ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ಜಿಲ್ಲೆಯ ಹೋಂಸ್ಟೇ, ರೆಸಾರ್ಟ್ ಹಾಗೂ ಹೋಟೆಲ್ ಗಳು ಬಹುತೇಕ ಭರ್ತಿಯಾಗಿತ್ತು. ಕೊಡಗಿನಲ್ಲಿ 2025ಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿದರು.

ಜಿಲ್ಲೆಯ ಹಲವು ರೆಸಾರ್ಟ್ ಹಾಗೂ ಹೋಂಸ್ಟೇಗಳಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಫಯರ್ ಕ್ಯಾಂಪ್, ಸಂಗೀತ, ನೃತ್ಯ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಪ್ರವಾಸಿಗರ ಆಗಮನದಿಂದಾಗಿ ಹೆಚ್ಚಿನ ಟ್ರಾಫಿಕ್ ಜಾಮ್ ಉಂಟಾಯಿತು. ಮಡಿಕೇರಿಯ ಪ್ರವಾಸಿ ತಾಣ ರಾಜಾಸೀಟಿನಲ್ಲಿ 2025ರ ವರ್ಷದ ಕೊನೆಯ ಸೂರ್ಯಾಸ್ತವನ್ನು ಕಣ್ತುಂಬಿಕೊಂಡರು. ಆದರೆ ರಾಜಾಸೀಟಿನಲ್ಲಿ ಈ ಬಾರಿ ವಿರಳ ಸಂಖ್ಯೆಯ ಪ್ರವಾಸಿಗರು ಸೇರಿದ್ದರು. ಉಳಿದಂತೆ ಅಬ್ಬಿಜಲಪಾತ, ದುಬಾರೆ, ನಿಸರ್ಗಧಾಮ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರಿದ್ದರು.

ವರ್ಷಾಚರಣೆಯ ಹಿನ್ನೆಲೆಯಲ್ಲಿ ಚಿಕನ್, ಪೋರ್ಕ್, ಮಟನ್ ಗೆ ಭಾರಿ ಬೇಡಿಕೆ ಕಂಡುಬಂತು. ಅಲ್ಲದೆ ಮದ್ಯ ಕೂಡ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಯಿತು.