ಬೆಂಗಳೂರು : 2024-25ನೇ ಶೈಕ್ಷಣಿಕ ಸಾಲು ಆರಂಭವಾಗಿ 10 ದಿನಗಳು ಕಳೆದರೂ ರಾಜ್ಯಪಠ್ಯಕ್ರಮ ಬೋಧಿಸುತ್ತಿರುವ ಕರ್ನಾಟಕ ಪಠ್ಯಪುಸ್ತಕ ಸಂಘವು ಇನ್ನೂ ಕೂಡ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕಗಳನ್ನು ಪೂರೈಸಿಲ್ಲ. ಅಲ್ಲದೆ, ಪಠ್ಯಪುಸ್ತಕಗಳ ದರವನ್ನು ಮುನ್ಸೂಚನೆ ಇಲ್ಲದೆ ಶೇ.15ರಷ್ಟು ಹೆಚ್ಚಿಸಲಾಗಿದೆ ಎಂದು ಖಾಸಗಿ ಶಾಲಾ ಸಂಘಟನೆಗಳು ಆರೋಪಿಸಿವೆ.
ಈ ಸಂಬಂಧ ರಾಜ್ಯದ ಖಾಸಗಿ ಶಾಲೆಗಳಿಂದ ಆನ್‌ಲೈನ್ ಮೂಲಕ ಸಂಗ್ರಹಿಸಿದ ಅಭಿಪ್ರಾಯ ಸಂಗ್ರಹದಲ್ಲಿ ಶೇ.100ರಷ್ಟು ಶಾಲೆಗಳು ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕಗಳು ಸರಬರಾಜಾಗಿಲ್ಲ ಎಂದು ಹೇಳಿವೆ. ಎಸ್ಸೆಸ್ಸೆಲ್ಸಿಯ ಪ್ರಥಮ ಸೆಮಿಸ್ಟರ್ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕಗಳು ಬಂದಿಲ್ಲ. ಆದರೆ, ಎರಡನೇ ಸೆಮಿಸ್ಟರ್ ಪುಸ್ತಕಗಳನ್ನು ನೀಡಲಾಗಿದೆ. ಏನು ಪ್ರಯೋಜನ ಎಂದು ಅವರ್ ಸ್ಕೂಲ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಅರಸ್ ಮಾಹಿತಿ ನೀಡಿದ್ದಾರೆ.
ಅಲ್ಲದೆ, ದರ ಹೆಚ್ಚಳ ಸಂಬಂಧ ಸ್ಪಷ್ಟೀಕರಣ ಕೇಳಿ ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ಪತ್ರವನ್ನೂ ಬರೆಯಲಾಗಿದೆ. ಜನವರಿ ತಿಂಗಳಲ್ಲಿ ಪಠ್ಯಪುಸ್ತಕಗಳ ಬೇಡಿಕೆಗೆ ಅನುಗುಣವಾಗಿ ಶೇ.10ರಷ್ಟು ಮುಂಗಡ ಪಾವತಿಸಿದಾಗ ಇದ್ದ ದರಕ್ಕೂ, ಈಗ ಬಾಕಿ ಪಾವತಿಸಲು ಸೂಚಿಸಿದಾಗ ನಿಗದಿಪಡಿಸಿರುವ ದರಕ್ಕೂ ಶೇ.15ರಷ್ಟು ಹೆಚ್ಚಳದ ವ್ಯತ್ಯಾಸವಿದೆ. ಈ ಬಗ್ಗೆ ಇದುವರೆಗೂ ಸಂಘವು ಯಾವುದೇ ಉತ್ತರ ನೀಡಿಲ್ಲ ಎಂದು ಅವರು ಹೇಳಿದ್ದಾರೆ.
ಕೆಟಿಬಿಎಸ್ ಪಠ್ಯಪುಸ್ತಕ ಬಳಕೆ ಕಡ್ಡಾಯವಲ್ಲ
ರಾಜ್ಯದ ಅನುದಾರಹಿತ ಖಾಸಗಿ ಶಾಲೆಗಳು ಶಿಕ್ಷಣ ಇಲಾಖೆಯ ಕರ್ನಾಟಕ ಪಠ್ಯಪುಸ್ತಕ ಸಂಘ (ಕೆಟಿಬಿಎಸ್) ಮುದ್ರಿಸಿ ಸರಬರಾಜು ಮಾಡುವ ಪಠ್ಯಪುಸ್ತಕಗಳನ್ನೇ ಖರೀದಿಸಬೇಕೆಂಬ ಕಡ್ಡಾಯ ನಿಯಮವೇನೂ ಇಲ್ಲ ಎನ್ನಲಾಗಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಸ್ವತಃ ರಾಜ್ಯ ಪಠ್ಯಪುಸ್ತಕ ಸಂಘವೇ ಇಂತಹದ್ದೊಂದು ಸ್ಪಷ್ಟನೆ ನೀಡಿದೆ. ಅವರ್ ಸ್ಕೂಲ್ಸ್ ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಕೆಟಿಬಿಎಸ್‌ನ ಸಾರ್ವನಿಕ ಮಾಹಿತಿ ಅಧಿಕಾರಿಗಳು, ಅನುದಾನರಹಿತ ರಾಜ್ಯ ಮಂಡಳಿಯ ಶಾಲೆಗಳು ಕಡ್ಡಾಯವಾಗಿ ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಮುದ್ರಿಸಲ್ಪಟ್ಟ ಪಠ್ಯಪುಸ್ತಕಗಳನ್ನು ಖರೀದಿಸಬೇಕು ಎಂಬ ಅಧಿಕೃತ ಸರ್ಕಾರಿ ಆದೇಶ ಅಥವಾ ಶಿಕ್ಷಣ ಇಲಾಖೆಯ ಸುತ್ತೋಲೆಯ ಅಧಿಕೃತ ಪ್ರತಿಯನ್ನು ಕೋರಲಾಗಿದ್ದು, ಈ ಸಂಬಂಧ ತಮ್ಮ ಕಚೇರಿಯಿಂದ ಯಾವುದೇ ಆದೇಶ/ಸುತ್ತೋಲೆ ಹೊರಡಿಸಿಲ್ಲ ಎಂದು ತಿಳಿಸಿದ್ದಾರೆ.