ರೋಟರಿ ನಾಗಪ್ಪಶೆಟ್ಟಿ ಡಯಾಲಿಸಿಸ್ ಸೆಂಟರ್ ಲೋಕಾರ್ಪಣೆ

KannadaprabhaNewsNetwork | Updated : Sep 28 2024, 01:24 AM IST

ಸಾರಾಂಶ

ಚಾಮರಾಜನಗರದ ರೋಟರಿ ಭವನದ ಆವರಣಣದಲ್ಲಿ ರೋಟರಿ ಸಂಸ್ಥೆ, ರೋಟರಿ ಐವರಿ ಸಿಟಿ ಮೈಸೂರು, ಬೆಂಗಳೂರು ಕಿಡ್ನಿ ಫೌಂಡೇಶನ್ ಇವರ ಸಂಯುಕ್ತಾಶ್ರಯದಲ್ಲಿ ನಡೆದ ರೋಟರಿ ಬಿಎಸ್‌ವಿ ನಾಗಪ್ಪಶೆಟ್ಟಿ ಡಯಾಲಿಸಿಸ್ ಸೆಂಟರ್ ಅನ್ನು ಅಧ್ಯಕ್ಷ ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಆರೋಗ್ಯಕರ ಸಮಾಜ ನಿರ್ಮಿಸುವಲ್ಲಿ ರೋಟರಿಸೇವೆ ಅನನ್ಯವಾಗಿದ್ದು, ನಗರದ ರೋಟರಿ ಭವನದಲ್ಲಿ ನೂತನವಾಗಿ ತೆರೆದಿರುವ ಡಯಾಲಿಸಿಸ್ ಸೆಂಟರ್‌ಗೆ ಎಂಎಸ್‌ಐಎಲ್‌ ನಿಂದ ಹೆಚ್ಚುವರಿ ಡಯಾಲಿಸಿಸ್ ಯಂತ್ರ, ವೈಯುಕ್ತಿಕವಾಗಿ ಪ್ರತಿದಿನ 3 ಸಾವಿರ ಕೊಡುವುದಾಗಿ ಎಂಎಸ್‌ಐಎಲ್‌ ಅಧ್ಯಕ್ಷರಾದ ಶಾಸಕ ಸಿ.ಪುಟ್ಟರಂಗಶೆಟ್ಟಿ ಘೋಷಣೆ ಮಾಡಿದರು.ರೋಟರಿ ಭವನದ ಆವರಣಣದಲ್ಲಿ ರೋಟರಿ ಸಂಸ್ಥೆ, ರೋಟರಿ ಐವರಿ ಸಿಟಿ ಮೈಸೂರು. ಬೆಂಗಳೂರು ಕಿಡ್ನಿ ಫೌಂಡೇಶನ್ ಇವರ ಸಂಯುಕ್ತಾಶ್ರಯದಲ್ಲಿ ನಡೆದ ರೋಟರಿ ಬಿಎಸ್‌ವಿ ನಾಗಪ್ಪಶೆಟ್ಟಿ ಡಯಾಲಿಸಿಸ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಅತ್ಯಂತ ಪುಣ್ಯದ ಕೆಲಸ:

ರೋಟರಿ ಸಂಸ್ಥೆಯು ಚಾಮರಾಜನಗರದಲ್ಲಿ ಡಯಾಲಿಸಿಸ್ ಸೆಂಟರ್ ತೆರೆದು ಬಡರೋಗಿಗಳಿಗೆ ಕಡಿಮೆ ಶುಲ್ಕದಲ್ಲಿ ಡಯಾಲಿಸಿಸ್ ಮಾಡುತ್ತಿರುವುದು ಅತ್ಯಂತ ಪುಣ್ಯದ ಕೆಲಸವಾಗಿದೆ. ಇದು ನಗರಕ್ಕೆ ಬಹಳ ಅವಶ್ಯಕವಾಗಿತ್ತು. ರಾಜ್ಯದಲ್ಲಿ ಕಿಡ್ನಿ ತೊಂದರೆಗೊಳಾಗುತ್ತಿರುವ ಪೈಕ್ತಿಯಲ್ಲಿ ಚಾಮರಾಜನಗರದಲ್ಲಿ ಹೆಚ್ಚು ಕಂಡು ಬರುತ್ತಿದೆ. ಚಾಮರಾಜನಗರದಲ್ಲಿ ಹೆಚ್ಚುವರಿ ಡಯಾಲಿಸಿಸ್ ಸೆಂಟರ್ ನಿರ್ಮಿಸಿ ನಿರ್ವಹಣೆ ಮಾಡಲು ಮುಂದೆ ಬಂದರೆ ಎಂಎಸ್‌ಐಎಲ್ ನ ಅನುದಾನದಿಂದ ಡಯಾಲಿಸಿಸ್ ಯಂತ್ರಗಳನ್ನು ನೀಡುವುದಾಗಿ ಭರವಸೆ ನೀಡಿದರು. ಎಂಎಸ್‌ಐಎಲ್ ನಲ್ಲಿ 16 ಲಕ್ಷ ಟನ್ ನೋಟ್ ಪುಸ್ತಕ ಇದ್ದು ಜಿಲ್ಲೆಯಲ್ಲಿ 16 ಸಾವಿರ ಬಡಮಕ್ಕಳಿಗೆ ಹಂಚಿಕೆ ಮಾಡಲಾಗುವುದು ಎಂದರು.

ರೋಟರಿ ಕಾರ್ಯಗಳಿಗೆ ಜಿಲ್ಲಾಡಳಿತ ನೆರವು:

ವಿಶೇಷ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಸರ್ಕಾರದ ಹಂತದಲ್ಲಿ ಎದುರಾಗುವ ಸಮಸ್ಯೆ, ಸವಾಲುಗಳಿಗೂ ಹಲವು ಬಾರಿ ರೋಟರಿ ಸಂಸ್ಥೆ ಜಿಲ್ಲಾಡಳಿತಕ್ಕೆ ಸಹಾಯ ಹಸ್ತ ಚಾಚಿದೆ. ಇದೀಗ ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 10 ಡಯಾಲಿಸಿಸ್ ಯಂತ್ರಗಳ ಸೇವೆ ನೀಡುತ್ತಿರುವುದು ಅಭಿನಂದನೀಯ ಎಂದರು. ಯಂತ್ರಗಳ ಕೊರತೆಯಿಂದ ಜಿಲ್ಲೆಯ ರೋಗಿಗಳು ಮೈಸೂರಿಗೆ ತೆರಳಿ ಡಯಾಲಿಸಿಸ್ ಮಾಡಿ ಸಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಹನೂರಿನಲ್ಲಿ ಎರಡು ಡಯಾಲಿಸಿಸ್ ಯಂತ್ರ ಹಾಗೂ ಕೊಳ್ಳೇಗಾಲದಲ್ಲಿ ಹೆಚ್ಚುವರಿ ಡಯಾಲಿಸಿಸ್ ಯಂತ್ರಗಳ ಅಳವಡಿಕೆಯಿಂದ ಸಮಸ್ಯೆ ಸ್ವಲ್ಪ ಕಡಿಮೆಯಾಗಿದೆ. ಚಾಮರಾಜನಗರದಲ್ಲಿ ರೋಟರಿ ಸಂಸ್ಥೆ 10 ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಿರುವುದು ಜಿಲ್ಲೆಯ ನೂರಾರು ಡಯಾಲಿಸಿಸ್ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು. ನಗರದಲ್ಲಿ ರೋಟರಿ ಡಯಾಲಿಸಿಸ್ ಕೇಂದ್ರ ಜಿಲ್ಲಾಡಳಿತದ ಮೇಲಿನ ಒತ್ತಡ ನಿವಾರಣೆ ಮಾಡಿದೆ. ರೋಟರಿ ಕಾರ್ಯಗಳಿಗೆ ಜಿಲ್ಲಾಡಳಿತ ನೆರವು ನೀಡಲಿದೆ ಎಂದರು.

ಹಿಂದೆ ವೃದ್ಧರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಕಿಡ್ನಿ ವೈಫಲ್ಯ ಸಮಸ್ಯೆ ಪ್ರಸ್ತುತ ದಿನಗಳಲ್ಲಿ 20 ರಿಂದ 30ರ ವಯಸ್ಸಿನ ಯುವ ಜನಾಂಗವನ್ನೂ ಕಾಡುತ್ತಿರುವುದು ಆತಂಕಕಾರಿ. ಯುವಕರೂ ಡಯಾಲಿಸಿಸ್‌ಗೆ ಬರುತ್ತಿರುವುದನ್ನು ನೋಡಿದರೆ ಸಮಸ್ಯೆಯ ಗಂಭೀರತೆ ತಿಳಿಯುತ್ತದೆ. ಯುವಜನತೆ ದುಶ್ಚಟಗಳಿಂದ ದೂರವಿದ್ದು ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಶೇ 52ರಷ್ಟು ಪ್ರಾಕೃತಿಕ ಸಂಪತ್ತು ಹೊಂದಿರುವ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿರುವುದು ಬೇಸರದ ಸಂಗತಿ. ಬಿದ್ದ ಮಳೆಯ ನೀರನ್ನು ಭೂಮಿಗೆ ಇಂಗಿಸುವ ಹಾಗೂ ಹಿಡಿದಿಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಜಿಲ್ಲಾಡಳಿತ ಒತ್ತು ನೀಡಿದೆ. ಈ ಕಾರ್ಯಕ್ಕೆ ರೋಟರಿ ಸೇರಿದಂತೆ ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದು ಮನವಿ ನೀಡಿದರು.ಎನ್.ಆರ್.ಗ್ರೂಪ್ ಆಫ್ ಕಂಪನಿ ಅಧ್ಯಕ್ಷ ಪಿಡಿಜಿ ಆರ್.ಗುರು ಡಯಾಲಿಸಿಸ್ ಸೆಂಟರ್ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಪರಿಪಾಠವೇ ಇಲ್ಲ. ರಕ್ತದೊತ್ತಡ ಸಮಸ್ಯೆಯಿಂದ ಬಳಲುವವರು ಹೆಚ್ಚಾಗಿ ಮೂತ್ರಪಿಂಡ ವೈಫಲಕ್ಕೆ ತುತ್ತಾಗುತ್ತಾರೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಸಂಘ ಸಂಸ್ಥೆಗಳು, ಆರೋಗ್ಯ ಇಲಾಖೆ ನಿರಂತರವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿ ರೋಗ ಪತ್ತೆ ಮಾಡಿ ಚಿಕಿತ್ಸೆ ನೀಡಿದರೆ ಜಿಲ್ಲೆಯಲ್ಲಿ ಡಯಾಲಿಸಿಸ್ ರೋಗಿಗಳ ಸಂಖ್ಯೆ ಕಡಿಮೆಯಾಗಬಹುದು. ಡಯಾಲಿಸಿಸ್ ರೋಗಿಯೊಬ್ಬ ತಿಂಗಳಿಗೆ ಕನಿಷ್ಠ 5 ಸಾವಿರ ಭರಿಸುವುದು ದೊಡ್ಡ ಆರ್ಥಿಕ ಹೊರೆ. ಉದ್ಯಮಿಗಳು, ಕಾರ್ಪೊರೆಟ್ ಕಂಪೆನಿಗಳು, ಸ್ಥಳೀಯ ವ್ಯಾಪಾರಿಗಳು ಸೇರಿದಂತೆ ಸಮಾಜ ಡಯಾಲಿಸಿಸ್ ರೋಗಿಗಳ ಚಿಕಿತ್ಸೆಗೆ ಆರ್ಥಿಕ ನೆರವು ನೀಡಬೇಕು ಎಂದು ಮನವಿ ಮಾಡಿದರು.

ಸನ್ಮಾನ ಸ್ವೀಕರಿಸಿದ ಸಮಾಜಸೇವಕರು, ಡಯಾಲಿಸಿಸ್ ಸೆಂಟರ್ ಕಟ್ಟಡ ನವೀಕರಣದ ದಾನಿಗಳಾದ ವೆಂಕಟನಾಗಪ್ಪಶೆಟ್ಟಿ ಮಾತನಾಡಿ, ರೋಟರಿ ಬಿಎಸ್ ವಿ ನಾಗಪ್ಪಶೆಟ್ಟಿ ಡಯಾಲಿಸಿಸ್ ಸೆಂಟರ್ ನಿರ್ಮಿಸಲು ಶ್ರಮಿಸಿದ ರೋಟರಿ ಸಂಸ್ಥೆಯ ಎಲ್ಲರಿಗೂ ಚಾಮರಾಜೇಶ್ವರಸ್ವಾಮಿ ಹೆಚ್ಚಿನ ಶಕ್ತಿ ಕರುಣಿಸಲಿ ಎಂದು ಆಶಿಸಿದರು.ನಮ್ಮ ತಾತ ಅವರು ಕೂಡ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಹೆರಿಗೆ ವಾರ್ಡ್ ಕಟ್ಟಿಸಿಕೊಟ್ಟಿದ್ದರು. ನಮ್ಮ ತಾತ, ತಂದೆಯವರಿಂದ ಸಮಾಜಸೇವೆ ನನಗೆ ಬಳುವಳಿಯಾಗಿ ಬಂದಿದ್ದು, ಚಿಕ್ಕ ವಯಸ್ಸಿನಲ್ಲಿ ರೋಟರಿ ಸೇವೆಯಲ್ಲಿ ತೊಡಗಿಸಿಕೊಂಡು‌ ಬಂದಿರುವೆ ಮುಂದಿನ ದಿನಗಳಲ್ಲೂ ಹೆಚ್ಚು ಸಮಾಜಸೇವೆ ಮಾಡುವುದಾಗಿ ತಿಳಿಸಿದರು. ಪ್ರಸ್ತಾವಿಕವಾಗಿ ಪಿಡಿಜಿ.ಡಾಕ್ಟರ್ ನಾಗಾರ್ಜುನ್ ಡಯಾಲಿಸಿಸ್ ಪ್ರಾರಂಭವಾದ ಬಗ್ಗೆ ವಿವರವಾಗಿ ಸಭೆಗೆ ತಿಳಿಸಿದರು.

ಸನ್ಮಾನ: ದಾನಿಗಳಾದ ವೆಂಕಟನಾಗಪ್ಪ ಶೆಟ್ಟಿ ಹಾಗೂ ಕುಟುಂಬವನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಚುಡಾಧ್ಯಕ್ಷ ಮಹಮ್ಮದ್ ಅಸ್ಟರ್ ಮುನ್ನ, ರೋಟರಿ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ್, ಡಾ.ಅನಿಕೇತ್ ಪ್ರಭಾಕರ್, ಹೆಚ್.ಆರ್.ಕೇಶವ್, ನಾಗೇಂದ್ರ ಪ್ರಸಾದ್,ಎಂ.ರಂಗನಾಥ್ ಭಟ್, ಪಿ.ಕೆ.ರಾಮಕೃಷ್ಣ ಮೈಸೂರು ರೋಟರಿ ಸಂಸ್ಥೆ ಅಧ್ಯಕ್ಷ ಪ್ರಭಾಕರ್. ಮಾಜಿ ಅಧ್ಯಕ್ಷ ಎಸ್.ಕೆ.ಸಂಜಯ್. ರವೀಂದ್ರ ಭಟ್. ವಿ.ಎನ್.ಪ್ರಸಾದ್, ಆರ್.ಕೃಷ್ಣ,ಚಾಮರಾಜನಗರ ರೋಟರಿ ಸಂಸ್ಥೆಯ ಅಧ್ಯಕ್ಷ ರೋ ನಾಗರಾಜು ಕಾರ್ಯದರ್ಶಿ ರೋ ಗುರುಸ್ವಾಮಿ ಮತ್ತು ಸದಸ್ಯರು ಹಲವಾರು ರೋಟರಿ ಸಂಸ್ಥೆಗಳ ,ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನಗರದ ಗಣ್ಯ ಉದ್ಯಮಿಗಳು ಹಾಗೂ ದಾನಿಗಳೂ ಹಾಜರಿದ್ದರು.

Share this article