ಹೂವಿನಹಡಗಲಿ: ಮುಂಡರಗಿ ಟಿಎಪಿಸಿಎಂಎಸ್‌ನಿಂದ ಕಬ್ಬು ಬೆಳೆಗಾರರಿಗೆ ನಕಲಿ ಪೋಟ್ಯಾಷ್ ರಸಗೊಬ್ಬರ ಪೂರೈಸಿ ಮೋಸ ಮಾಡಿದ್ದಾರೆಂದು ರೈತರು ಆರೋಪಿಸಿದ್ದಾರೆ.
ಈ ಕುರಿತು ವಿಜಯನಗರ ಸಕ್ಕರೆ ಕಾರ್ಖಾನೆಯವರನ್ನು ಪ್ರಶ್ನಿಸಿದಾಗ, ಮುಂಡರಗಿ ಟಿಎಪಿಸಿಎಂಎಸ್‌ನಿಂದ ಪೂರೈಕೆ ಮಾಡಿರುವ ಪೋಟ್ಯಾಷ್ ರಸಗೊಬ್ಬರವನ್ನು ಧಾರವಾಡ ಕೃಷಿ ವಿವಿಯ ಸಂಶೋಧನಾ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಲಾಗಿದ್ದು, ನಕಲಿ ಪೋಟ್ಯಾಷ್ ಅಲ್ಲ, ಅಸಲಿ ಎಂದು ವರದಿ ಬಂದಿದೆ ಎನ್ನುತ್ತಾರೆ.
ನಾವು ಕೂಡಾ ಮುಂಡರಗಿ ಟಿಎಪಿಸಿಎಂಎಸ್‌ನಿಂದ ನಮಗೆ ನೀಡಿರುವ ಪೋಟ್ಯಾಷ್ ರಸಗೊಬ್ಬರವನ್ನು ಖಾಸಗಿಯಾಗಿ ಪ್ರಯೋಗಾಲಯಕ್ಕೆ ಕಳಿಸಿ ಪರೀಕ್ಷೆ ಮಾಡಿಸಿದ್ದೇವೆ. ಅದರಲ್ಲಿ ಶೇ. 26.4ರಷ್ಟು ಪೋಟ್ಯಾಷ್, ಶೇ. 45.8ರಷ್ಟು ಯೂರಿಯಾ ರಸಗೊಬ್ಬರ ಇದೆ ಎಂದು ವರದಿ ಬಂದಿದೆ. ಪ್ರಯೋಗಾಲಯಗಳು ಸುಳ್ಳು ಹೇಳಲು ಸಾಧ್ಯವೇ ಇಲ್ಲ. ಸಕ್ಕರೆ ಕಾರ್ಖಾನೆಯವರು ಬೇರೆ ಪೋಟ್ಯಾಷ್ ಪರೀಕ್ಷೆಗೆ ಕಳಿಸಿದ್ದಾರೆ. ನಮಗೆ ಪೂರೈಕೆ ಮಾಡಿರುವ ಪೋಟ್ಯಾಷ್ ರಸಗೊಬ್ಬರ ಕಳಿಸಿಲ್ಲ, ನಮಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆಂದು ರೈತರು ದೂರಿದರು.ವಿಜಯನಗರ ಸಕ್ಕರೆ ಕಾರ್ಖಾನೆಯವರು ಮುಂಡರಗಿ ಟಿಎಪಿಸಿಎಂಎಸ್‌ನಿಂದ ನಮಗೆ 14 ಚೀಲ ಪೋಟ್ಯಾಷ್ ರಸಗೊಬ್ಬರ ಪೂರೈಕೆ ಮಾಡಿದ್ದಾರೆ. ಎಲ್ಲ ಚೀಲದಲ್ಲಿಯೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಮಿಶ್ರಣವಿದೆ. ಇದರ ಹಿಂದೆ ದೊಡ್ಡ ಮಾಫಿಯಾ ಇರಬಹುದು. ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಸೂಕ್ತ ತನಿಖೆ ಮಾಡಿ ರೈತರಿಗೆ ಆಗುತ್ತಿರುವ ಮೋಸ ತಡೆದು ರೈತರನ್ನು ಕಾಪಾಡಬೇಕಿದೆ ಎನ್ನುತ್ತಾರೆ ಯಮನಪ್ಪ.
ಅಸಲಿ ಗೊಬ್ಬರ: ವಿಜಯನಗರ ಸಕ್ಕರೆ ಕಾರ್ಖಾನೆಯ ಕಬ್ಬು ಬೆಳೆಗಾರರಿಗೆ ಮುಂಡರಗಿಯ ಟಿಎಪಿಸಿಎಂಎಸ್‌ನಿಂದ ಹೂವಿನಹಡಗಲಿಯ ರೈತರಿಗೆ 25 ಟನ್ ಪೋಟ್ಯಾಷ್ ರಸಗೊಬ್ಬರ ಪೂರೈಕೆ ಮಾಡಲಾಗಿದೆ. ಯಾವ ರೈತರಿಂದ ನಕಲಿ ರಸಗೊಬ್ಬರ ಎಂದು ದೂರು ಬಂದಿಲ್ಲ. ಮುಂಡರಗಿ ಕೃಷಿ ಇಲಾಖೆ ಅಧಿಕಾರಿಗಳು ಧಾರವಾಡ ಕೃಷಿ ವಿವಿ ಸಂಶೋಧನಾ ಕೇಂದ್ರದ ಪ್ರಯೋಗಾಲಯಕ್ಕೆ ಕಳಿಸಿ ಪರೀಕ್ಷೆ ಮಾಡಿಸಲಾಗಿದ್ದು, ಅಸಲಿ ಗೊಬ್ಬರ ಎಂದು ವರದಿ ಬಂದಿದೆ ಎಂದು ಮುಂಡರಗಿಯ ಟಿಎಪಿಸಿಎಂಎಸ್ ಕಾರ್ಯದರ್ಶಿ ಸಿದ್ದಣ್ಣ ತಳಕಲ್ಲು ತಿಳಿಸಿದರು.ಕಾನೂನು ಹೋರಾಟ: ಕಬ್ಬು ಬೆಳೆಗಾರರಿಗೆ ನಕಲಿ ಪೋಟ್ಯಾಷ್ ರಸಗೊಬ್ಬರ ಪೂರೈಕೆ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ರೈತರಿಗೆ ಆಗಿರುವ ನಷ್ಟವನ್ನು ಭರಿಸುವ ಜತೆಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುವ ಜತೆಗೆ ಕಾನೂನು ಸಮರಕ್ಕೂ ಸಿದ್ಧರಾಗಿದ್ದೇವೆ ಎಂದು ರೈತ ಯಮನಪ್ಪ ಸರಾಯಿದ ತಿಳಿಸಿದರು.