ಶಿಕ್ಷಣದಿಂದ ಮೂಢನಂಬಿಕೆಗಳು ದೂರ: ಇಮ್ಮಡಿ ಶ್ರೀ

KannadaprabhaNewsNetwork |  
Published : Jan 02, 2025, 12:30 AM IST
ಫೋಟೋ : ಸಿರಿಗೆರೆ ಸಮೀಪದ ಬಸವನಶಿವನಕೆರೆ ಗ್ರಾಮದಲ್ಲಿ ಶಿವಯೋಗಿ ಸಿದ್ದರಾಮೇಶ್ವರರ ಕಂಚಿನ ಪ್ರತಿಮೆಯನ್ನು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅನಾವರಣ ಮಾಡಿದರು. | Kannada Prabha

ಸಾರಾಂಶ

ಸಿರಿಗೆರೆ ಸಮೀಪದ ಬಸವನಶಿವನಕೆರೆ ಗ್ರಾಮದಲ್ಲಿ ಶಿವಯೋಗಿ ಸಿದ್ದರಾಮೇಶ್ವರರ ಕಂಚಿನ ಪ್ರತಿಮೆಯನ್ನು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅನಾವರಣ ಮಾಡಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಗ್ರಾಮೀಣ ಪ್ರದೇಶದ ಜನರು ಕಂದಾಚಾರ ಮತ್ತು ಮೂಢನಂಬಿಕೆಯಿಂದ ದೂರವಿರಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ಭರಮಸಾಗರ ಸಮೀಪವಿರುವ ಬಸವನ ಶಿವನಕೆರೆ ಗ್ರಾಮದಲ್ಲಿ ಶಿವಯೋಗಿ ಸಿದ್ದರಾಮೇಶ್ವರರ ಕಂಚಿನ ಪ್ರತಿಮೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ವಚನಗಳ ಅಭ್ಯಾಸದಿಂದ ವೈಜ್ಞಾನಿಕ ಪ್ರಜ್ಞಾವಂತರಾಗಿ, ಪ್ರಶ್ನಿಸುವ ಮನೋಭಾವದಿಂದ ಜ್ಞಾನ-ವಿಜ್ಞಾನ-ಸುಜ್ಞಾನವಂತರಾಗಿ. ಜೀವದೆಯ ಪರ ಮತ್ತು ಮೂಢನಂಬಿಕೆಗೆ ವಿರುದ್ಧವಾದ ಚಿಂತನೆಗಳನ್ನು ಸಿದ್ದರಾಮೇಶ್ವರರ ವಚನಗಳಲ್ಲಿ ಏಕಕಾಲಕ್ಕೆ ಕಾಣಬಹುದು. ಬೇರೆಯವರ ಮನಸ್ಸನ್ನು ನೋಯಿಸಿ ಹಿಂಸೆಯನ್ನುಂಟು ಮಾಡಿ ಸಂತೋಷ ಪಡುವುದು ವಿಘ್ನ ಸಂತೋಷಿಗಳ ಕುಕೃತ್ಯವಾಗಿದೆ. ಇಂತಹ ನಿರ್ಧಯಿಗಳು ನೂರೆಂಟು ಪಾಪ ಕೃತ್ಯಗಳನ್ನು ಎಸಗಿದ ನಂತರ ಪ್ರಾಯಶ್ಚಿತಕ್ಕಾಗಿ ಕಾಶಿಗೆ ತೆರಳಿ ಗಂಗಾ ನದಿಯಲ್ಲಿ ಮುಳುಗಿ ವಿಶ್ವನಾಥನ ದರ್ಶನ ಪಡೆದರೆ ಪಾಪ ಪರಿಹಾರವಾಗುವುದೆ ಎಂದು ಸಿದ್ದರಾಮೇಶ್ವರರು ಪ್ರಶ್ನಿಸಿದ್ದಾರೆಂದು ಹೇಳಿದರು.

ಹುಣ್ಣಿಮೆ ದಿನ ಪೂರ್ಣಚಂದ್ರ ಗಂಗಾನದಿಯಲ್ಲಿ ಥಳಥಳನೆ ಹೊಳೆಯುತ್ತಿರುತ್ತಾನೆ. ಆದರೆ ಚಂದ್ರನ ಜೊತೆ ಆತನ ಕಲೆಗಳು ಎದ್ದು ಕಾಣುತ್ತಿರುತ್ತವೆ. ಧರ್ಮ, ನೀತಿ, ತತ್ವಜ್ಞಾನ ಮುಂತಾದವು ಮಾನವರಿಗೆ ಸಂಸ್ಕಾರ ಕೊಟ್ಟು ನಿಜಮಾನವರನ್ನಾಗಿಸುವ ಗುರಿಯನ್ನೆ ಹೊಂದಿವೆ. ಆದರೆ ಧಾರ್ಮಿಕ ವಿಧಿ, ವಿಧಾನಗಳು ಸುಳ್ಳು ಜ್ಯೋತಿಷಿಗಳು, ಭವಿಷ್ಯ ಹೇಳುವವರು ಪಾಪ ಪರಿಹಾರ ಮಾಡುತ್ತೇವೆಂದು ನಂಬಿಸಿ ಧರ್ಮದ ಹೆಸರಿನಲ್ಲಿ ಮೋಸ ಮಾಡುತ್ತಾರೆ. ಇದರಿಂದ ಅಪರಾಧಗಳು ಹೆಚ್ಚಾಗುತ್ತವೆ. ಪಾಪಕ್ಕೆ ಪರಿಹಾರವಿದೆ ಎಂದ ಮೇಲೆ ಪಾಪ ಮಾಡುವುದಕ್ಕೆ ಜನರು ಹಿಂಜರಿಯುವುದಿಲ್ಲ. ವಿವಿಧ ಪಾಪ ಕಾರ್ಯಗಳಿಗೆ ತಕ್ಕಂತೆ ಪರಿಹಾರವನ್ನೂ ಹುಸಿ ಧರ್ಮ ಪಂಡಿತರು ಸೂಚಿಸುತ್ತಾರೆ. ನಿಜವಾದ ಧರ್ಮ ಜ್ಞಾನಿಗೆ ಈ ಅವನತಿ ಹೊಂದುತ್ತಿರುವ ವ್ಯವಸ್ಥೆಯಲ್ಲಿ ಸ್ಥಾನವೇ ಇಲ್ಲದಂತಾಗಿ ತನ್ನೊಳಗಿನ ಆತ್ಮಸಾಕ್ಷಿ ಹೊರಗಿನ ಜೀವ ಜಗತ್ತಿನ ಬಗೆಗಿನ ಭೂತ ದಯೆ, ಧರ್ಮ, ದರ್ಶನ, ನೀತಿ, ಮೌಲ್ಯ ಮತ್ತು ಸಂಸ್ಕಾರದ ಮೂಲಕ ಪರಮ ಪಾವನವಾಗಿ ಯಾರ ಮನಸ್ಸನ್ನು ನೋಯಿಸದೆ, ಹಿಂಸೆ ಕೊಡದೆ ಬದುಕುವವನೆ ನಿಜವಾದ ಮಾನವ ಎಂದಿ ಹೇಳಿದರು.

ಈ ಸಂದರ್ಬದಲ್ಲಿ ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ, ಮಾಜಿ ಅಧ್ಯಕ್ಷ ಡಿ.ತಿಮ್ಮಣ್ಣ, ಕಾರ್ಯದರ್ಶಿ ಎಚ್.ಲಕ್ಷ್ಮಣ್, ಬಸವನಶಿವನಕೆರೆ ಗ್ರಾಪಂ ಸದಸ್ಯರಾದ ಚಂದ್ರಪ್ಪ, ದೇವೇಂದ್ರಪ್ಪ ಆರ್.ಕೆ.ಬಸವರಾಜಪ್ಪ ಬ್ಯಾಲಹಾಳ್, ಈಶ್ವರಪ್ಪ ಬೇಡರ ಶಿವನಕೆರೆ, ತಿಪ್ಪೇಸ್ವಾಮಿ, ಯಲ್ಲಪ್ಪ ಹಾಗೂ ಬೇಡರ ಶಿವನಕೆರೆ ಬಸವನಶಿವನಕೆರೆ ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು