ಎನ್‌ಡಿಎಗೆ ತಾಲೂಕು ಕಾಡುಗೊಲ್ಲ ಸಂಘದ ಬೆಂಬಲ

KannadaprabhaNewsNetwork | Published : Apr 17, 2024 1:21 AM

ಸಾರಾಂಶ

ದಶಕಗಳ ಹೋರಾಟವಾದ ಕಾಡುಗೊಲ್ಲರನ್ನು ಎಸ್ಟಿ ವರ್ಗಕ್ಕೆ ಸೇರಿಸುವ ವಿಚಾರಕ್ಕೆ ಬದ್ಧವಾದ ಎನ್‌ಡಿಎ ಒಕ್ಕೂಟಕ್ಕೆ ಈ ಲೋಕಸಭಾ ಚುನಾವಣೆಯಲ್ಲಿ ನಮ್ಮ ಬೆಂಬಲ ಸಿಗಲಿದೆ

ಕನ್ನಡಪ್ರಭ ವಾರ್ತೆ ಗುಬ್ಬಿ

ದಶಕಗಳ ಹೋರಾಟವಾದ ಕಾಡುಗೊಲ್ಲರನ್ನು ಎಸ್ಟಿ ವರ್ಗಕ್ಕೆ ಸೇರಿಸುವ ವಿಚಾರಕ್ಕೆ ಬದ್ಧವಾದ ಎನ್‌ಡಿಎ ಒಕ್ಕೂಟಕ್ಕೆ ಈ ಲೋಕಸಭಾ ಚುನಾವಣೆಯಲ್ಲಿ ನಮ್ಮ ಬೆಂಬಲ ಸಿಗಲಿದೆ ಎಂದು ಕಾಡುಗೊಲ್ಲ ಸಂಘದ ತಾಲೂಕು ಕಾರ್ಯಾಧ್ಯಕ್ಷ ಗುಡ್ಡದಹಳ್ಳಿ ಬಸವರಾಜು ತಿಳಿಸಿದರು.ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಹೋರಾಟಕ್ಕೆ ರಾಜ್ಯದ ಬಿಜೆಪಿ ಈ ಹಿಂದೆ ಬೆಂಬಲಿಸಿದ ಪರಿಣಾಮ ಎಸ್ಟಿ ಮೀಸಲಾತಿ ವಿಚಾರ ಕೇಂದ್ರದ ಅಂಗಳದಲ್ಲಿದೆ. ಇಲ್ಲಿಯೂ ಸಹ ನಮ್ಮ ಪರ ಬೆಂಬಲ ಸೂಚಿಸಲು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಜೊತೆ ದೇವೇಗೌಡರು ಚರ್ಚಿಸಿದ್ದಾರೆ. ಈ ಹಿನ್ನೆಲೆ ಕಾಡುಗೊಲ್ಲರನ್ನು ಎಸ್ಟಿ ವರ್ಗಕ್ಕೆ ಸೇರಿಸಲಿದ್ದಾರೆ ಎಂದರು.ಕಾಡುಗೊಲ್ಲ ಸಮಾಜದ ಒಳಿತು ಬಯಸುವ ವಿ.ಸೋಮಣ್ಣ ಅವರು ಎನ್.ಡಿ.ಎ ಅಭ್ಯರ್ಥಿಯಾಗಿರುವುದು ನಮಗೆ ಸಂತಸ ತಂದಿದೆ. ಈ ಹಿಂದೆ ವಸತಿ ಸಚಿವರಾಗಿದ್ದ ಸೋಮಣ್ಣ ಅವರು 3700 ಮನೆಗಳನ್ನು ಗುಬ್ಬಿ ತಾಲೂಕಿಗೆ ಮಂಜೂರು ಮಾಡಿದ್ದ ರು. ಇದರ ಹಿನ್ನೆಲೆ ಗುಡಿಸಲು ಮುಕ್ತ ಗೊಲ್ಲರಹಟ್ಟಿ ನಿರ್ಮಾಣವಾಗಿದೆ. ಕಳೆದ 25 ವರ್ಷದ ರಾಜಕಾರಣ ಮಾಡಿದವರು ನಮ್ಮ ತಾಲೂಕಿನ ಕಾಡುಗೊಲ್ಲರಿಗೆ ಯಾವ ಕೊಡುಗೆ ನೀಡಿಲ್ಲ. ಅಭಿವೃದ್ಧಿಯಲ್ಲೂ ಸಹಕರಿಸಿಲ್ಲ. ಈ ನಿಟ್ಟಿನಲ್ಲಿ ರಾಜ್ಯದ 28 ಲೋಕಸ ಭಾ ಕ್ಷೇತ್ರದಲ್ಲಿ ಕಾಡುಗೊಲ್ಲ ಸಮಾಜ ಎನ್‌ಡಿಎಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.

ಕಾಡುಗೊಲ್ಲ ಬುಡಕಟ್ಟು ಮಹಾಸಭಾ ಅಧ್ಯಕ್ಷ ಬಿ.ದೊಡ್ಡಯ್ಯ ಮಾತನಾಡಿ, ಸದಾ ಕಾಲ ದೇಶದ ಹಿತ ಬಯಸುವ ಪ್ರಧಾನಿ ಮೋದಿ ಅವರ ಕೈಬಲಪಡಿಸಲು ಮತ್ತೊಮ್ಮೆ ಅಧಿಕಾರ ನೀಡಬೇಕಿದೆ. ಈ ನಿಟ್ಟಿನಲ್ಲಿ ಎನ್‌ಡಿಎ ಕೂಟಕ್ಕೆ ಬೆಂಬಲ ನೀಡಬೇಕಿದೆ. ಕಾಡುಗೊಲ್ಲ ಸಮಾಜದ ಬಹು ಬೇಡಿಕೆಯ ಎಸ್ಟಿ ವರ್ಗಕ್ಕೆ ಸೇರಿಸುವ ಹೋರಾಟಕ್ಕೆ ತಾರ್ಕಿಕ ಅಂತ್ಯ ನೀಡಲು ಮೋದಿ ಹಾಗೂ ಅಮಿತ್ ಶಾ ಅವರ ಜೊತೆ ದೇವೇಗೌಡರು ಚರ್ಚಿಸಿದ್ದಾರೆ. ನಮ್ಮ ಸ್ಥಿತಿಗತಿ ಬಗ್ಗೆ ವಿವರಿಸಿ ತಿಳಿಸಿದ್ದಾರೆ. ನಮ್ಮ ಬುಡಕಟ್ಟು ಸಂಸ್ಕೃತಿ, ಜೀವನ ಬಗ್ಗೆ ತಿಳಿಸಿ ಎಸ್ಟಿ ವರ್ಗಕ್ಕೆ ಸೇರಿಸುವ ಮಾತು ಕೊಟ್ಟಿದ್ದಾರೆ ಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯೆ ಯಶೋಧಮ್ಮ ಶಿವಣ್ಣ ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ಕಾಡುಗೊಲ್ಲರನ್ನು ಸೇರಿಸುವ ಮಾತು ಕೊಟ್ಟಿದ್ದಾರೆ. ನೆನೆಗುದಿಗೆ ಬಿದ್ದ ಹಾಸ್ಟೆಲ್ ಕೆಲಸವನ್ನು ಪೂರ್ಣಗೊಳಿಸಿ ನಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿದ್ದಾರೆ. ನಮ್ಮ ಸಮಾಜದ ಹೆಣ್ಣು ಮಕ್ಕಳು ಮುಖ್ಯವಾಹಿನಿಗೆ ಬರಬೇಕು. ಬದಲಾವಣೆ ನಿಟ್ಟಿನಲ್ಲಿ ಎನ್.ಡಿ.ಎ ಅಭ್ಯರ್ಥಿ ಸೋಮಣ್ಣ ಅವರನ್ನು ನಾವು ಬೆಂಬಲಿಸಿ ಬಹುಮತಗಳಿಂದ ಗೆಲ್ಲಿಸೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕಾಡುಗೊಲ್ಲ ಸಮಾಜದ ಮುಖಂಡರಾದ ಶಿವಣ್ಣ, ಕಂಬೇರಹಟ್ಟಿ ನಾಗರಾಜು, ಹಾಲೇಗೌಡ, ಗಂಗಾಧರ್, ಮಹೇಶ್ ಇತರರು ಇದ್ದರು.

Share this article