ಗುಣಮಟ್ಟದ ಹಾಲು ಪೂರೈಕೆ ಮಾಡಿ : ಎಂ. ನಂಜುಂಡಸ್ವಾಮಿ

KannadaprabhaNewsNetwork | Published : Apr 28, 2025 11:47 PM

ಸಾರಾಂಶ

ಗುಣಮಟ್ಟದ ಹಾಲು ಪೂರೈಕೆ ಮಾಡಿದರೆ ಹೈನುಗಾರರಿಗೂ ಹೆಚ್ಚು ಹಣ ಬರುವುದರ ಜೊತೆಗೆ ನಮ್ಮ ಒಕ್ಕೂಟಕ್ಕೂ ಹೆಚ್ಚು ಅನುಕೂಲವಾಗುತ್ತದೆ ಎಂದು ಚಾಮುಲ್ ಅಧ್ಯಕ್ಷ ಎಂ. ನಂಜುಂಡಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಗುಣಮಟ್ಟದ ಹಾಲು ಪೂರೈಕೆ ಮಾಡಿದರೆ ಹೈನುಗಾರರಿಗೂ ಹೆಚ್ಚು ಹಣ ಬರುವುದರ ಜೊತೆಗೆ ನಮ್ಮ ಒಕ್ಕೂಟಕ್ಕೂ ಹೆಚ್ಚು ಅನುಕೂಲವಾಗುತ್ತದೆ ಎಂದು ಚಾಮುಲ್ ಅಧ್ಯಕ್ಷ ಎಂ. ನಂಜುಂಡಸ್ವಾಮಿ ಹೇಳಿದರು.

ಸೋಮವಾರ ತಾಲೂಕಿನ ಕಟ್ನವಾಡಿ-ಕಿನಕಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಸಭಾಭವನ ಉದ್ಘಾಟನೆ ಮತ್ತು ೨೦೨೪-೨೫ ನೇ ಸಾಲಿನ ವಾರ್ಷಿಕ ಸಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಚಾಮುಲ್‌ನಲ್ಲಿ ಪ್ರಸ್ತುತ ೭೫ ಸಾವಿರ ಲೀ. ಹಾಲು ಮಾರಾಟವಾಗುತ್ತಿದೆ. ಅಲ್ಲದೆ ದೇಶದ ವಿವಿಧ ಭಾಗಗಳಿಗೆ ಗುಡ್‌ಲೈಫ್ ಹಾಲು ಪೂರೈಕೆ ಮಾಡಲಾಗುತ್ತಿದೆ. ಇಡೀ ದೇಶದಲ್ಲಿ ಕರ್ನಾಟಕ ಹಾಲು ಮಹಾಮಂಡಳಿ ೨ ನೇ ಸ್ಥಾನದಲ್ಲಿದೆ. ಪ್ರತಿನಿತ್ಯ ೯೦ ಲಕ್ಷ ಲೀ. ಹಾಲು ಉತ್ಪಾದನೆ ಮಾಡುತ್ತಿದೆ. ೧೬೫ ಉತ್ಪನ್ನಗಳನ್ನು ನಾವು ಮಾಡುತ್ತಿರುವುದು ನಮ್ಮ ಹೆಮ್ಮೆಯಾಗಿದೆ. ದೇಶ ವಿದೇಶಗಳಿಂದ ನಮ್ಮ ಬ್ರಾಂಡ್ ಗುಣಮಟ್ಟಕ್ಕೆ ಪ್ರಸಿದ್ಧಿ ಪಡೆದಿದೆ. ಜಿಲ್ಲೆಯಲ್ಲಿ ೪೬೫ ಸಂಘಗಳಿವೆ. ಯಳಂದೂರು ತಾಲೂಕು ಚಿಕ್ಕ ತಾಲೂಕಾಗಿದೆ. ಇಲ್ಲಿ ೧೨ ಮಹಿಳಾ ಸಂಘಗಳೂ ಸೇರಿದಂತೆ ಒಟ್ಟು ೨೫ ಸಂಘಗಳು ಇವೆ. ಹೈನುಗಾರರಿಗೆ ನಮ್ಮ ಒಕ್ಕೂಟದ ವತಿಯಿಂದ ಸಾಲ ಸೌಲಭ್ಯ, ರಾಸುಗಳಿಗೆ ಅನೇಕ ಆರೋಗ್ಯ ಸೌಲಭ್ಯಗಳಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಚಾಮುಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ. ರಾಜ್‌ಕುಮಾರ್ ಮಾತನಾಡಿ, ಚಾಮುಲ್‌ನಿಂದ ಕಟ್ಟಡಗಳ ದುರಸ್ತಿ ಹಾಗೂ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರತಿ ವರ್ಷವೂ ೧ ಕೋಟಿ ರು. ಮೀಸಲಿಡಲಾಗಿದೆ. ಪ್ರತಿ ತಾಲೂಕಿಗೂ ೧೦ ಲಕ್ಷ ರು. ನೀಡಲಾಗುತ್ತಿದೆ. ಯಳಂದೂರಿನಲ್ಲಿ ಒಟ್ಟು ೧೮ ಕಟ್ಟಡಗಳಿದ್ದು, ಇನ್ನೂ ೭ ಕಡೆ ಕಟ್ಟಡಗಳನ್ನು ನಿರ್ಮಿಸಿಕೊಳ್ಳಬೇಕಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ನಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ೩೪ ಸಾವಿರ ಹಾಲು ಉತ್ಪಾಕದರು ಇದ್ದಾರೆ. ಸರಾಸರಿ ಒಬ್ಬರು ಪ್ರತಿನಿತ್ಯ ೭ ಲೀ. ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಆದರೆ ಯಳಂದೂರು ತಾಲೂಕಿನಲ್ಲಿ ಕೇವಲ ೮೫೦೦ ಲೀ. ಹಾಲು ಮಾತ್ರ ಉತ್ಪಾದನೆಯಾಗುತ್ತಿದೆ. ಹಾಗಾಗಿ ಇಲ್ಲಿನ ಸರಾಸರಿ ೫ ಲೀ.ಗೆ ಮಾತ್ರ ನಿಲ್ಲುತ್ತಿದೆ. ಇದು ಇನ್ನು ಹೆಚ್ಚಬೇಕು, ತಾಲೂಕಿನಿಂದ ಇನ್ನೂ ೪ ಸಾವಿರ ಲೀ. ಹಾಲು ಹೆಚ್ಚಾಗಿ ಬರಬೇಕು ಈ ನಿಟ್ಟಿನಲ್ಲಿ ಹೈನುಗಾರರು ಇನ್ನಷ್ಟು ಹಾಲಿನ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಚಾಮುಲ್‌ನ ಸಹಾಯಕ ವ್ಯವಸ್ಥಾಪಕ ಜಿ. ಪ್ರಭು, ವಿಸ್ತರಾಣಾಧಿಕಾರಿ ರಾಜು, ಮಾಜಿ ಅಧ್ಯಕ್ಷ ನಾಗೇಂದ್ರ ಮಾತನಾಡಿದರು. ಸಂಘದ ಅಧ್ಯಕ್ಷ ಎನ್. ಕುಮಾರ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಸಿದ್ದರಾಜು, ಉಪಾಧ್ಯಕ್ಷ ನಿಂಗಶೆಟ್ಟಿ, ನಿರ್ದೇಶಕರಾದ ಕೆ.ಬಿ. ಶಿವಣ್ಣ, ಕೆ.ಎಸ್. ಬಸವಣ್ಣ, ನಟರಾಜು, ಕೆ.ಬಿ. ಮಹದೇವಸ್ವಾಮಿ, ಅಂಕಶೆಟ್ಟಿ, ಜಿ. ಜಯಪ್ಪ, ರಂಗಸ್ವಾಮಿ, ಭಾಗ್ಯಮ್ಮ ರಾಚಪ್ಪಾಜಿ ಹಾಲು ಪರೀಕ್ಷಕ ಸಿದ್ದೇಶ ಇದ್ದರು.

Share this article