ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮುದ್ದ ಹನುಮೇಗೌಡ ಅವರು ಅತ್ಯಂತ ಕ್ರಿಯಾಶೀಲ,ಬುದ್ದಿವಂತ ಸಂಸದರೆಂದು ಹೆಸರು ಮಾಡಿದವರು, ಇಂತಹವರು ಸಂಸದರಾಗಿ ಆಯ್ಕೆಯಾದರೆ ಕೇಂದ್ರದಲ್ಲಿ ಜನಪರ, ರೈತಪರ, ಬಡವರಪರ, ಅಲ್ಪಸಂಖ್ಯಾತರ ಪರ ಕಾಯ್ದೆಗಳು ಜಾರಿಯಾಗಲು ಸಾಧ್ಯ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.ನಗರದ ಧ್ಹಾನಾ ಫ್ಯಾಲೇಸ್‌ನಲ್ಲಿ ಜಿಲ್ಲಾ ಕಾಂಗ್ರೆಸ್‌ನ ಆಶ್ರಯದಲ್ಲಿ ಕೆಪಿಸಿಸಿ ಮೈನಾರಿಟಿ ಘಟಕದ ವತಿಯಿಂದ ಆಯೋಜಿಸಿದ್ದ ಅಲ್ಪಸಂಖ್ಯಾತ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು, ಏಪ್ರಿಲ್ 26 ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನದಲ್ಲಿ ಎಲ್ಲಾ ಮುಸ್ಲಿಮರೂ ಪಾಲ್ಗೊಂಡು ಅತಿ ಹೆಚ್ಚಿನ ಮತಗಳನ್ನು ಮದ್ದಹನುಮೇಗೌಡರಿಗೆ ನೀಡುವ ಮೂಲಕ ಅವರನ್ನು ಲೋಕಸಭೆಗೆ ಕಳುಹಿಸಿ ಸಂವಿಧಾನ ರಕ್ಷಣೆಗೆ ನಾವೆಲ್ಲರೂ ನಾಂದಿ ಹಾಡಬೇಕಾಗಿದೆ ಎಂದರು.
ಕಳೆದ ಎರಡು, ಮೂರು ಚುನಾವಣೆಗಳಲ್ಲಿ ಮುಸ್ಲಿಂ ಏರಿಯಾಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿದೆ. ಇದರ ಪರಿಣಾಮ ಕಾಂಗ್ರೆಸ್ ಪಕ್ಷದ ಅನೇಕರು ಕೆಲವೇ ಸಾವಿರ ಮತಗಳ ಅಂತರದಲ್ಲಿ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಆದರೆ ಈ ಬಾರಿ ಹಾಗಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಈ ಹಿಂದಿಗಿಂತ ಕನಿಷ್ಠ ಶೇ ೧೦-೧೫ರಷ್ಟು ಮತಗಳು ಹೆಚ್ಚಾದರೆ ಕಾಂಗ್ರೆಸ್ ಪಕ್ಷದ ಮತ್ತಷ್ಟು ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಹಾಗಾಗಿ ಮತದಾನದ ಪ್ರಮಾಣ ಹೆಚ್ಚಳಕ್ಕೆ ಒತ್ತು ನೀಡುವಂತೆ ಜಮೀರ್ ಅಹಮದ್ ಸಲಹೆ ನೀಡಿದರು.ಅಲ್ಪಸಂಖ್ಯಾತರ ಮುಂದೆ ಹಲವಾರು ಸವಾಲುಗಳಿವೆ, ಹಿಜಾಬ್, ಹಲಾಲ್,ಮೀಸಲಾತಿ ರದ್ದು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಇದಕ್ಕೆ ಚುನಾವಣೆಯೇ ಶಾಶ್ವತ ಪರಿಹಾರವಾಗಿದ್ದು, ಕಾಂಗ್ರೆಸ್ ಪಕ್ಷದ ಎಂಪಿಗಳು ಹೆಚ್ಚು ಜನರು ಆಯ್ಕೆಯಾದರೆ,ನಮ್ಮ ಶೈಕ್ಷಣಿಕ,ಧಾರ್ಮಿಕ,ಅರ್ಥಿಕ ಹಕ್ಕುಗಳಿಗೆ ಕೊಡಲಿಪೆಟ್ಟು ಕೊಡಲು ಹೊರಟವರಿಗೆ ಕಾನೂನಿನ ರೀತಿ ಪಾಠ ಕಲಿಸಬಹುದು. ಇಸ್ಲಾಂ ಎಂದು ದ್ವೇಷವನ್ನು ಬೋಧಿಸಿಲ್ಲ. ನಾವು ಯಾರನ್ನು ದ್ವೇಷಿಸದೆ ಸರಿಯಾದ ಮಾರ್ಗದಲ್ಲಿಯೇ ನಮ್ಮ ಹಕ್ಕುಗಳನ್ನು ಪಡೆಯಲು ಮುಂದಿನ ದಿನಗಳಲ್ಲಿ ಅವಕಾಶ ದೊರೆಯಲಿದೆ ಎಂದರು.
ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್ ಮಾತನಾಡಿ, ದೇಶಕ್ಕೆ ಮೋದಿ ಕೊಡುಗೆ ಏನೂ ಇಲ್ಲ. ಕಾಂಗ್ರೆಸ್ ಸ್ಥಾಪಿಸಿದ ನವರತ್ನ ಕಂಪನಿಗಳಲ್ಲಿ ಒಂದನ್ನೂ ಉಳಿಸದೇ ಮಾರಾಟ ಮಾಡಿರುವುದೇ ಬಿಜೆಪಿಯ ಸಾಧನೆ. ಇದರಿಂದ ಬಡವರು-ಶ್ರೀಮಂತರ ನಡುವಿನ ಕಂದಕ ಹೆಚ್ಚಾಗಿದೆ. ಹಾಗಾಗಿ ಬಡವರು, ದಲಿತರು, ರೈತರ ಪರ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.ಮುಖಂಡರಾದ ಇಕ್ಬಾಲ್ ಅಹಮದ್ ಮಾತನಾಡಿ, ಮುದ್ದಹನುಮೇಗೌಡರು ಸ್ಥಳೀಯರಾಗಿದ್ದು, ಪ್ರತಿ ದಿನ ನಮ್ಮ ಕೈಗೆ ಸಿಗಲಿದ್ದಾರೆ. ಒಂದು ವೇಳೆ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಜಯಗಳಿಸಿದರೆ ಅವರನ್ನು ನೋಡಲು 10 ಸಾವಿರ ರೂ ಖರ್ಚು ಮಾಡಬೇಕಾಗುತ್ತದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಮಾತನಾಡಿ, ಮುಸ್ಲಿಂ ಸಮುದಾಯ ಮತ್ತು ನನ್ನ ನಡುವೆ ಅವಿನಾಭಾವ ಸಂಬಂಧವಿದೆ. ನನ್ನ ಜೀವಿತಾವಧಿಯಲ್ಲಿ ಎಂದಿಗೂ ಧರ್ಮದ ಹೆಸರಿನಲ್ಲಿ ಜನರನ್ನು ಕಡೆಗಣಿಸಿಲ್ಲ ಎಂದರು.ವೇದಿಕೆಯಲ್ಲಿ ಮಾಜಿ ಶಾಸಕರಾದ ಎಸ್.ಷಪಿ ಅಹಮದ್, ಡಾ.ರಫೀಕ್ ಅಹಮದ್,ಮುರುಳೀಧರ ಹಾಲಪ್ಪ, ನಿಖೇತ್‌ರಾಜ್ ಮೌರ್ಯ, ರಾಮಕೃಷ್ಣ, ಗೋವಿಂದರಾಜು,ಇಲಾಯಿ ಸಿಖಂದರ್,ಪ್ರಭಾವತಿ, ಫರೀಧಾ ಬೇಗಂ,ನಯಾಜ್ ಅಹಮದ್, ಮಹೇಶ್, ಜೆ.ಕುಮಾರ್,ಅಸ್ಲಾಂ ಪಾಷ, ಅನ್ವರ್ ಪಾಷ,ಫಯಾಜ್ ಸೇರಿ ಹಲವರು ಉಪಸ್ಥಿತರಿದ್ದರು.