ಸಮಾಜವನ್ನು ತಿದ್ದುವ ಶಿಕ್ಷಕರು ಮರಿತಿಬ್ಬೇಗೌಡರನ್ನು ಬೆಂಬಲಿಸಿ: ಡಾ.ಡಿ. ತಿಮ್ಮಯ್ಯ

KannadaprabhaNewsNetwork |  
Published : May 29, 2024, 12:59 AM IST
10 | Kannada Prabha

ಸಾರಾಂಶ

ಶಿಕ್ಷಕರ ಸಮಸ್ಯೆಗಳು ಬಹಳಷ್ಟಿದೆ. ಇಂತಹ ಸಂಧರ್ಭದಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲಂತಹ 24 ವರ್ಷಗಳ ಕಾಲ ಪರಿಷತ್ ಸದಸ್ಯರಾಗಿ ಕೆಲಸ ಮಾಡಿರುವಂತಹ ಮರಿತಿಬ್ಬೇಗೌಡ ಅವರು ಚುನಾವಣೆಗೆ ಸ್ಪರ್ಧಿಸಿದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರು

ಸಮಾಜವನ್ನು ತಿದ್ದುವಂತಹ ಶಕ್ತಿ ಇರುವಂತಹ ಶಿಕ್ಷಕ ವರ್ಗ ಬೇರೆಯವರು ನೀಡುವಂತಹ ಆಸೆಗಳಿಗೆ ಒಳಗಾಗದೇ ಸರಳ ಸಜ್ಜನಿಕೆಯ ಮರಿತಿಬ್ಬೇಗೌಡ ಅವರನ್ನು ಬೆಂಬಲಿಸುವಂತೆ ವಿಧಾ‌ನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮನವಿ ಮಾಡಿದರು.

ಮೈಸೂರಿನ ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣಮಂಟಪದಲ್ಲಿ ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ವಿಭಾಗ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಆಡಳಿತ ಮಂಡಳಿ ಮತ್ತು ಶಿಕ್ಷಕರ ಸಭೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರ ಸಮಸ್ಯೆಗಳು ಬಹಳಷ್ಟಿದೆ. ಇಂತಹ ಸಂಧರ್ಭದಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲಂತಹ 24 ವರ್ಷಗಳ ಕಾಲ ಪರಿಷತ್ ಸದಸ್ಯರಾಗಿ ಕೆಲಸ ಮಾಡಿರುವಂತಹ ಮರಿತಿಬ್ಬೇಗೌಡ ಅವರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರಿಗೆ ಶಿಕ್ಷಕರು ಬೆಂಬಲ ನೀಡಬೇಕು ಎಂದು ಅವರು ಕೋರಿದರು.

ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ನಾಡಿಗೆ, ರೈತರಿಗೆ ಬಹಳಷ್ಟು ಕೊಡುಗೆಗಳನ್ನು ನೀಡಿದೆ. ಸಿದ್ದರಾಮಯ್ಯ ಅವರು ಯಾವುದೇ ಧರ್ಮ ಜಾತಿಗೆ ಸೀಮಿತವಾಗದೆ ಎಲ್ಲಾ ವರ್ಗದ ಜನರಿಗೂ ತಲುಪುವ ಯೋಜನೆಗಳನ್ನು ರೂಪಿಸಿದ್ದಾರೆ. ಹೀಗಾಗಿ, ಅವರ ಕೈ ಬಲಪಡಿಸಿ ಎಂದು ಅವರು ವಿನಂತಿಸಿದರು.

ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಮರಿತಿಬ್ಬೇಗೌಡ ಅವರು ನಿರಂತರವಾಗಿ ಶಿಕ್ಷಕರ ಮಧ್ಯೆ ಇದ್ದು ಶಿಕ್ಷಕರ ಸಮಸ್ಯೆಗಳನ್ನು ತಿಳಿದು ಪರಿಷತ್ತಿನಲ್ಲಿ ನ್ಯಾಯ ಒದಗಿಸುವ ಸಾಮರ್ಥ್ಯವುಳ್ಳ ಒಬ್ಬ ಛಲವುಳ್ಳ ರಾಜಕಾರಣಿ. ಗೆದ್ದ ಬಳಿಕ ಸದಾ ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಅವರು ಮಾಡಿರುವ ಸೇವೆಗಳೇ ಅವರಿಗೆ ಶ್ರೀರಕ್ಷೆ ಎಂದು ಹೇಳಿದರು.

ಮಾಜಿ ಸಚಿವ ಕೋಟೆ ಎಂ. ಶಿವಣ್ಣ ಮಾತನಾಡಿ, ಈ ಬಾರಿ ಎಸ್ಸಿ, ಎಸ್ಟಿ ವರ್ಗಕ್ಕೆ ಸೇರಿದ ಶಿಕ್ಷಕರು ಮತವನ್ನು ನೀಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ. 4 ಭಾರಿ ಪರಿಷತ್ ಸದಸ್ಯರಾಗಿರುವಂತಹ ಮರಿತಿಬ್ಬೇಗೌಡ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಪಕ್ಷಕ್ಕೆ ದೊಡ್ಡ ಶಕ್ತಿಯಾಗಿದೆ. ಅವರು ಮತ್ತೊಮ್ಮೆ ಆಯ್ಕೆಯಾದರೆ ಶಿಕ್ಷಣ ಕ್ಷೇತ್ರಕ್ಕೆ ಗೌರವವೂ ಹೆಚ್ಚುತ್ತದೆ ಎಂದು ತಿಳಿಸಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಮಾತನಾಡಿ, ಈ ಬಾರಿ ಶಾಲಾ ರಜೆ ಅವಧಿಯಲ್ಲಿಯೇ ಚುನಾವಣೆ ಬಂದಿದ್ದು, ಎಲ್ಲರನ್ನೂ ಭೇಟಿ ಮಾಡುವುದು ಕಷ್ಟ ಸಾಧ್ಯವಾಗಿದೆ. ನೀವೇ ಎಲ್ಲರನ್ನೂ ಸಂಪರ್ಕ ಮಾಡಿ ಮತ ಹಾಕಿಸಿ, ಶಿಕ್ಷಕರ ಬಗ್ಗೆ ಸಹಾನುಭೂತಿ ಇರಿಸಿಕೊಂಡು ದುಡಿಯುತ್ತೇನೆ ಎಂದು ಭರವಸೆ ನೀಡಿದರು.

ಒಕ್ಕೂಟದ ಅಧ್ಯಕ್ಷ ಸುಬ್ಬಯ್ಯ, ಮಾಜಿ ಮೇಯರ್ ಟಿ.ಬಿ. ಚಿಕ್ಕಣ್ಣ, ಎಂಡಿಎ ಮಾಜಿ ಸದಸ್ಯ ಶಿವಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯರಾದ ಕೆ.ವಿ. ಮಲ್ಲೇಶ್, ಶಶಿಕಲಾ ನಾಗರಾಜು, ಗೋಪಾಲ್, ಸಿದ್ದಪ್ಪ, ಚನ್ನಮಲ್ಲಯ್ಯ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ