ಕೊಪ್ಪಳಕ್ಕೆ ಸೂಪರ್ ಸ್ಪೆಷಾಲಿಟಿ ಬಜೆಟ್‌

KannadaprabhaNewsNetwork | Published : Mar 7, 2025 11:47 PM

ಸಾರಾಂಶ

ಶಾಸಕ ರಾಘವೇಂದ್ರ ಹಿಟ್ನಾಳ ಪಟ್ಟು ಹಿಡಿದು, ಕೊಪ್ಪಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವನ್ನು ಸಿದ್ದರಾಮಯ್ಯಗೆ ಮನವರಿಕೆ ಮಾಡಿದ್ದರು. ಈ ಹಿಂದೆ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಸಹ ಕೊಪ್ಪಳಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡುವುದಾಗಿ ಘೋಷಿಸಿದ್ದರೂ ಬಜೆಟ್‌ನಲ್ಲಿ ನೀಡಿರಲಿಲ್ಲ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಅನುಮೋದನೆ ನೀಡಿ ₹ 100 ಕೋಟಿ ಘೋಷಿಸಿದ್ದಾರೆ. ಈ ಮೂಲಕ ಜಿಲ್ಲೆಯ ಬಹುವರ್ಷಗಳ ಬೇಡಿಕೆ ಈಡೇರಿದಂತೆ ಆಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಬೇಕು ಎನ್ನುವ ಅಗತ್ಯತೆ ಕುರಿತು ಕನ್ನಡಪ್ರಭ ಸರಣಿ ವರದಿ ಸಹ ಪ್ರಕಟಿಸಿದ್ದನ್ನು ಸ್ಮರಿಸಬಹುದು.

ಶಾಸಕ ರಾಘವೇಂದ್ರ ಹಿಟ್ನಾಳ ಪಟ್ಟು ಹಿಡಿದು, ಕೊಪ್ಪಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವನ್ನು ಸಿದ್ದರಾಮಯ್ಯಗೆ ಮನವರಿಕೆ ಮಾಡಿದ್ದರು. ಈ ಹಿಂದೆ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಸಹ ಕೊಪ್ಪಳಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡುವುದಾಗಿ ಘೋಷಿಸಿದ್ದರೂ ಬಜೆಟ್‌ನಲ್ಲಿ ನೀಡಿರಲಿಲ್ಲ. ಇದೀಗ ಘೋಷಣೆ ಆಗಿರುವುದು ಜನರಿಗೆ ಸಂತಸ ತಂದಿದೆ. ಈಗಾಗಲೇ ಇರುವ ಮೆಡಿಕಲ್ ಕಾಲೇಜಿನ 450 ಹಾಸಿಗೆ ಆಸ್ಪತ್ರೆಯನ್ನೇ 1000 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವುದಾಗಿ ಘೋಷಿಸಿದ್ದಾರೆ.

ವಿವಾದದಲ್ಲಿರುವ ಬೂದಗುಂಪಾ ಕುರಿ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಅನುದಾನ, ಯಲಬುರ್ಗಾ ಪಟ್ಟಣಕ್ಕೆ ನರ್ಸಿಂಗ್ ಕಾಲೇಜು ದಕ್ಕಿದೆ.

ಜಿಲ್ಲಾ ರಚನೆಯಾಗಿ 28 ವರ್ಷವಾದರೂ ಜಿಲ್ಲಾ ನ್ಯಾಯಾಲಯಕ್ಕೆ ಸುಸಜ್ಜಿತ ಕಟ್ಟಡ ಇರಲಿಲ್ಲ. ಈ ಕುರಿತು ಕೋರ್ಟ್ ಮೆಟ್ಟಿಲು ಸಹ ಏರಲಾಗಿತ್ತು. ಇದೀಗ ಬಜೆಟ್‌ನಲ್ಲಿ ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ₹ 50 ಕೋಟಿ ನೀಡಿದೆ. ಹಾಗೆಯೇ ಕುಕನೂರು, ಕಾರಟಗಿಯಲ್ಲಿ ಜೆಎಂಎಫ್‌ಸಿ ಕಟ್ಟಡ ನಿರ್ಮಾಣಕ್ಕೂ ಅಸ್ತು ಎನ್ನಲಾಗಿದೆ.

ಯಲಬುರ್ಗಾ ತಾಲೂಕಿನ ಕೆರೆ ತುಂಬಿಸುವ ಯೋಜನೆಗೂ ಅನುದಾನ ನೀಡಲಾಗುವುದು ಎಂದು ಹೇಳಲಾಗಿದೆಯೇ ಹೊರತು ನಿರ್ದಿಷ್ಟ ಮೊತ್ತ ಘೋಷಿಸಿಲ್ಲ. ಆದರೆ, ಈ ಯೋಜನೆಯನ್ನು ಕಳೆದ ವರ್ಷವೂ ಘೋಷಿಸಲಾಗಿತ್ತು ಎನ್ನುವುದು ಗಮನಾರ್ಹ ಸಂಗತಿ. ಕಾರಟಗಿ, ಕನಕಗಿರಿ ಹಾಗೂ ಕುಕನೂರಿನಲ್ಲಿ ತಾಲೂಕು ಸೌಧ ನಿರ್ಮಾಣಕ್ಕೂ ಬಜೆಟ್‌ನಲ್ಲಿ ಅಸ್ತು ಎನ್ನಲಾಗಿದೆ.

ಕನ್ನಡಿಯೊಳಗಿನ ಗಂಟು:

ನವಲಿ ಸಮನಾಂತರ ಜಲಾಶಯಕ್ಕೆ ಬಿಜೆಪಿ ಸರ್ಕಾರ ₹ 1000 ಕೋಟಿ ಘೋಷಿಸಿದ್ದರೂ ಪುಡಿಗಾಸು ನೀಡಲಿಲ್ಲ. ಕೇವಲ ಡಿಪಿಆರ್ ಮಾಡಲಾಯಿತು. ಅದಾದ ಮೇಲೆ ಕಳೆದ ವರ್ಷದ ಬಜೆಟ್‌ನಲ್ಲಿ ನವಲಿ ಸಮನಾಂತರ ಜಲಾಶಯ ನಿರ್ಮಾಣದ ಕುರಿತು ಘೋಷಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಈ ವರ್ಷವೂ ಸಂಬಂಧಿಸಿದ ರಾಜ್ಯಗಳೊಂದಿಗೆ ಚರ್ಚಿಸುವುದಾಗಿ ಹೇಳಲಾಗಿದೆ. ಹೀಗಾಗಿ, ನವಲಿ ಸಮನಾಂತರ ಜಲಾಶಯ ಕನ್ನಡಿಯೊಳಗಿನ ಗಂಟು ಎನ್ನುವಂತೆ ಆಗಿದೆ.

ಹಿರೇಹಳ್ಳದ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಹಳ್ಳದ ಹೂಳು ತೆಗೆಯುವುದಾಗಿಯೂ ಪ್ರಸ್ತಾಪಿಸಲಾಗಿದೆ. ಗದಗ ಜಿಲ್ಲೆಯಲ್ಲಿ ಪ್ರವಾಹ ತಪ್ಪಿಸಲು ಹಳ್ಳದ ಹೂಳು ತೆಗೆದು, ಹಿರೇಹಳ್ಳಕ್ಕೆ ಒಳಹರಿವು ಹೆಚ್ಚಿಸುವ ಪ್ರಸ್ತಾಪವೂ ಇದೆ. ಗಂಗಾವತಿಯಲ್ಲಿ 150 ಹಾಸಿಗೆ ಆಸ್ಪತ್ರೆ, ಕಾರಟಗಿ, ಕುಕನೂರು, ಕನಕಗಿರಿಯಲ್ಲಿ 100 ಹಾಸಿಗೆ ಆಸ್ಪತ್ರೆ ನಿರ್ಮಿಸುವುದಾಗಿ ಘೋಷಿಸಲಾಗಿದೆ.ಕಲ್ಯಾಣ ಕರ್ನಾಟಕ ನಿಧಿ:

ರಾಜ್ಯ ಸರ್ಕಾರ ಘೋಷಿಸಿರುವ ಅಷ್ಟು ಯೋಜನೆಗಳಿಗೂ ಕಲ್ಯಾಣ ಕರ್ನಾಟಕ ನಿಧಿಯ ಮೂಲಕವೇ ಅನುದಾನ ನೀಡುವುದಾಗಿದೆ. ಹೀಗಾಗಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಅನುದಾನ ಎನ್ನುವುದನ್ನು ಬಜೆಟ್‌ನ ಯೋಜನೆಗಳಿಗೆ ಘೋಷಿಸಿರುವುದು ಎಷ್ಟು ಸರಿ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.

Share this article