ಕನ್ನಡಪ್ರಭ ವಾರ್ತೆ ಬೆಳಗಾವಿ
ಈ ಭಾಗದ ಅಭಿವೃದ್ಧಿಗೆ ಕೈ ಅಭ್ಯರ್ಥಿ ಡಾ.ಅಂಜಲಿ ನಿಂಬಾಳಕರ್ ಕೈ ಬಲಪಡಿಸಲು ಕಾರ್ಯಕರ್ತರು ಮುಂದಾಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕರೆ ನೀಡಿದರು.ಖಾನಾಪುರ ಪಟ್ಟಣದ ಶುಭಂ ಗಾರ್ಡನ್‌ನಲ್ಲಿ ನಡೆದ ಉತ್ತರ ಕನ್ನಡ ಲೋಕಸಭೆ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಕಳೆದ 9 ತಿಂಗಳಲ್ಲಿ ಪಕ್ಷ ಮತ್ತೊಂದು ಅವಕಾಶ ನೀಡಿದೆ. ಆದ್ದರಿಂದ ಕಾರ್ಯಕರ್ತರು ಹಾಗೂ ಕ್ಷೇತ್ರದ ಮತದಾರರು ಹೆಚ್ಚು ಮತಗಳನ್ನು ನೀಡಿ ಕ್ಷೇತ್ರ ಅಭಿವೃದ್ಧಿ ಮಾಡಲು ಒಂದು ಅವಕಾಶ ನೀಡಬೇಕು ಎಂದು ಹೇಳಿದರು.
ಲೋಕಸಭೆಯಲ್ಲಿ ನಮ್ಮ ಸರ್ಕಾರ ಬಂದರೆ ಇನ್ನೂ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುವುದು. ಸಬ್ಸಿಡಿಯಲ್ಲಿ ₹ 1 ಲಕ್ಷದವರೆಗೆ ಉದ್ಯೋಗ ಸಾಲ. ವೈದ್ಯಕೀಯ ಸೌಲಭ್ಯ , ಶಿಕ್ಷಣ ಸೌಲಭ್ಯ ಸೇರಿದಂತೆ ಇನ್ನುಳಿದ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಮುಖ್ಯವಾಗಿ ಈ ಕ್ಷೇತ್ರಕ್ಕೆ ಬೇಕಾಗಿರುವ ರಸ್ತೆ ಸುಧಾರಣೆ ಸೇರಿದಂತೆ ವಿವಿಧ ಕಾಮಗಾರಿ ನಡೆಸಲು ಮತದಾರರು ಕೈ ಅಭ್ಯರ್ಥಿಗೆ ಹೆಚ್ಚು ಮತ ನೀಡಲು ಮುಂದಾಗಬೇಕು. ಅಂದಾಗ ಮಾತ್ರ ಹೆಚ್ಚೆಚ್ಚು ಯೋಜನೆ ಜಾರಿಗೆ ತಂದು ಕ್ಷೇತ್ರ ಅಭಿವೃದ್ಧಿ ಮಾಡಲು ಸಹಾಯಕವಾಗುತ್ತದೆ ಎಂದರು.ಕಾಂಗ್ರೆಸ್ ಸೇರ್ಪಡೆಯಾದ ಜೆಡಿಎಸ್-ಬಿಜೆಪಿ ಕಾರ್ಯಕರ್ತರು: ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಯೋಜನೆಗಳನ್ನು ಮೆಚ್ಚಿ ಸ್ಥಳೀಯ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಸಚಿವ ಸತೀಶ್ ಜಾರಕಿಹೊಳಿ ಸಮ್ಮುಖದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಕೈ ಅಭ್ಯರ್ಥಿ ಅಂಜಲಿ ನಿಂಬಾಳಕರ್, ಶಾಸಕ ಆಸೀಫ್ ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ರಿಯಾಜ್ ಪಟೇಲ್, ಡಾ.ಜವಳಿ, ಆಲಿಮ್ ಅತ್ತಾರ, ಸಾಧಿಕ್ ಬಡೆಗರ, ಮಝರ್ ಖಾನಾಪೂರ, ಪ್ರಕಾಶ ,ಪ್ರಕಾಶ ಮಾದರ, ಲಾಲ ಪಟೇಲ್, ರಫೀಕ್ ವಾರಿಮನಿ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಇದ್ದರು.