ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಗ್ರಾ.ಪಂ.ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಹಾಗೂ ಅಧಿಕಾರಿಗಳು ಸ್ವಾಗತ ಕೋರಿ ಶಾಲಾ ಮಕ್ಕಳು ಘೋಷಣೆಯೊಂದಿಗೆ ಪಟ್ಟಣದಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿ ದೇಶದ ಸಂವಿಧಾನದ ಬಗ್ಗೆ ಮಾಹಿತಿ ನೀಡಿದರು. ಪಟ್ಟಣದ ಖಾಸಗಿ ಬಸ್‌ನಿಲ್ಧಾಣದಲ್ಲಿ ಶುಕ್ರವಾರ ಆಯೋಜಿಸಲಾದ ಸಂವಿಧಾನ ಜಾಗೃತಿ ಜಾಥಾ ಸಭೆಯಲ್ಲಿ ಮಾತನಾಡಿದ ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಸಿ.ಯು. ಸರಳ ಮಾತನಾಡಿದರು.ಭಾರತದ ಸಂವಿಧಾನ ಜಗತ್ತಿನ ಶೇಷ್ಠ ಸಂವಿಧಾನಗಳಲ್ಲಿ ಒಂದಾಗಿದ್ದು ಇದು ಲಿಖಿತ ಸಂವಿಧಾನವಾಗಿದೆ ಮೂಲತಃ 395 ವಿಧಿಗಳು 8 ಪರಿಚ್ಛೇದಗಳು ಹಾಗೂ 22 ಭಾಗಗಳಲ್ಲಿ ಸಂವಿಧಾನ ರಚಿಸಲಾಗಿದ್ದು, ಕಾಲಕಾಲಕ್ಕೆ ಮಾಡಿದ ತಿದ್ದುಪಡಿಗಳ ಹಿನ್ನಲೆಯಲ್ಲಿ ಸಂವಿಧಾನ ಹೆಚ್ಚು ಪರಿಷ್ಕೃತವು ಸ್ಪಷ್ಟತೆ ಹೊಂದಿದೆ ಎಂದು ಅವರು ಬಣ್ಣಿಸಿದರು.
ಸಂವಿಧಾನದಲ್ಲಿ ನಾಗಕಿಕರ ಹಕ್ಕುಗಳು ಕರ್ತವ್ಯದ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದ್ದು, ನಾವೆಲ್ಲರೂ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನ ಆಶಯಗಳಿಗೆ ಅನುಗುಣವಾಗಿ ನಮ್ಮ ಹಕ್ಕು ಕರ್ತವ್ಯಗಳನ್ನು ನಿರ್ವಹಿಸಬೇಕೆಂದು ಅವರು ಕರೆ ನೀಡಿದರು.ಗ್ರಾಮ ಪಂಚಾಯಿತಿ ಸದಸ್ಯರಾದ ಶಬ್ಬೀರ್, ರಫೀಕ್‌ಖಾನ್ ಹಾಗೂ ಪಿ.ಎಫ್.ಸಬಾಸ್ಟೀನ್ ಅವರು ಭಾರತದ ಸಂವಿಧಾನ ಕುರಿತು ಮಾತನಾಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಸಂವಿಧಾನ, ಅದರ ಮಹತ್ವತೆಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಸೋಮವಾರಪೇಟೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ ಹಾಗೂ ಅಧಿಕಾರಿ ನಾರಾಯಣ್ ಅವರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಭಾರತದ ಸಂವಿಧಾನದ ಪ್ರತಿಜ್ಞೆ ಬೋಧಿಸಿದರು. ಸರ್ಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಮುಂಭಾಗದಿಂದ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಚಾಲನೆ ನೀಡುವ ಮೂಲಕ ಸಂವಿಧಾನ ಜಾಗೃತಿ ರಥದೊಂದಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಹಾಗೂ ಪಂಚಾಯಿತಿ ಸದಸ್ಯರು, ಪೌರಕಾರ್ಮಿಕರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾದ್ಯಗೋಷ್ಠಿ ಸಂವಿಧಾನ ಘೋಷವಾಕ್ಯದೊಂದಿಗೆ ಮೆರವಣಿಗೆಯಲ್ಲಿ ತೆರಳಿದ್ದರು.ವೇದಿಕೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಶಿವಮ್ಮ, ಐ.ಸೋಮನಾಥ, ನಾಗರತ್ನ ಸುರೇಶ್, ಲೆಕ್ಕಾಪರಿಶೋಧಕಿ ಚಂದ್ರಕಲಾ, ಸಂಧ್ಯಾ, ಶ್ರೀನಿವಾಸ್, ಡಿ.ಎಂ.ಮಂಜುನಾಥ್, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ಭಾರತ ಸಂವಿಧಾನದ ವಿಷಯದ ಕುರಿತು ಶಾಲಾ ಕಾಲೇಜು ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದ್ದು ವಿಜೇತ ಮಕ್ಕಳಿಗೆ ಪ್ರಶಂಸನಾ ಪತ್ರ ನೀಡಿದರು.