ನಿಮ್ಮೂರಿನ ಕಾಮಗಾರಿ ನೀವೇ ಮೇಲುಸ್ತುವಾರಿ ಮಾಡಿ: ಶಾಸಕ ಎಂ.ಚಂದ್ರಪ್ಪ

KannadaprabhaNewsNetwork |  
Published : Oct 26, 2025, 02:00 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳ ನಿರ್ವಹಿಸುತ್ತಿದ್ದೇನೆ. ಸರ್ಕಾರಿ ಹಣ ಖರ್ಚು ಮಾಡಿದ ಮೇಲೆ ಗುಣಮಟ್ಟದ ಕೆಲಸ ಆಗಬೇಕು. ನಿಮ್ಮೂರಿನ ಕಾಮಗಾರಿಯ ಮೇಲಸ್ತುವಾರಿ ನೀವೇ ನಡೆಸಬೇಕು ಎಂದು ಶಾಸಕ ಡಾ.ಎಂ.ಚಂದ್ರಪ್ಪ ಗ್ರಾಮಸ್ಥರಿಗೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳ ನಿರ್ವಹಿಸುತ್ತಿದ್ದೇನೆ. ಸರ್ಕಾರಿ ಹಣ ಖರ್ಚು ಮಾಡಿದ ಮೇಲೆ ಗುಣಮಟ್ಟದ ಕೆಲಸ ಆಗಬೇಕು. ನಿಮ್ಮೂರಿನ ಕಾಮಗಾರಿಯ ಮೇಲಸ್ತುವಾರಿ ನೀವೇ ನಡೆಸಬೇಕು ಎಂದು ಶಾಸಕ ಡಾ.ಎಂ.ಚಂದ್ರಪ್ಪ ಗ್ರಾಮಸ್ಥರಿಗೆ ಸಲಹೆ ನೀಡಿದರು.

ಸಿರಿಗೆರೆ ಹೋಬಳಿ ಡಿ.ಮದಕರಿಪುರ ಗ್ರಾಮದಲ್ಲಿ ಮೂರು ಕೋಟಿ ರು.ವೆಚ್ಚದಲ್ಲಿ ಡಿ.ಮದಕರಿಪುರ ಗ್ರಾಮದಿಂದ ತಣಿಗೆಹಳ್ಳಿವರೆಗೆ ನೂತನ ಸಿಸಿ.ರಸ್ತೆ, ಚರಂಡಿಗಳ ನಿರ್ಮಾಣ, ನೂತನ ಶಾಲಾ ಕಟ್ಟಡ, ಆಟದ ಮೈದಾನ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಎಂಜಿನಿಯರ್‌ ಹಾಗೂ ಗುತ್ತಿಗೆದಾರರು ಕಾಮಗಾರಿ ಕಳಪೆ ಆಗದಂತೆ ಎಚ್ಚರವಹಿಸಬೇಕೆಂದರು.

ರಾಜ್ಯದಲ್ಲಿದ್ದ ಹಿಂದಿನ ಬಿಜೆಪಿ ಸರ್ಕಾರ 63 ಜಾತಿಗಳಿಗೆ ಶೇ.5 ರಷ್ಟು ಮೀಸಲಾತಿ ನೀಡಿತ್ತು. ಈಗಿನ ಸರ್ಕಾರ ಲಂಬಾಣಿ, ಕೊರಚ, ಕೊರಮ, ಭೋವಿ ಜನಾಂಗಕ್ಕೆ ಶೇ.3 ರಷ್ಟು, ಅಲೆಮಾರಿಗಳಿಗೆ ಶೇ.1 ರಷ್ಟು ಮೀಸಲಾತಿ ನೀಡಿರುವುದು ಅನ್ಯಾಯವಲ್ಲವೆ? ಇದರ ವಿರುದ್ದ ಮೊದಲು ನೀವು ಎಚ್ಚೆತ್ತುಕೊಂಡು ಹೋರಾಡಬೇಕೆಂದು ತಿಳಿಸಿದರು.

ಹೊಳಲ್ಕೆರೆ ವಿಧಾನಸಭೆ ನೆರೆಯ ಚಿಕ್ಕಮಗಳೂರು ಜಿಲ್ಲೆಯ ಶಿವನಿ, ಅಜ್ಜಂಪುರದವರೆಗೆ ವಿಸ್ತೃತವಾಗಿ ಹರಡಿದೆ. ತಾಲೂಕಿನ 493 ಹಳ್ಳಿಗಳಲ್ಲಿಯೂ ಸಿ.ಸಿ ರಸ್ತೆ, ರೈತರಿಗೆ ವಿದ್ಯುತ್, ಶಾಲಾ-ಕಾಲೇಜುಗಳನ್ನು ನಿರ್ಮಿಸಿ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದೇನೆ. ಸಾರ್ವಜನಿಕರ ಮಧ್ಯೆಯಿದ್ದುಕೊಂಡು ಕಷ್ಟ-ಸುಖ ಸಮಸ್ಯೆಗಳನ್ನು ಆಲಿಸಿ ಸಾಮಾನ್ಯ ಜ್ಞಾನವಿಟ್ಟುಕೊಂಡು ಕೆಲಸ ಮಾಡುವ ರಾಜಕಾರಣಿ ನಾನು. ಆಶ್ವಾಸನೆ ಕೊಡುವವನಲ್ಲ. ಎಲ್ಲಿ ಏನು ಕೆಲಸ ಆಗಬೇಕೆಂಬುದನ್ನು ಹುಡುಕಿ ಕ್ಷೇತ್ರದ ಅಭಿವೃದ್ಧಿಗೆ ಹಗಲು-ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆಂದರು.

ಡಿ.ಮದಕರಿಪುರ ಗ್ರಾಮದ ರಸ್ತೆ, ಶಾಲೆ, ಆಟದ ಮೈದಾನಕ್ಕೆ ಮೂರು ಕೋಟಿ ರು. ಖರ್ಚು ಮಾಡಲಾಗುವುದು. ಪಶುವೈದ್ಯರುಗಳ ಕೊರತೆಯಿದೆ. ಅದಕ್ಕಾಗಿ ಮೊಬೈಲ್ ವ್ಯಾನ್‍ಗಳ ಸೌಲಭ್ಯ ಒದಗಿಸಲಾಗಿದೆ. ನಿಮ್ಮ ಜಾನುವಾರುಗಳಿಗೆ ಏನೆ ತೊಂದರೆಯಾದರೆ ಫೋನ್ ಮಾಡಿ ತಿಳಿಸಿದರೆ ಸಾಕು ನೀವಿರುವ ಕಡೆ ಬಂದು ಚಿಕಿತ್ಸೆ ನೀಡುತ್ತಾರೆ. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಜನತೆಯಲ್ಲಿ ಮನವಿ ಮಾಡಿದರು.

ಹೊಳಲ್ಕೆರೆ ವಿಧಾನಸಭೆ ಕ್ಷೇತ್ರದಲ್ಲಿ ತಾವು ಶಾಸಕರಾದಾಗ ಯಾವುದೇ ಸರ್ಕಾರವಿದ್ದರೂ ಅನದಾನದ ಹೊಳೆ ಹರಿಸಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಗ್ರಾಮಗಳಿಗೆ ಅಗತ್ಯವಾಗಿ ಬೇಕಾದ ಅಭಿವೃದ್ಧಿ ಕೆಲಸಗಳ ಗಮನಕ್ಕೆ ತಂದರೆ ಆದ್ಯತೆ ಮೇರೆಗೆ ಎಲ್ಲವನ್ನು ನಿರ್ವಹಿಸುತ್ತೇನೆ. ಪ್ರತಿ ಹಳ್ಳಿಗೂ ಕುಡಿವ ನೀರು ಪೂರೈಕೆ ಮಾಡುವ ಕೆಲಸ ಭರದಿಂದ ಸಾಗಿದೆ. ಕೆರೆಗಳಿಗೆ ಶೀಘ್ರ ಭದ್ರೆ ನೀರು ಹರಿದು ಬರಲಿದೆ ಎಂದು ಚಂದ್ರಪ್ಪ ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಾಕ್ಷಿ, ಸಿರಿಗೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೋಹನ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರಮೇಶ್, ಕುಬೇರಮ್ಮ, ರುದ್ರಣ್ಣ ವಿಷ್ಣು, ಮೋಹನ್‍ಕುಮಾರ್, ಮೂರ್ತಣ್ಣ, ಗಂಗಣ್ಣ, ಶೇಖರಪ್ಪ, ಬಸವರಾಜ್, ಪಂಚಾಕ್ಷರಿ, ಕೃಷ್ಣಣ್ಣ ಹಾಗೂ ಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’