ಕೊಡಗು ತೋಟಗಾರಿಕೆ ಅಭಿವೃದ್ಧಿಗೆ ಸಹಕಾರ: ಚಲುವರಾಯಸ್ವಾಮಿ

KannadaprabhaNewsNetwork | Published : Oct 7, 2024 1:32 AM

ಸಾರಾಂಶ

ಜಿಲ್ಲೆಯಲ್ಲಿ ಕೃಷಿ ತೋಟಗಾರಿಕೆ ಜೊತೆಗೆ ಕಾಫಿ ಮುಖ್ಯ ಬೆಳೆಯಾಗಿದೆ ಎಂದು ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದರು. ಕಾಫಿ ದಸರಾಗೆ ಚಾಲನೆ ನೀಡಿ ಸಚಿವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಜೊತೆಗೆ ಕಾಫಿ ಮುಖ್ಯ ಬೆಳೆಯಾಗಿದ್ದು, ಕಾಫಿ ಜತೆಗೆ ಕೃಷಿ ಮತ್ತು ತೋಟಗಾರಿಕೆಯ ಸಮಗ್ರ ಅಭಿವೃದ್ಧಿಗೆ ಎಲ್ಲ ರೀತಿಯ ಅಗತ್ಯ ಸಹಕಾರ ನೀಡಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಮಡಿಕೇರಿ ನಗರ ದಸರಾ ಸಮಿತಿ ವತಿಯಿಂದ ವಿವಿಧ ಇಲಾಖೆಗಳ ಸಹಕಾರದಲ್ಲಿ ಎರಡು ದಿನಗಳ ಕಾಲ ಏರ್ಪಡಿಸಲಾಗಿರುವ ಕಾಫಿ ಹಾಗೂ ಕೃಷಿ ಸಂಬಂಧಿತ ಮಾಹಿತಿಯುಳ್ಳ ವಸ್ತು ಪ್ರದರ್ಶನ ಮಳಿಗೆ ವೀಕ್ಷಣೆ ಹಾಗೂ ಮೊದಲ ವರ್ಷದ ಕಾಫಿ ದಸರಾಗೆ ಭಾನುವಾರ ಚಾಲನೆ ನೀಡಿ ಸಚಿವರು ಮಾತನಾಡಿದರು.

ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಕೃಷಿ ಮತ್ತು ತೋಟಗಾರಿಕೆ ಸಮಗ್ರ ಅಭಿವೃದ್ಧಿ ಬಗ್ಗೆ ತೋಟಗಾರಿಕೆ ಸಚಿವರ ಜತೆ ಚರ್ಚಿಸಲಾಗಿವುದು. ಹಾಗೆಯೇ ಕಾಫಿ ಬೆಳೆಗಾರರಿಗೆ ಮತ್ತಷ್ಟು ಸಹಕಾರಿ ಕಾರ್ಯಕ್ರಮಗಳನ್ನು ರೂಪಿಸಲು ಸಂಬಂಧಪಟ್ಟವರ ಗಮನ ಸೆಳೆಯಲಾಗುವುದು. ಕಾಫಿ ಬೆಳೆಗಾರರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಗಮನ ಸೆಳೆಯಲಾಗುವುದು ಎಂದರು.

ವರ್ಷದಿಂದ ವರ್ಷಕ್ಕೆ ಭತ್ತ ಬೆಳೆಯುವುದು ಕಡಿಮೆಯಾಗುತ್ತಿದೆ. ಆದ್ದರಿಂದ ಪ್ರಸಕ್ತ ವರ್ಷ ಭತ್ತ ಬೆಳೆಗೆ ಸಹಾಯಧನ ಕಲ್ಪಿಸಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಕೃಷಿ ಹೊಂಡ ನಿರ್ಮಿಸಲು ಉದ್ದೇಶಿಸಲಾಗಿದೆ. ಆ ದಿಸೆಯಲ್ಲಿ ಈ ವರ್ಷ 250 ಕೃಷಿ ಹೊಂಡ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ಕೊಡಗು ಜಿಲ್ಲೆಗೆ ಆಗಬೇಕಿರುವ ಕೆಲಸಗಳ ಸಂಬಂಧ ತೋಟಗಾರಿಕೆ ಸಚಿವರ ಜತೆ ಚರ್ಚಿಸಲಾಗುವುದು. ವಾರಣಾಸಿ ಮಾದರಿಯಲ್ಲಿ ಭಾಗಮಂಡಲದಲ್ಲಿ ‘ಕಾವೇರಿ ಆರತಿ’ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಚಿಂತನೆ ಇದ್ದು, ಜಲ ಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಜತೆ ಮಾತನಾಡಲಾಗುವುದು. ಮಂಡ್ಯ ಸೇರಿದಂತೆ ಇಡೀ ದಕ್ಷಿಣ ರಾಜ್ಯಗಳಿಗೆ ಕುಡಿಯುವ ನೀರು ಮತ್ತು ವ್ಯವಸಾಯಕ್ಕೆ ನೀರು ಕೊಡುವ ಕಾವೇರಿ ಮಾತೆ ಉಗಮ ಸ್ಥಾನ ಇರುವುದು ಕೊಡಗು ಜಿಲ್ಲೆಯಲ್ಲಿ, ಹಾಗಾಗಿ ಕೊಡಗು ಜಿಲ್ಲೆ ಬಗ್ಗೆ ವಿಶೇಷ ಅಭಿಮಾನ ಹಾಗೂ ಕೃತಜ್ಞತೆ ಇದೆ ಎಂದು ಕೃಷಿ ಸಚಿವರು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆ ಹೆಚ್ಚಿನ ಉತ್ಪಾದನೆ ಇದೆ. ಕಾಫಿಯ ರುಚಿ, ಅದರ ಅನುಭವ ಬಗ್ಗೆ ಎಲ್ಲೆಡೆ ಪರಿಚಯ ಆಗಬೇಕು ಎಂದರು.

ಕಾಫಿ ಒಂದು ವಾಣಿಜ್ಯ ಬೆಳೆಯಾಗಿದ್ದು, ಈ ಬೆಳೆಗೆ ಯೋಜನೆ ರೂಪಿಸಬೇಕು. ಕಾಫಿ ಬೆಳೆ ಜತೆಗೆ ಕಿತ್ತಳೆ, ಕರಿಮೆಣಸು ಸೇರಿದಂತೆ ಬೇರೆ ಬೇರೆ ಬೆಳೆ ಬೆಳೆಯಲಾಗುತ್ತಿದೆ. ಆದ್ದರಿಂದ ಮುಂದಿನ ಬಜೆಟ್‌ನಲ್ಲಿ ಏನಾದರೂ ಹೊಸ ಯೋಜನೆ ನೀಡಲಾಗುವುದು. ಕೊಡಗು ವಿಶೇಷ ಸಂಸ್ಕೃತಿ, ಭಾಷೆ ಹೊಂದಿರುವ ವಿಶಿಷ್ಟ ಜಿಲ್ಲೆಯಾಗಿದ್ದು, ನಾಡಿಗೆ ತಮ್ಮದೇ ಆದ ಕೊಡುಗೆ ನೀಡಿದೆ ಎಂದು ಹೇಳಿದರು.

ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಕಾಫಿ ಸೇವಿಸುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳ ಬಗ್ಗೆ ಎಲ್ಲೆಡೆ ಮಾಹಿತಿ ನೀಡುವಂತಾಗಬೇಕು. ಕಾಫಿ ಬೆಳೆಗಾರರ ಸಂಕಷ್ಟ ಸಂಬಂಧ ಕೇಂದ್ರ ಸರ್ಕಾರದ ಗಮನ ಸೆಳೆಯುವಂತಾಗಬೇಕು ಎಂದು ಕೃಷಿ ಸಚಿವರಲ್ಲಿ ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಾ.ಮಂತರ್ ಗೌಡ, ಕಾಫಿ ಬೆಳೆಯ ದರ ಉತ್ತಮವಾಗಿದ್ದರೂ ಸಹ ಕಾಫಿ ಬೆಳೆಗಾರರು ಸಾಲಗಾರರಾಗಿದ್ದಾರೆ. ಆದ್ದರಿಂದ ಕಾಫಿ ಬೆಳೆಗಾರರ ಸಂಕಷ್ಟ ಪರಿಹರಿಸಿ, ಅಗತ್ಯ ಸಹಕಾರ, ಸಹಾಯಧನ ಕಲ್ಪಿಸುವಂತಾಗಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಹಾಗೂ ಮಡಿಕೇರಿ ನಗರ ಸಮಿತಿ ಅಧ್ಯಕ್ಷ ವೆಂಕಟ್ ರಾಜಾ ಮಾತನಾಡಿ, ಮಡಿಕೇರಿ ದಸರಾವನ್ನು ಎಲ್ಲರ ಸಹಭಾಗಿತ್ವದಿಂದ ಜನೋತ್ಸವ ದಸರಾವಾಗಿ ಆಚರಿಸಲಾಗುತ್ತಿದ್ದು, ವಿವಿಧ ರೀತಿಯ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಪ್ರಮುಖರಾದ ನಂದಾ ಬೆಳ್ಯಪ್ಪ, ಅನಿತಾ ನಂದ, ಕೆ.ರಾಜೀವ್, ವಿನೋದ್ ಶಿವಪ್ಪ, ಬಸವರಾಜು, ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಚಿ ಅರುಣ್ ಶೆಟ್ಟಿ, ದಸರಾ ಸಾಂಸ್ಕೃತಿಕ ಸಮಿತಿ ಸಂಚಾಲಕ ತೆನ್ನೀರ ಮೈನಾ ಇತರರು ಇದ್ದರು.

ಕಾಫಿ ದಸರಾ ಸಂಚಾಲಕ ಅನಿಲ್ ಎಚ್.ಟಿ. ಸ್ವಾಗತಿಸಿದರು. ವಿನೋದ್ ಮೂಡಗದ್ದೆ ನಿರೂಪಿಸಿದರು. ಲಹರಿ ಶಿಕ್ಷಕಿಯರ ಬಳಗದವರು ನಾಡಗೀತೆ ಮತ್ತು ರೈತಗೀತೆ ಹಾಡಿದರು. ಬಿ.ವೈ.ರಾಜೇಶ್ ವಂದಿಸಿದರು.

ಸ್ಟಾಲ್‌ಗಳಲ್ಲಿ ಘಮಿಸಿದ ಕಾಫಿ: ಕಾಫಿ ದಸರಾ ಹಿನ್ನೆಲೆಯಲ್ಲಿ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಸುಮಾರು 32 ಸ್ಟಾಲ್ ಗಳಿದ್ದವು. ಕಾಫಿ ಮಂಡಳಿ, ಕಾಫಿ ಬೆಳೆಗಾರರ ಸಂಘ, ಮೀನುಗಾರಿಕೆ ಇಲಾಖೆ, ಕೃಷಿ ಇಲಾಖೆ, ಪಶುಪಾಲನಾ ಇಲಾಖೆ, ತೋಟಗಾರಿಕೆ ಇಲಾಖೆ, ಚೆಟ್ಟಳ್ಳಿಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಸೇರಿದಂತೆ ಹಲವು ಮಳಿಗೆಗಳಲ್ಲಿ ತಮ್ಮ ಇಲಾಖೆಗೆ ಸಂಬಂಧಿಸಿದ ಮಾಹಿತಿ ಹಾಗೂ ಪ್ರದರ್ಶನ ನಡೆಯಿತು. ಇದಲ್ಲದೆ ಖಾಸಗಿ ಕಾಫಿ ಸಂಸ್ಥೆಗಳು ಕೂಡ ತಮ್ಮ ಕಾಫಿಯನ್ನು ಪ್ರದರ್ಶನ ಮತ್ತು ಮಾರಾಟ ಮಾಡಿದರು.

ವೈಜ್ಞಾನಿಕವಾಗಿ ಕಾಫಿ ಉತ್ಪಾದಿಸಲು ತರಬೇತಿ: ದಿನೇಶ್

ಕಾರ್ಯಕ್ರಮದಲ್ಲಿ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರಗುಂದ ಮಾತನಾಡಿ, ಕಾಫಿ ಬೆಳೆಯನ್ನು ಮಣ್ಣಿನಿಂದ ಮಾರುಕಟ್ಟೆ ವರೆಗೆ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 1.30 ಲಕ್ಷ ಟನ್ ಕಾಫಿ ಬೆಳೆಯಲಾಗುತ್ತಿದೆ. ಆ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಕಾಫಿ ಉತ್ಪಾದಿಸಲು ಅಗತ್ಯ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

Share this article