ಕಾಂಗ್ರೆಸ್ ಅಭ್ಯರ್ಥಿ ಗಡ್ಡದೇವರಮಠ ಬೆಂಬಲಿಸಿ-ಡಾ. ಕುಬೇರಪ್ಪ

KannadaprabhaNewsNetwork | Published : May 4, 2024 12:33 AM

ಸಾರಾಂಶ

ಕಾಂಗ್ರೆಸ್ ಸರ್ಕಾರ ಶಿಕ್ಷಕರು ಹಾಗೂ ಪದವೀಧರರಿಗೆ ಅನೇಕ ಸೌಲಭ್ಯಗಳನ್ನು ನೀಡಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಋಣ ತೀರಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪದವೀಧರರ ಘಟಕದ ರಾಜ್ಯಾಧ್ಯಕ್ಷ ಡಾ.ಆರ್.ಎಂ. ಕುಬೇರಪ್ಪ ಮನವಿ ಮಾಡಿದರು.

ಹಾವೇರಿ: ಕಾಂಗ್ರೆಸ್ ಸರ್ಕಾರ ಶಿಕ್ಷಕರು ಹಾಗೂ ಪದವೀಧರರಿಗೆ ಅನೇಕ ಸೌಲಭ್ಯಗಳನ್ನು ನೀಡಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಋಣ ತೀರಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪದವೀಧರರ ಘಟಕದ ರಾಜ್ಯಾಧ್ಯಕ್ಷ ಡಾ.ಆರ್.ಎಂ. ಕುಬೇರಪ್ಪ ಮನವಿ ಮಾಡಿದರು. ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರನೇ ವೇತನ ಆಯೋಗದ ಎಲ್ಲ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಿದ್ದಾರೆ. ಅಲ್ಲದೇ ಅವರ ಹಿಂದಿನ ಅವಧಿಯಲ್ಲಿ ಲಕ್ಷಗಟ್ಟಲೇ ಉದ್ಯೋಗ ಸೃಷ್ಟಿಸಿ ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ನೀಡಿದ್ದಾರೆ. ಹಲವಾರು ವರ್ಷಗಳಿಂದ ರಾಜ್ಯದ ಅನುದಾನಿತ ಪದವಿ ಕಾಲೇಜುಗಳಲ್ಲಿ ಖಾಲಿಯಾದ ಹುದ್ದೆಗಳನ್ನು ತುಂಬಲು ಅನುಮತಿ ನೀಡಿದ್ದರಿಂದ ಪಿಎಚ್‌ಡಿ ಪಡೆದು ನಿರುದ್ಯೋಗಿ ಆಗಿದ್ದ ಸಾವಿರಾರು ಯುವಕರಿಗೆ ಉದ್ಯೋಗದ ಅವಕಾಶ ನೀಡಿದ್ದಾರೆ ಎಂದರು. ಇತ್ತೀಚೆಗೆ ಅತಿಥಿ ಉಪನ್ಯಾಸಕರು ಮಾಡಿದ ಹೋರಾಟಕ್ಕೆ ಸ್ಫಂದಿಸಿ ಎಲ್ಲ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಿ ವೇತನ ಹೆಚ್ಚಿಸಿದ್ದಾರೆ. ಅವರಿಗೆ ಆರೋಗ್ಯ ವಿಮೆ ಜಾರಿಗೊಳಿಸಿ, ನಿವೃತ್ತಿಗೊಂಡಾಗ ಪ್ರತಿಯೊಬ್ಬರಿಗೂ ೫ ಲಕ್ಷ ರು. ಇಡಿಗಂಟು ನೀಡುವುದಾಗಿ ಆದೇಶ ಮಾಡಿದ್ದಾರೆ. ಈಗಾಗಲೇ ಏಳನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಮಧ್ಯಂತರ ಪರಿಹಾರ ಘೋಷಿಸಿದ್ದು, ಅತೀ ಶೀಘ್ರದಲ್ಲಿ ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲಿದ್ದಾರೆ ಎಂದರು.ಜಿಲ್ಲೆಗೊಂದು ವಿಶ್ವವಿದ್ಯಾಲಯ ಹಾಗೂ ಎನ್‌ಇಪಿಯನ್ನು ಬಿಜೆಪಿ ಜಾರಿಗೊಳಿಸುವಾಗಲೇ ಕಾಂಗ್ರೆಸ್ ವಿರೋಧಿಸಿತ್ತು. ಇದನ್ನು ಮುಂದುವರೆಸಬೇಕೋ, ಬೇಡವೋ ಎಂಬ ಬಗ್ಗೆ ಸಿದ್ದರಾಮಯ್ಯ ಸರ್ಕಾರ ಸಮಿತಿ ರಚಿಸಿದೆ. ಈ ಸಮಿತಿ ವರದಿ ಬರುವುದು ತಡವಾಯಿತು. ಈ ವರದಿ ಆಧಾರದಲ್ಲಿ ಕೆಲ ನಿರ್ಧಾರಗಳನ್ನು ಚುನಾವಣೆ ನಂತರ ಪ್ರಕಟಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಪ್ರಮುಖರಾದ ಲಕ್ಷ್ಮಣ ಲಮಾಣಿ, ಎಸ್.ಎಚ್. ಹುಚ್ಚಗೊಂಡರ್, ಈರಪ್ಪ ಲಮಾಣಿ ಇತರರು ಇದ್ದರು.

Share this article