ಕಬ್ಬು ಅಚ್ಚುಕಟ್ಟು 11 ಸಾವಿರ ಎಕರೆಯಲ್ಲಿದೆ. 5.5 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಯುವ ಗುರಿ ಹೊಂದಲಾಗಿದೆ. ಪ್ರತಿನಿತ್ಯ 4 ಸಾವಿರ ಮೆಟ್ರಿಕ್ ಟನ್ ಕಬ್ಬು ನುರಿಯಲಾಗುವುದು. ಕಳೆದ ಬಾರಿ ಕಬ್ಬು ಇಳುವರಿ ಶೇ.9.26 ಲಭಿಸಿದೆ. ಕಬ್ಬು ಸರಬರಾಜು ಮಾಡಿದ ಎಲ್ಲ ರೈತರಿಗೆ ಸಕಾಲದಲ್ಲಿ ಎಫ್‌ಆರ್‌ಪಿ ದರದಂತೆ ಹಣ ಪಾವತಿಸಲಾಗಿದೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ರೈತರು ಬೆಳೆದ ಕಬ್ಬನ್ನು ಹೇಮಗಿರಿ ಷುಗರ್ಸ್‌ಗೆ ಸರಬರಾಜು ಮಾಡಿ ಕಾರ್ಖಾನೆ ಉಳಿಸಿ ಬೆಳೆಸಬೇಕು ಎಂದು ಹಿರಿಯ ಪ್ರಧಾನ ವ್ಯವಸ್ಥಾಪಕ ಆರ್.ವರದರಾಜನ್ ತಿಳಿಸಿದರು.
ಸಮೀಪದ ಮಾಕವಳ್ಳಿ ಹೇಮಗಿರಿ ಷುಗರ್ಸ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ನುರಿಯುವಿಕೆಗೆ ಗುರುವಾರ ಶೃಂಗೇರಿ ಶಾರದಾ ಪೀಠದ ವಿದ್ಯಾಶಂಕರಶರ್ಮ ನೇತೃತ್ವದಲ್ಲಿ ದುರ್ಗಾಹೋಮ, ಗಣಹೋಮ, ಯಂತ್ರೋಪಕರಣ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಬ್ಬು ಅಚ್ಚುಕಟ್ಟು 11 ಸಾವಿರ ಎಕರೆಯಲ್ಲಿದೆ. 5.5 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಯುವ ಗುರಿ ಹೊಂದಲಾಗಿದೆ. ಪ್ರತಿನಿತ್ಯ 4 ಸಾವಿರ ಮೆಟ್ರಿಕ್ ಟನ್ ಕಬ್ಬು ನುರಿಯಲಾಗುವುದು. ಕಳೆದ ಬಾರಿ ಕಬ್ಬು ಇಳುವರಿ ಶೇ.9.26 ಲಭಿಸಿದೆ. ಕಬ್ಬು ಸರಬರಾಜು ಮಾಡಿದ ಎಲ್ಲ ರೈತರಿಗೆ ಸಕಾಲದಲ್ಲಿ ಎಫ್‌ಆರ್‌ಪಿ ದರದಂತೆ ಹಣ ಪಾವತಿಸಲಾಗಿದೆ ಎಂದರು.
ಪ್ರಸಕ್ತ ಹಂಗಾಮಿಗೆ ನಿರೀಕ್ಷಿತ ಮಟ್ಟದಲ್ಲಿ ಕಬ್ಬು ಬೆಳೆ ಇಲ್ಲವಾಗಿದೆ. ಮಧ್ಯವರ್ತಿಗಳನ್ನು ಅವಲಂಭಿಸದೆ ರೈತರು ಹೊರಗಡೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡದೆ ನಮ್ಮ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಬೇಕು. ಬಳ್ಳಾರಿ ಮತ್ತಿತರ ಹೊರ ಪ್ರದೇಶದಿಂದ ಸುಮಾರು 25 ಕಬ್ಬುಕಟಾವು ತಂಡಗಳು ಬರಲಿದ್ದಾರೆ. ಹಕ್ಕಿ ಹಬ್ಬವನ್ನು ಮುಗಿಸಿಕೊಂಡು ಎಲ್ಲ ತಂಡ ಜುಲೈ 14ರ ನಂತರ ಬರುವರು ಎಂದರು.
ಪ್ರತಿ ಟನ್ ಕಬ್ಬು ಕಟಾವಿಗೆ ಕಟಿಂಗ್ ಹೊರತು ಪಡಿಸಿ 500 ರು. ದರ ನಿಗದಿ ಪಡಿಸಲಾಗಿದೆ. ಕಳೆದ ಬಾರಿ ಬೇಸಿಗೆ ಬೆಳೆ ಕಬ್ಬು ಸರಬರಾಜುದಾರರಿಗೆ ಹೆಚ್ಚುವರಿಯಾಗಿ 100 ರು. ಪ್ರೋತ್ಸಾಹಧನ ನೀಡಲಾಗುವುದು. ಸಾಲದ ರೂಪದಲ್ಲಿ ಒಂದು ಕಣ್ಣಿನ ಬಿತ್ತನೆ ಬೀಜ ವಿತರಣೆ, ಶೇ.50ರ ರಿಯಾಯ್ತಿಯಲ್ಲಿ ಸೂಕ್ಷಾಣು ಪೋಷಕಾಂಶ ವಿತರಣೆ, ಪ್ರೆಸ್ ಮಡ್ಡಿಗೆ ಟನ್‌ಗೆ 140 ರು.ನಂತೆ ವಿತರಿಸಲಾಗುತ್ತಿದೆ. ರೈತರು ಸದುಪಯೋಗಪಡಿಸಿಕೊಳ್ಳಿ ಎಂದು ವಿನಂತಿಸಿದರು.
ಕಬ್ಬು ಬೆಳೆಗಾರ ಸಂಘದ ಬೋರಾಪುರ ಮಂಜುನಾಥ್ ಮಾತನಾಡಿ, ಶುಂಠಿ ರೀತಿ ಕಬ್ಬು ಬೆಳೆಯಲು ರೈತರು ಮುಂದಾಗಬೇಕು. ಕಬ್ಬು ಬೆಳೆಗಾರರಿಗೆ ಸರ್ಕಾರ 50 ರು. ನೀಡಿದ್ದು, ಉಳಿಕೆ ಹಣವಾದ 50 ರು .ಗಳನ್ನು ತ್ವರಿತವಾಗಿ ಕಾರ್ಖಾನೆ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಕಾರ್ಖಾನೆಯ ವಿವಿಧ ವಿಭಾಗದ ಎಂಜಿನಿಯರಿಂಗ್ ಮುಖ್ಯಸ್ಥರಾದ ಪಿ.ಎಸ್.ಮೇಯನ್, ಅಶೋಕ್‌ಕುಮಾರ್, ಸೆಂಥಿಲ್‌ಕುಮಾರ್, ಆರ್.ಇ.ಕುಮಾರ್, ಜಿ.ಆರ್.ದತ್ತಾತ್ರೇಯ, ಶಿವರಾಂ, ಕುಮಾರಸ್ವಾಮಿ, ಕಬ್ಬು ಬೆಳೆಗಾರ ಸಂಘದಕುಮಾರ್, ಕಾಯಿ ಮಂಜೇಗೌಡ, ವಡಕಹಳ್ಳಿ ಮಂಜೇಗೌಡ, ರಾಮೇಗೌಡ, ಕೃಷ್ಣೇಗೌಡ, ಲಾರಿ, ಟ್ರಾಕ್ಟರ್ ಮಾಲೀಕ ಸಂಘ, ಕಾರ್ಮಿಕ ಸಿಬ್ಬಂದಿ ವರ್ಗದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.