ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರೈತರ ಸಂಸ್ಥೆಯಾದ ಮನ್ಮುಲ್‌ನ ಡೇರಿಗಳಿಗೆ ಉತ್ಪಾದಕರು ಗುಣಮಟ್ಟದ ಹಾಲು ಸರಬರಾಜು ಮಾಡಬೇಕು ಎಂದು ನಿರ್ದೇಶಕ ಡಾಲು ರವಿ ಕರೆ ನೀಡಿದರು.ತಾಲೂಕಿನ ಹರಪನಹಳ್ಳಿ ಕ್ರಾಸ್ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಖಾಸಗಿ ಡೈರಿಗಳಿಗೆ ಹಾಲು ಪೂರೈಕೆ ಮಾಡುವುದರಿಂದ ರೈತ ಸಮುದಾಯಕ್ಕೆ ಯಾವುದೇ ಲಾಭ ಇಲ್ಲ. ಸಹಕಾರ ಸಂಘಗಳು ರೈತರ ಆಸ್ತಿ. ಇವುಗಳ ಪೋಷಣೆ ಮತ್ತು ಸಂರಕ್ಷಣೆ ರೈತರ ಜವಾಬ್ದಾರಿ ಎಂದರು.
ಮನ್ಮುಲ್‌ಗೆ ಹಾಲು ಸರಬರಾಜು ಮಾಡುವುದರಿಂದ ಒಕ್ಕೂಟ ರೈತರಿಗೆ ಅನೇಕ ಸೌಲಭ್ಯ ಒದಗಿಸುತ್ತದೆ. ಸರ್ಕಾರದಿಂದ 5 ರು. ಪ್ರೋತ್ಸಾಹ ಧನ ಸಿಗುತ್ತದೆ. ಒಂದು ವೇಳೆ ಹಾಲು ಉತ್ಪಾದಕರು ಮರಣ ಹೊಂದಿದರೆ ಅವರ ಅಂತಿಮ ಸಂಸ್ಕಾರಕ್ಕೆ 15 ಸಾವಿರ ರು. ಸಿಗುತ್ತದೆ. ರಾಸುಗಳಿಗೆ ಹಾಲು ಉತ್ಪಾದಕರು ವಿಮೆ ಮಾಡಿಸಿದ್ದರೆ 50 ಸಾವಿರ ದಿಂದ 60 ಸಾವಿರ ಹಣವು ಉತ್ಪಾದಕರ ಖಾತೆಗೆ ಜಮಾ ಆಗುತ್ತದೆ ಎಂದರು.ಸಬ್ಸಿಡಿ ರೂಪದಲ್ಲಿ ಹಾಲು ಕರೆಯುವ ಯಂತ್ರ, ಚಾಪ್ ಕಟರ್, ಮ್ಯಾಟ್ ಹೀಗೆ ಹಲವು ಸೌಲಭ್ಯಗಳನ್ನು ಕಲ್ಪಿಸುತ್ತೇವೆ. ಮಕ್ಕಳ ಉನ್ನತ ವ್ಯಾಸಂಗ ಪ್ರೋತ್ಸಾಹಧನ 40 ರಿಂದ 50 ಸಾವಿರ ರು. ನೀಡಲಾಗುತ್ತದೆ ಎಂದರು.
ಮನ್ಮುಲ್ ನಿರ್ದೇಶಕ ಎಂ.ಬಿ.ಹರೀಶ್ ಮಾತನಾಡಿ, ಹಾಲಿನ ಡೇರಿಯು ಗ್ರಾಮದ ಹಾಗೂ ಹಾಲು ಉತ್ಪಾದಕರ ಆಸ್ತಿ ಎಂದರೆ ತಪ್ಪಾಗಲಾರದು. ರೈತರು ತಮ್ಮ ಸ್ವಂತ ಆಸ್ತಿಯನ್ನು ಜೋಪಾನವಾಗಿ ರಕ್ಷಿಸುವ ಹಾಗೆ ಹಾಲಿನ ಡೇರಿಯನ್ನು ಕರೆ ನೀಡಿದರು.ಈ ವೇಳೆ ಮನ್ಮುಲ್ ಉಪ ವ್ಯವಸ್ಥಾಪಕ ಪ್ರಸಾದ್, ಮಾರ್ಗ ವಿಸ್ತರಣಾಧಿಕಾರಿ ಗುರುರಾಜ್, ಗ್ರಾಪಂ ಸದಸ್ಯರಾದ ಶ್ರೀನಿವಾಸ್, ಸತ್ಯ, ಸಂಘದ ಉಪಾಧ್ಯಕ್ಷ ರಾಮೇಗೌಡ, ನಿರ್ದೇಶಕರಾದ ಚಂದ್ರಚಾರಿ, ಸೋಮಶೇಖರ್, ಜಯರಾಂ, ಮಣಿ, ದೀಪಾ, ಕುಮಾರ್, ವೆಂಕಟಾಚಲ ಮನೋಜ್, ವೇದಾವತಮ್ಮ, ಸವಿತಾ, ಸೇರಿದಂತೆ ಹಲವರು ಹಾಜರಿದ್ದರು.