ದಾಬಸ್‌ಪೇಟೆ : ಕೋಲ್ಕತಾ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ, ಹತ್ಯೆ ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಕರೆ ನೀಡಿದ್ದ ಮುಷ್ಕರಕ್ಕೆ ಸೋಂಪುರ ಹೋಬಳಿಯ ಖಾಸಗಿ ಆಸ್ಪತ್ರೆಗಳು ಹೊರರೋಗಿ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಪಟ್ಟಣದಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳು ಬೆಳಿಗ್ಗೆ 6 ಗಂಟೆಯಿಂದಲೇ ಆಸ್ಪತ್ರೆ ಓಪಿಡಿ ಬಂದ್ ಮಾಡಿದ್ದು, ಎಮರ್ಜೆನ್ಸಿ ಪೇಷೆಂಟ್‌ಗೆ ಮಾತ್ರ ಚಿಕಿತ್ಸೆ ನೀಡಿದರು. ಆದರೆ ಕ್ಲಿನಿಕ್‌ಗಳು ಬಾಗಿಲು ಹಾಕಿದ್ದವು. ಕ್ಲಿನಿಕ್ ಗಳ ಮುಂಭಾಗದಲ್ಲಿ ಭಾನುವಾರ ಬೆಳಿಗ್ಗೆ 6 ಗಂಟೆಯವರೆಗೂ ಓಪಿಡಿ ಸೇವೆ ಸ್ಥಗಿತವಾಗಲಿದೆ ಎಂಬ ಭಿತ್ತಿಪತ್ರವನ್ನು ಅಂಟಿಸಿದ್ದರು.
ಖಾಸಗಿ ಕ್ಲಿನಿಕ್‌ನ ವೈದ್ಯ ಡಾ.ಸಂತೋಷ್ ಪ್ರತಿಕ್ರಿಯಿಸಿ, ಕೋಲ್ಕತಾದಲ್ಲಿ ನಡೆದ ಘಟನೆ ಅತ್ಯಂತ ಹೇಯ ಮತ್ತು ಖಂಡನೀಯವಾಗಿದೆ. ಇಂತಹ ಘಟನೆ ನಡೆಯಬಾರದಿತ್ತು. ವೈದ್ಯೋ ನಾರಾಯಣ ಹರಿ ಎನ್ನುವುದನ್ನು ಬಿಟ್ಟು ನಮ್ಮನ್ನು ಬದುಕಲು ಬಿಡಿ ಎನ್ನುವ ಪರಿಸ್ಥಿತಿ ಬಂದೊದಗಿದೆ. ಸಮಾಜದಲ್ಲಿನ ಇಂತಹ ದುಷ್ಟರಿಗೆ ಅತ್ಯಂತ ಕಠಿಣ ಶಿಕ್ಷೆಯಾದಲ್ಲಿ ಮಾತ್ರ ಇಂತಹ ದುರ್ಘಟನೆಗಳು ಮರುಕಳಿಸದಂತೆ ತಡೆಯಬಹುದಾಗಿದೆ. ಎಲ್ಲಾ ನಾಗರಿಕರು ವೈದ್ಯರೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಹೊರ ರೋಗಿಗಳ ಪರದಾಟ:
ಅನಾರೋಗ್ಯದಿಂದ ಪಟ್ಟಣದ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು, ಚೆಕಪ್‌ಗೆ ಬಂದ ರೋಗಿಗಳು ವೈದ್ಯರ ಲಭ್ಯತೆ ಇಲ್ಲದೆ ವಾಪಾಸ್ ಆದರು. ಹಲವರು ಗಂಟೆಗಟ್ಟಲೆ ಕಾದು ವೈದ್ಯರು ಇಲ್ಲದಿದ್ದಕ್ಕೆ ಮನೆಗೆ ತೆರಳಿದ ಘಟನೆಗಳು ನಡೆದವು. ಲ ಎಮರ್ಜಿನ್ಸಿ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಿದರು.
ದೇವನಹಳ್ಳಿಯಲ್ಲಿ ಎಲ್ಲ ಆಸ್ಪತ್ರೆ ಕ್ಲಿನಿಕ್‌ಗಳು ಬಂದ್‌ದೇವನಹಳ್ಳಿ: ಭಾರತೀಯ ವೈದ್ಯಕೀಯ ಸಂಘದ ಆದೇಶದ ಮೇರೆಗೆ ತಾಲೂಕಿನ ಸರ್ಕಾರಿ ಮತ್ತು ಎಲ್ಲ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳು ಶನಿವಾರ ಬೆಳಗ್ಗೆ 6 ಗಂಟೆಯಿಂದಲೇ ಬಂದ್ ಮಾಡಲಾಗಿತ್ತು. ಕೊಲ್ಕತ್ತಾ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಿರಿಯ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ದಾಂಧಲೆ ನಡೆಸಿರುವ ಎಲ್ಲರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ಜೀವ ಉಳಿಸುವ ವೈದ್ಯರ ಮೇಲೆ ಇಂತಹ ಪೈಶಾಚಿಕ ಕೃತ್ಯವೆಸಗುವುದು ಮಾನವೀಯ ಸಮಾಜವೇ ತಲೆತಗ್ಗಿಸುವ ಕೆಲಸ. ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಮೇಲೆ ದೈಹಿಕ ಹಲ್ಲೆ, ಅಮಾನವೀಯ ಕೃತ್ಯ, ಅವಾಚ್ಯ ಶಬ್ದ ಬಳಕೆ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳಬೇಕು. ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಪ್ರಕರಣದ ಆರೋಪಿಗಳ ವಿರುದ್ಧ ಕೂಡಲೇ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಎಂದು ಡಾ.ನರಸಾರೆಡ್ಡಿ ಆಗ್ರಹಿಸಿದ್ದಾರೆ.