ ಸದಸ್ಯರಿಗೆ ಸುಂಟಿಕೊಪ್ಪದ ಪ್ರಮುಖ ಸಮಸ್ಯೆಗಳು ಕಣ್ಣಿಗೆ ಕಾಣದಂತಾಗಿದೆ. ಆರೋಗ್ಯ ಕೇಂದ್ರದ ಸುತ್ತ ಮುತ್ತಲು ಕಾಡು ಗಿಡಗಂಟಿಗಳು ಬೆಳೆದು ನಿಂತು ಹಾವು ಮುಂಗುಸಿಗಳ ಆವಾಸ ಸ್ಥಾನವಾಗಿದೆ. ಹಗಲು ಮತ್ತು ರಾತ್ರಿ ಪಾಳಯದಲ್ಲಿ ವೈದ್ಯಾಧಿಕಾರಿಗಳು ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಜನಸಾಮಾನ್ಯರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ. ಗ್ರಾಮದ ಸ್ವಚ್ಛತೆಗೆ ಆದ್ಯತೆ ಕಲ್ಪಿಸುತ್ತಿಲ್ಲ. ಗ್ರಾಮಸ್ಥರಿಗೆ ಮನೆ ಕಟ್ಟಲು ಪರವನಾಗಿ, ನೂತನ ವಾಣಿಜ್ಯ ಸಂಕೀರ್ಣ ಪರವಾನಗಿ, ಭೂದಾಖಲೆಯ 9 ಮತ್ತು 11ಎ ದಾಖಲಾತಿ ನೀಡಬೇಕಾಗಿದ್ದು, ಸಾಮಾನ್ಯ ಸಭೆ ನಡೆಯದೆ ಇರುವುದರಿಂದ ತೊಡಕುಂಟಾಗಿದೆ. ಸದಸ್ಯರಿಗೆ ಸ್ವಹಿತಾಸಕ್ತಿಗಿಂತ ಜನ ಸಾಮಾನ್ಯರ ಸಮಸ್ಯೆ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಪ್ರತಿ ತಿಂಗಳು ಸಾಮಾನ್ಯ ಸಭೆ ನಡೆಸುತ್ತಿದ್ದು, ಕಳೆದ ತಿಂಗಳು ಕೆಲವು ಸದಸ್ಯರ ಅಸಹಕಾರದಿಂದ ಸಭೆ ಮುಂದೂಡಲಾಗಿತ್ತು. ಕಳೆದ 3 ತಿಂಗಳಿನಿಂದ 2 ಮಾಸಿಕ ಸಭೆ ವಿಶೇಷ ಸಭೆ ಕರೆಯಲಾಗಿತ್ತು. ಆದರೆ ಸದಸ್ಯರು ಸಭೆಗೆ ಗೈರು ಹಾಜರಾಗುವ ಮೂಲಕ ಸಾರ್ವಜನಿಕರ ಅರ್ಜಿಗಳನ್ನು, ದಾಖಲಾತಿಗಳನ್ನು ವಿಲೇವಾರಿಗೊಳಿಸುವುದು ಕಷ್ಟಸಾಧ್ಯವಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಸಮಸ್ಯೆಗಳ ಚರ್ಚಿಸಲು ಸಭೆಗೆ ಆಗಮಿಸದ ಸದಸ್ಯರ ಅಸಹಕಾರ ತೋರುತ್ತಿರುವ ಹಿನ್ನಲೆಯಲ್ಲಿ ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಮುಂದಿನ ಹಂತದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!