ರೋಣ: ಮಾರುಕಟ್ಟೆಯಲ್ಲಿ ರೈತರ ಬೆಳೆಗೆ ಸೂಕ್ತ ಹಾಗೂ ಸ್ಥಿರ ಬೆಲೆ ಸಿಗುವುದಿಲ್ಲ. ಆದರೆ, ಸರ್ಕಾರ ತೆರೆದಿರುವ ಬೆಂಬಲ ಬೆಲೆ ಕೇಂದ್ರದಲ್ಲಿ ಸ್ಥಿರ ಬೆಲೆಯಲ್ಲಿ ರೈತರ ಬೆಳೆ ಖರೀದಿಸಲಾಗುತ್ತದೆ. ಆದ್ದರಿಂದ ಬೆಂಬಲ ಬೆಲೆ ಖರೀದಿ ಕೇಂದ್ರ ರೈತರಿಗೆ ವರದಾನ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಆಧುನಿಕ ಪದ್ದತಿ ಎಷ್ಟೇ ಸುಧಾರಣೆಯಾದರೂ ರೈತರು ಸಾಕಷ್ಟು ತೊಂದರೆಗಳನ್ನು ಈಗಲೂ ಎದುರಿಸುತ್ತಿದ್ದಾರೆ. ಆಳಿನ ಸಮಸ್ಯೆ, ಬೆಳೆಗಳ ದಾಸ್ತಾನು, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದಿರುವುದು, ಬೆಳೆಗಳಿಗೆ ಕ್ರಿಮಿಕೀಟಗಳ ಬಾಧೆ, ಅತೀವೃಷ್ಟಿ, ಅನಾವೃಷ್ಟಿ ಹೀಗೆ ನಾನಾ ರೀತಿಯ ತೊಂದರೆ ಎದುರಿಸುತ್ತಾರೆ. ಆದರೂ ರೈತರು ಇದಕ್ಕೆ ಎದೆಗುಂದದೇ ದೇಶಕ್ಕೆ ಅನ್ನ ನೀಡುವಲ್ಲಿ ತನ್ನ ಕಾಯಕ ಮುಂದುವರಿಸುತ್ತಾನೆ. ರೈತರ ಹಿತ ಕಾಯುವುದು ಸರ್ಕಾರ ಧ್ಯೇಯವಾಗಿದೆ ಎಂದು ತಿಳಿಸಿದರು.ಹೊಸ ಹೊಸ ತಳಿಗಳ ಕುರಿತು ರೈತರು ಅರಿಯಬೇಕು. ಖಾಲಿ ಚೀಲಗಳನ್ನು ಶೀಘ್ರದಲ್ಲಿಯೇ ವಾಪಾಸ್ ಮಾಡುವಲ್ಲಿ ಕ್ರಮ ಕೈಗೊಳ್ಳಲಾಗುವುದು. ರೈತರು ಖರೀದಿ ಕೇಂದ್ರಕ್ಕೆ ಗುಣಮಟ್ಟದ ಬೀಜಗಳನ್ನು ತಂದು ಮಾರಾಟ ಮಾಡಬೇಕು. ರೋಣದಲ್ಲಿ ಎಪಿಎಂಸಿ ಮೂಲಕ ಶಿಥಲೀಕರಣ ಘಟಕ ಸ್ಥಾಪಿಸಲಾಗುವುದು. ರೋಣದಲ್ಲಿ ವ್ಯಾಪಾರ ವಹಿವಾಟು ಸರಿಯಾಗಿ ನಡೆಯುತ್ತಿಲ್ಲ ಎಂಬ ದೂರನ್ನು ದೂರ ಮಾಡುವಲ್ಲಿ ರೈತರು ಹಾಗೂ ವ್ಯಾಪಾರಸ್ಥರು ಎಪಿಎಂಸಿ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸುವಲ್ಲಿ, ವ್ಯಾಪಾರ ವಹಿವಾಟು ಸುಧಾರಿಸುವಲ್ಲಿ ಗಮನ ಹರಿಸಬೇಕು ಎಂದರು.
ಕೃಷಿ ಉಪ ನಿರ್ದೇಶಕ ಪಾಲಾಕ್ಷಗೌಡ ಪಾಟೀಲ ಮಾಟೀಲ ಮಾತನಾಡಿ, ಬೆಂಬಲ ಬೆಲೆ ಅಡಿಯಲ್ಲಿ ಹೆಸರು ಕಾಳನ್ನು ಕ್ವಿಂಟಲ್‌ಗೆ ₹8682 ನೀಡಿ ಖರೀದಿಸಲಾಗುವುದು. ಒಬ್ಬ ರೈತರಿಂದ ಗರಿಷ್ಠ 10 ಕ್ವಿಂಟಲ್ ಖರೀದಿಸಲಾಗುವುದು. ಆಧಾರ್ ಕಾರ್ಡ್, ಆರ್‌ಟಿಸಿ ಉತಾರ, ಎಫ್.ಐ.ಡಿ. ನಂಬರ್, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು. ತಾಲೂಕಿನಲ್ಲಿ 17 ಕೇಂದ್ರಗಳ ಮೂಲಕ ಹೆಸರನ್ನು ಬೆಂಬಲ ಬೆಲೆ ಮೂಲಕ ಖರೀದಿ ಮಾಡಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ರೋಣ ಖರೀದಿ ಕೇಂದ್ರದಲ್ಲಿ 1120 ರೈತರು ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ. ಇದರಂತೆ ಉಳಿದ ಕೇಂದ್ರಗಳಲ್ಲಿಯೂ ರೈತರು ಹೆಸರು ಮಾರಾಟಕ್ಕೆ ಕೊಡಲು ಹೆಸರನ್ನು ನೊಂದಾಯಿಸಬೇಕು. ರಿಯಾಯಿತಿ ದರದಲ್ಲಿ ಕಡಲೆಯನ್ನು 20 ಕೆಜಿ ₹1420ಕ್ಕೆ, 5ರಿಂದ 8 ಪ್ಯಾಕೆಟ್ ನೀಡಲಾಗುವುದು. ಜೋಳಕ್ಕೆ ಪ್ರತಿ ಕೆ.ಜಿ ಗೆ ₹20 ರಿಯಾಯಿತಿ ದರದಲ್ಲಿ ವಿತರಿಸಲಾಗುವುದು. ಇದರಂತೆ ವಿವಿಧ ಬೀಜಗಳನ್ನು ರಿಯಾಯಿತಿ ದರದಲ್ಲಿ ಕೊಡಲಾಗಿದ್ದು, ಇದರ ಮಾಹಿತಿಯನ್ನು ರೈತ ಸಂಪರ್ಕ ಕೇಂದ್ರದ ಮೂಲಕ ತಿಳಿಸಲಾಗುವುದು ಎಂದರು.ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸವರಾಜ ನವಲಗುಂದ, ತಾಪಂ ಮಾಜಿ ಸದಸ್ಯ ಪ್ರಭು ಮೇಟಿ, ವ್ಜಿ.ಆರ್. ಗುಡಿಸಾಗರ, ಪರಶುರಾಮ ಅಳಗವಾಡಿ, ಶಿವಣ್ಣ ಅರಹುಣಸಿ, ಮೇಘರಾಜ ಬಾವಿ, ವೆಂಕಣ್ಣ ಬಂಗಾರಿ, ಯೂಸೂಫ ಇಟಗಿ, ಗಿರೀಶಗೌಡ ಪಾಟೀಲ, ಶಿವಪುತ್ರಪ್ಪ ದೊಡ್ಡಮನಿ, ರಾಜಣ್ಣ ಸುಂಕದ, ಸಂಗನಬಸಪ್ಪ ಪರಡ್ಡಿ, ಖಾಸೀಂಸಾಬ ಪಿಂಜಾರ, ಅಶೋಕ ಗಡಗಿ, ಕೃಷಿ ಸಹಾಯಕ ನಿರ್ದೇಶಕ ರವೀಂದ್ರಗೌಡ ಪಾಟೀಲ, ಶಂಕರ ಕಳ್ಳಿಗಣ್ಣವರಿ, ನಿಂಬಣ್ಣ ಗಾಣಿಗೇರ, ಪ್ರಮೋದ ಕುಲಕರ್ಣಿ, ಹನಮಂತಪ್ಪ ಪಟ್ಟೇದ, ಶಿಲ್ಪಾ ಕಟಗೇರಿ ಮುಂತಾದವರು ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಶಿವಪುತ್ರಪ್ಪ ದೊಡ್ಡಮನಿ ನಿರೂಪಿಸಿದರು.