ಅಕ್ರಮ ಮರಳು ನೆರೆ ಜಿಲ್ಲೆಗಳಿಗೆ ಸರಬರಾಜು: ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆರೋಪ

KannadaprabhaNewsNetwork |  
Published : Jun 08, 2026, 01:30 AM IST
ಪೋಟೋ: 07ಎಸ್‌ಎಮಜಿಕೆಪಿ05ಶಿವಮೊಗ್ಗ ಪತ್ರಿಕಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿದರು.  | Kannada Prabha

ಸಾರಾಂಶ

ಶಿವಮೊಗ್ಗ ಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಮೂಗಿನ ನೇರಕ್ಕೆ ಮರಳು ಮಾಫಿಯಾ ಯಥೇಚ್ಛವಾಗಿ ನಡೆಯುತ್ತಿದ್ದು, ಇಲ್ಲಿನ ಮರಳು ಇತರೆ ಜಿಲ್ಲೆ ಹಾಗೂ ರಾಜ್ಯಗಳಿಗೂ ಸರಬರಾಜಾಗುತ್ತಿದೆ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಮೂಗಿನ ನೇರಕ್ಕೆ ಮರಳು ಮಾಫಿಯಾ ಯಥೇಚ್ಛವಾಗಿ ನಡೆಯುತ್ತಿದ್ದು, ಇಲ್ಲಿನ ಮರಳು ಇತರೆ ಜಿಲ್ಲೆ ಹಾಗೂ ರಾಜ್ಯಗಳಿಗೂ ಸರಬರಾಜಾಗುತ್ತಿದೆ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮರಳು ಮಾಫಿಯಾ ಎಗ್ಗಿಲ್ಲದೇ ಸಾಗುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ, ಸುಮ್ಮನೆ ಕುಳಿತಿವೆ. 2025ರ ಜುಲೈ 1ರಂದು 22 ಬ್ಲಾಕ್‌ಗಳಿಗೆ ಮರಳು ಕ್ವಾರಿಗಳಿಗೆ ಅನುಮತಿ ನೀಡಲಾಗಿತ್ತು. ಆದರೆ, 11 ತಿಂಗಳಾದರೂ ಕೂಡ ಇಲಾಖೆಗಳಿಂದ ಇವುಗಳಿಗೆ ಅನುಮತಿ ನೀಡಿದ್ದರೂ ಇನ್ನೂ ಆರಂಭವಾಗಿಲ್ಲ. ಇದರ ಪರಿಣಾಮ ಅಕ್ರಮ ಮರಳುಗಾರಿಕೆ ಹೆಚ್ಚಾಗಿದ್ದು, ಇಲ್ಲಿನ ಮರಳು ಇತರೆ ಜಿಲ್ಲೆ ಹಾಗೂ ರಾಜ್ಯಗಳಿಗೂ ಸರಬರಾಜಾಗುತ್ತಿದೆ ಎಂದು ದೂರಿದರು.

ಮರಳು ಮಾಫಿಯಾದ ಬಗ್ಗೆ ಸ್ಥಳೀಯ ಪತ್ರಿಕೆಗಳು ಸುದ್ದಿ ಮಾಡಿದ್ದವು. ಆದರೂ ಕೂಡ ಯಾವ ಅಧಿಕಾರಿಗಳು ಕೂಡ ಸಕ್ರಿಯವಾಗಿಲ್ಲ. ಆದರೆ, ಲೋಕಾಯುಕ್ತರು ಮಾತ್ರ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಮಾಡಿ ದಾಳಿ ನಡೆಸಿದ ಪರಿಣಾಮವಾಗಿ ಸುಮಾರು 37 ಸಾವಿರ ಮೆಟ್ರಿಕ್ ಟನ್ ಅಕ್ರಮ ಮರಳನ್ನು ಪತ್ತೆ ಹಚ್ಚಿದೆ. ಅಂದರೆ ಸುಮಾರು 4 ಸಾವಿರ ಲಾರಿ ಲೋಡ್ ನಷ್ಟು ಮರಳು ಇದಾಗುತ್ತದೆ. ಸುಮಾರು 12 ಕೋಟಿ ಬೆಲೆಬಾಳಬಹುದಾಗಿದೆ. ಈ ಮರಳನ್ನು ಒಂದು ಕಡೆ ಸಂಗ್ರಹ ಮಾಡಲಾಗಿದೆ. ಆದರೆ, ಈ ಸಂಗ್ರಹ ಮಾಡಿದ ಮರಳನ್ನು ಕಾಯುವವರೇ ಇಲ್ಲವಾಗಿದೆ ಎಂದು ದೂರಿದರು.

ಈ ಸಂಗ್ರಹವಾದ ಮರಳು ಎಲ್ಲಿಗೆ ಹೋಗುತ್ತೋ ಗೊತ್ತಿಲ್ಲ. ಆದರೆ, ನಿಧಾನವಾಗಿ ಖಾಲಿಯಾಗುವುದಂತೂ ನಿಜ. ಇದನ್ನು ಪೊಲೀಸರಾಗಲೀ, ಅಧಿಕಾರಿಗಳಾಗಲೀ ಕಾಯುತ್ತಲೂ ಇಲ್ಲ. ಮತ್ತೊಂದು ಕಡೆ ಸರ್ಕಾರಿ ಕೆಲಸಕ್ಕೆ ಮರಳು ಬೇಕು ಎಂದು ನೆಪ ಹೇಳಿ ಸಾಗಿಸುವ ಕೆಲಸವೂ ನಡೆಯುತ್ತಿದೆ. ಜಿಲ್ಲಾಧಿಕಾರಿಗಳು ಕೂಡ ಇದರ ಜವಾಬ್ದಾರಿ ಹೊರಬೇಕಾಗಿದೆ. ಪೊಲೀಸ್ ಇಲಾಖೆಯಾಗಲಿ, ಗಣಿ ಇಲಾಖೆಯಾಗಲಿ, ಸುಮ್ಮನಿರುವುದನ್ನು ನೋಡಿದರೆ ಅನುಮಾನಗಳು ಹುಟ್ಟಿಕೊಳುತ್ತವೆ ಎಂದರು.

ಇದನ್ನೆಲ್ಲಾ ನಿರ್ವಹಿಸಬೇಕಾಗಿದ್ದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಕ್ರಮ ಮರಳುಗಾರಿಕೆ ತಡೆಯಬೇಕಾದವರೇ ಶಾಮೀಲಾಗಿರುವುದರಿಂದ ಇಲಾಖೆಯ ಒಳಗಿನವರೇ ಈ ಅಧಿಕಾರಿಗಳನ್ನು ಗೋವಿಂದ ಗೋವಿಂದ ಎಂದು ಹಾಸ್ಯದಲ್ಲಿ ಹೇಳುತ್ತಾರೆ. ಇದು ನಿಜ ಕೂಡ. ಈ ಗೋವಿಂದ ಅಂಡ್ ಗೋವಿಂದ ಕಂಪನಿಯವರು ಇಡೀ ಮರಳನ್ನೇ ಗೋವಿಂದ ಮಾಡಿದರೂ ಕೂಡ ಆಶ್ಚರ್ಯವಿಲ್ಲ ಎಂದರು.

ಈ ರೀತಿಯ ಸಂಗ್ರಹವಾದ ಮರಳು ಮತ್ತೆ ಅನ್ಯರ ಪಾಲಾಗುವುದರಿಂದ ಇದು ಮತ್ತೊಂದು ಬೆಲೇಕೇರಿ ಪ್ರಕರಣಕ್ಕೆ ಸಾಕ್ಷಿಯಾಗಲಿದೆ. ಅಲ್ಲದೇ, ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತ್ತಿರುವುದರಿಂದ ಸರ್ಕಾರಕ್ಕೆ ಕೋಟಿ ಕೋಟಿ ಹಣ ನಷ್ಟವಾಗುತ್ತಿದೆ. ಇಲಾಖೆಗಳು, ಜಿಲ್ಲಾಧಿಕಾರಿಗಳು ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಶಿವಮೊಗ್ಗ ಜಿಲ್ಲೆಯ ಈ ಅಕ್ರಮ ಮರಳುಗಾರಿಕೆ ಹಗರಣ ಇಡೀ ರಾಜ್ಯದಲ್ಲಿಯೇ ಬಹುದೊಡ್ಡ ಸುದ್ದಿಯಾಗಲಿದೆ ಎಂದರು.

ಗೋಷ್ಠಿಯಲ್ಲಿ ಪ್ರಮುಖರಾದ ದೀಪಕ್ ಸಿಂಗ್, ಎಚ್.ಎಂ. ಸಂಗಯ್ಯ, ರಮೇಶ್ ನಾಯ್ಕ್, ವೆಂಕಟೇಶ್, ರಘು, ದಯಾನಂದ್, ಸುನಿಲ್ ಗೌಡ, ಸಂಜಯ್ ಕಶ್ಯಪ್, ರಾಘವೇಂದ್ರ ಉಡುಪ, ಲೋಹಿತ್, ಚಂದ್ರಶೇಖರ್ ಮೊದಲಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಲಾಶಯ ಹಿನ್ನೀರಿನ ಗ್ರಾಮಗಳಿಗೆ ಆದ್ಯತೆ
ಕಾಡಲ್ಲಿ ರೌಡಿಪಾರ್ಟಿ, ತಲೆ ತಗ್ಗಿಸುವ ವಿಷಯ: ರೈತಸಂಘ