ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಲಯನ್ಸ್ ಸಂಸ್ಥೆಯ ಸದಸ್ಯರು ಹಲವಾರು ಸಮಾಜಮುಖಿ ಕೆಲಸ ಮಾಡಿದ್ದರೂ ಕೂಡ ಪರಿಪೂರ್ಣತೆಯ ಗುಣ ಇಲ್ಲದಿದ್ದರೆ ಯಾವ ಕೆಲಸವು ತೃಪ್ತಿ ತರುವುದಿಲ್ಲ ಎಂದು ಲಯನ್ಸ್ ಸಂಸ್ಥೆಯ ಅಧಿಕಾರಿ ರೊನಾಲ್ಡ್ ಗೋಮ್ಸ್ ಅಭಿಪ್ರಾಯಪಟ್ಟರು.ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಗುಂಡುಗುಟ್ಟಿ ಮಂಜನಾಥಯ್ಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುಂಟಿಕೊಪ್ಪ ಲಯನ್ಸ್ ಸಂಸ್ಥೆಯ ಪದಗ್ರಹಣ ಕಾರ್ಯಕ್ರಮ ಉದ್ಘಾಟನೆ ಮತ್ತು ನೂತನ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.ಸಂಸ್ಥೆಯ ಸದಸ್ಯರು ಸೇವಾ ಮನೋಭಾವ ಹೊಂದಿದ್ದರೂ ಕೂಡ ಪರಿಪೂರ್ಣರಾಗಬೇಕಾದರೆ ಮೊದಲು ನೀವು ಬದಲಾಗಬೇಕು, ಹೊಂದಾಣಿಕೆಯ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಯಾವುದಕ್ಕೂ ಅಪೇಕ್ಷಿಸಬಾರದು, ಕೆಲಸದಲ್ಲಿ ಆತ್ಮವಿಶ್ವಾಸ ಹೊಂದಿರಬೇಕು, ಪ್ರತಿ ವ್ಯಕ್ತಿ ಅಥವಾ ವಸ್ತುವಿನಲ್ಲಿ ಸಂತೃಪ್ತಿ ಕಾಣಬೇಕು, ತಾಳ್ಮೆ ಇರಬೇಕು ಎಂದು ತಿಳಿಸಿದರು.ನಂತರ ನಿರ್ಗಮಿತ ಅಧ್ಯಕ್ಷ ಶಶಾಂಕ್ ಅವರು ನೂತನ ಅಧ್ಯಕ್ಷ ರಕ್ಷಿತ್ ಚೆಟ್ಟಿಮಾಡ ಅವರಿಗೆ ಸಂಸ್ಥೆಯ ಅಧಿಕಾರವನ್ನು ಹಸ್ತಾಂತರಿಸಿದರು.ನೂತನ ಅಧ್ಯಕ್ಷ ರಕ್ಷಿತ್ ಮಾತನಾಡಿ, ಈ ಸಂಸ್ಥೆ ನಿರಂತರವಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದು, ಮುಂದೆಯೂ ಅದು ಇನ್ನಷ್ಟು ವಿಸ್ತಾರವಾಗಲಿದೆ. ಈ ಕಾರ್ಯಕ್ಕೆ ಹಿರಿಯ ಸದಸ್ಯರು, ಪದಾಧಿಕಾರಿಗಳು ಕೈ ಜೋಡಿಸಬೇಕು ಎಂದರು.ನಿರ್ಗಮಿತ ಅಧ್ಯಕ್ಷ ಶಶಾಂಕ್, ಕಳೆದ ವರ್ಷದ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.ಸಂಸ್ಥೆಯ ಜಿಲ್ಲಾ ಸಂಯೋಜಕ ಮೋಹನ್ ದಾಸ್, ವಲಯ ಸಂಯೋಜಕ ನವೀನ್ ಅಂಬೆಕಲ್ ಮಾತನಾಡಿದರು.ಇದೇ ವೇಳೆ ಸಂಸ್ಥೆಯ ವಲಯಾಧಿಕಾರಿ ರಂಜನ್ ತಿಮ್ಮಯ್ಯ ನಟರಾಜು, ಸುಮನ್ ಬಾಲಚಂದ್ರನ್, ಸುಂಟಿಕೊಪ್ಪ ಘಟಕ ಕಾರ್ಯದರ್ಶಿ ಗ್ಲೆನ್‌ಮೆನೆಜಸ್, ಟಿ.ಆರ್.ಜಯದೇವ್, ಪ್ರೀತಂ ಪ್ರಭಾಕರ್, ಅನಿಲ್ ಕುಮಾರ್, ಹಿರಿಯರಾದ ಡಾ.ಯಶೋಧರ ಪೂಜಾರಿ, ಎಸ್.ಜಿ.ಶ್ರೀನಿವಾಸ್, ಕೆ.ಡಿ.ರಾಮಯ್ಯ, ಕೋಟೇರ ಶಂಭು, ಅಂಜಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.