- ಆನಗೋಡು ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಣೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ರೈತರಿಗೆ ಅವಶ್ಯವಿರುವ ವಿವಿಧ ತಳಿಯ ಮೆಕ್ಕೆಜೋಳ, ತೊಗರಿ ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ವಿತರಣೆ ಮಾಡಲಾಗುತ್ತದೆ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.ತಾಲೂಕಿನ ಆನಗೋಡು ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ರೈತರಿಗೆ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಮುಂಗಾರು ಪೂರ್ವದಲ್ಲಿಯೇ ಮಳೆ ಆರಂಭವಾಗಿದೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಅಭಾವ ಸೃಷ್ಟಿ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈತರ ಬೇಡಿಕೆಗಳಿಗೆ ತಕ್ಕಂತೆ ಬಿತ್ತನೆಬೀಜ, ರಸಗೊಬ್ಬರ ಸರಬರಾಜು ಮಾಡಬೇಕು. ಈ ಭಾಗದಲ್ಲಿ 3175 ಕ್ವಿಂಟಲ್ ಡಿಎಪಿ ಬೇಡಿಯಿದ್ದು, 3115 ಕ್ವಿಂ. ಡಿಎಪಿ ದಾಸ್ತಾನು ಇದೆ. ಯೂರಿಯಾ 6293 ಕ್ವಿಂ. ಬೇಡಿಕೆ ಇದೆ. 14500 ಕ್ವಿಂ. ದಾಸ್ತಾನು ಇದೆ. ರೈತರು ಯೂರಿಯಾಗಿಂತ ಅತಿ ಹೆಚ್ಚು ಡಿಎಪಿ ರಸಗೊಬ್ಬರ ಬಳಸುವುದರಿಂದ ಕೇಂದ್ರ ಸರ್ಕಾರ ಕೂಡಲೇ ಅಗತ್ಯಕ್ಕಿಂತ ಹೆಚ್ಚು ಡಿಎಪಿ ರಸಗೊಬ್ಬರ ಪೂರೈಕೆ ಮಾಡಬೇಕೆಂದು ಒತ್ತಾಯಿಸಿದರು.
1 ಬ್ಯಾಗ್‌ಗೆ ಡಿಎಪಿ ₹1350, ಪೋಟಾಷ್ ₹1625, 20:20 ಗೊಬ್ಬರ ₹1400 ದರ ನಿಗದಿ ಮಾಡಲಾಗಿದೆ. ಇದಕ್ಕಿಂತ ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಕಂಡುಬಂದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ರೈತರು ಕೂಡಲೇ ಶಾಸಕರು ಅಥವಾ ಅಧಿಕಾರಿಗಳ ಗಮನಕ್ಕೆ ತರಬೇಕು. ಕೆಲವು ಸೊಸೈಟಿ, ಅಂಗಡಿಗಳಲ್ಲಿ ನಿಗದಿಪಡಿಸಿದ ದರಕ್ಕಿಂತ ₹100, ₹200 ಹೆಚ್ಚಿಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ರೈತರು ದೂರು ನೀಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ, ವರದಿ ನೀಡಬೇಕೆಂದು ಸೂಚನೆ ನೀಡಿದರು.
ಕೇವಲ 1 ಅಥವಾ 2 ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿಎಪಿ ರಸಗೊಬ್ಬರವನ್ನು ರೈತರು ರೂಢಿಗತವಾಗಿ ಬಳಸುತ್ತಿದ್ದಾರೆ. ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಅಂಶ ಮಾತ್ರ ಇರುತ್ತದೆ. ಹಾಗಾಗಿ, ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಬೇಕೆಂದು ಶಾಸಕರು ಸಲಹೆ ನೀಡಿದರು.
- - -
ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ರೈತರಿಗೆ ಬಿತ್ತನೆ ಬೀಜ ವಿತರಿಸಿದರು.