ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವ ಕುರಿತಂತೆ ಜಿಲ್ಲೆಯ ಪ್ರವಾಸೋದ್ಯಮ ಭಾಗೀದಾರರಿಗೆ ಎಲ್ಲ ರೀತಿಯ ಸಹಕಾರ ನೀಡುವ ಮೂಲಕ ಪ್ರವಾಸಿ ಚಟುವಟಿಕೆಗಳ ಅಭಿವೃದ್ಧಿಗೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಪ್ರವಾಸೋದ್ಯಮ ಭಾಗೀದಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ಸಂಬಂಧಪಟ್ಟ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದ ಅವರು, ಕಾಮಗಾರಿಗಳ ಮುಕ್ತಾಯಕ್ಕೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದರು.
ದಾಂಡೇಲಿಗೆ ಹೊರ ರಾಜ್ಯ ಮತ್ತು ಹೊರದೇಶಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಈ ಭಾಗದಲ್ಲಿನ ಸೂಚನಾ ಫಲಕಗಳಲ್ಲಿ ಕನ್ನಡದ ಜೊತೆಗೆ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಬರೆಸಬೇಕು, ಅನಧಿಕೃತ ಹೋಂ ಸ್ಟೇಗಳನ್ನುತಡೆಯಬೇಕು. ಈ ಭಾಗದಲ್ಲಿ ಹೆಚ್ಚಿನ ಅರಣ್ಯ ಪ್ರದೇಶವಿದ್ದು ದಾರಿ ಮಧ್ಯದಲ್ಲಿಯೇ ಪ್ರವಾಸಿಗರು ಪಾರ್ಟಿ ಮಾಡುತ್ತಿದ್ದು ಇದನ್ನು ತಡೆಯಬೇಕು. ಸುಸಜ್ಜಿತ ಪ್ರವಾಸಿ ಮಾಹಿತಿ ಕೇಂದ್ರವನ್ನು ನಗರದ ಕೇಂದ್ರ ಭಾಗದಲ್ಲಿ ಆರಂಭಿಸಬೇಕು, ಸೈಕ್ಸ್ ಪಾಯಿಂಟ್ ಪ್ರವೇಶಕ್ಕೆ ಅನುಮತಿ ನೀಡಬೇಕು. ದೂದಸಾಗರ್‌ಗೆ ರಾಜ್ಯದ ಕಡೆಯಿಂದ ಪ್ರವೇಶ ನೀಡಬೇಕು. ಇಲ್ಲಿ 300ಕ್ಕೂ ಅಧಿಕವಿರುವ ವಿಶಿಷ್ಟ ಪ್ರಭೇದದ ಪಕ್ಷಿಗಳ ಕುರಿತ ಸರ್ವೆ ಮಾಡಬೇಕು. ಜಿಲ್ಲೆಯ ಕರಾವಳಿ ತೀರಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ಮಿತ್ರರು ಮತ್ತು ಗೈಡ್‌ಗಳ ನೇಮಕ ಮಾಡಬೇಕು. ಸಿಆರ್‌ಝಡ್ ಮತ್ತು ಅರಣ್ಯ ನಿಯಮಗಳಲ್ಲಿ ರಿಯಾಯತಿ ನೀಡಬೇಕು ಎಂದು ಪ್ರವಾಸೋದ್ಯಮ ಭಾಗೀದಾರರು ತಿಳಿಸಿದರು.
ಸಿಆರ್‌ಝಡ್ ನಿಯಮಗಳು 2025-26ರಲ್ಲಿ ತಿದ್ದುಪಡಿಯಾಗುತ್ತಿದೆ. ಜಿಲ್ಲೆಯ ಪ್ರವಾಸೋದ್ಯಮ ಭಾಗೀದಾರರು ತಾವು ಕೈಗೊಳ್ಳುವ ಚಟುವಟಿಕೆಗಳ ಬಗ್ಗೆ ಈಗಲೇ ಮಾಹಿತಿ ನೀಡಬೇಕು. ತೀಳ್‌ಮಾತಿ ಸಂಪರ್ಕಿಸುವ ತೂಗು ಸೇತುವೆ ನಿರ್ಮಾಣದ ಬಗ್ಗೆ ಪರಿಶೀಲಿಸಲಾಗುವುದು. ಜಿಲ್ಲೆಯ ಪ್ರವಾಸೋದ್ಯಮ ಭಾಗೀದಾರರಿಗಾಗಿ ಕುಮಟಾದಲ್ಲಿ ಮೇ ತಿಂಗಳಲ್ಲಿ ವಿಶೇಷ ಕಾರ್ಯಗಾರ ಏರ್ಪಡಿಸಿ ರಾಜ್ಯಮಟ್ಟದ ಅಧಿಕಾರಿಗಳನ್ನು ಆಹ್ವಾನಿಸಿ, ಜಿಲ್ಲೆಯಲ್ಲಿ ಪ್ರವಾಸಿ ಚಟುವಟಿಕೆಗಳ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಡಾ. ರಾಜೇಂದ್ರ ಕೆ.ವಿ. ಹೇಳಿದರು.ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ , ಜಿಪಂ ಸಿಇಒ ಈಶ್ವರ ಕಾಂದೂ, ಉಪ ವಿಭಾಗಾಧಿಕಾರಿ ಕನಿಷ್ಕ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಚೈತ್ರಾ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ನಾವಿ ಇದ್ದರು.