ಮೈಸೂರು ರಾಜವಂಶಸ್ಥರಿಗೆ ಟಿಡಿಆರ್‌ ಕೊಡಲು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ತಾಕೀತು

KannadaprabhaNewsNetwork | Updated : Feb 15 2025, 04:48 AM IST

ಸಾರಾಂಶ

ರಸ್ತೆ ನಿರ್ಮಾಣ ಉದ್ದೇಶಕ್ಕೆ ಕರ್ನಾಟಕ ಸರ್ಕಾರವು ಬಳಸಲು ಉದ್ದೇಶಿಸಿದ್ದ, ಮೈಸೂರು ರಾಜವಂಶಸ್ಥರಿಗೆ ಸೇರಿದ ಬೆಂಗಳೂರಿನ ಅರಮನೆ ಜಾಗಕ್ಕೆ ಟಿಡಿಆರ್‌ ಪಾವತಿಸುವಂತೆ ತಾನು ಈ ಹಿಂದೆ ನೀಡಿದ್ದ ಆದೇಶದಲ್ಲಿ ಚರ್ಚೆ ಅಥವಾ ಮರುಪರಿಶೀಲನೆಗೆ ಆಸ್ಪದವೇ ಇಲ್ಲ  - ಸುಪ್ರೀಂಕೋರ್ಟ್‌  

 ನವದೆಹಲಿ: ರಸ್ತೆ ನಿರ್ಮಾಣ ಉದ್ದೇಶಕ್ಕೆ ಕರ್ನಾಟಕ ಸರ್ಕಾರವು ಬಳಸಲು ಉದ್ದೇಶಿಸಿದ್ದ, ಮೈಸೂರು ರಾಜವಂಶಸ್ಥರಿಗೆ ಸೇರಿದ ಬೆಂಗಳೂರಿನ ಅರಮನೆ ಜಾಗಕ್ಕೆ ಟಿಡಿಆರ್‌ ಪಾವತಿಸುವಂತೆ ತಾನು ಈ ಹಿಂದೆ ನೀಡಿದ್ದ ಆದೇಶದಲ್ಲಿ ಚರ್ಚೆ ಅಥವಾ ಮರುಪರಿಶೀಲನೆಗೆ ಆಸ್ಪದವೇ ಇಲ್ಲ. ಈ ಕುರಿತ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸುಪ್ರೀಂಕೋರ್ಟ್‌ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ.

‘ನಾವು ಈಗಾಗಲೇ ಈ ಕುರಿತು ಆದೇಶ ಹೊರಡಿಸಿದ್ದೇವೆ. ಇದನ್ನು ನಿಮ್ಮ ಅಧಿಕಾರಿಗಳು ಪಾಲಿಸಲೇಬೇಕು. ಇಲ್ಲದೇ ಹೋದಲ್ಲಿ ಅವರು ಸಂಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ’ ಎಂದು ಸುಪ್ರೀಂಕೋರ್ಟ್‌ ಎಚ್ಚರಿಸಿದೆ. ಇದರಿಂದಾಗಿ ಸಹಸ್ರಾರು ಕೋಟಿ ರು. ಮೊತ್ತದ ಟಿಡಿಆರ್‌ ಪರಿಹಾರ ಪಾವತಿಯಿಂದ ತಪ್ಪಿಸಿಕೊಳ್ಳಲು ಸುಗ್ರೀವಾಜ್ಞೆ ಅಸ್ತ್ರದ ಮೊರೆ ಹೋಗಿದ್ದ ಕರ್ನಾಟಕ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ.

ಗುರುವಾರ ಸುಪ್ರೀಂಕೋರ್ಟ್‌ನಲ್ಲಿ ನ್ಯಾ.ಎಂ.ಎಂ.ಸುಂದರೇಶ್‌ ಮತ್ತು ನ್ಯಾ.ಅರವಿಂದ್‌ ಕುಮಾರ್‌ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ವಾದ ಮಂಡಿಸಿದ ಕರ್ನಾಟಕ ಸರ್ಕಾರದ ಪರ ವಕೀಲರಾದ ಕಪಿಲ್‌ ಸಿಬಲ್‌ ಮತ್ತು ಅಡ್ವೋಕೇಟ್‌ ಜನರಲ್‌ ಶಶಿಕಿರಣ್ ಶೆಟ್ಟಿ, ‘ಸದ್ಯ ವಿವಾದಲ್ಲಿರುವ ಜಾಗವನ್ನು ಬಳಸದೆ ಇರಲು ಸರ್ಕಾರ ನಿರ್ಧರಿಸಿದೆ. ಭೂಮಿ ವಶಪಡಿಸಿಕೊಳ್ಳುವ ನಿರ್ಧಾರದಿಂದಲೂ ಹಿಂದೆ ಸರಿದಿದ್ದೇವೆ. ಈ ಕುರಿತಂತೆ ನಾವು ಇತ್ತೀಚೆಗೆ ಹೊರಡಿಸಿದ ಸುಗ್ರೀವಾಜ್ಞೆ ಜಾರಿಯಲ್ಲಿ ಇರುವವರೆಗೂ ಅಥವಾ ಅದನ್ನು ರದ್ದುಪಡಿಸುವವರೆಗೂ ನಾವು ಭೂಮಿಯನ್ನು ಬಳಸಿಕೊಳ್ಳಲು ಹೋಗುವುದಿಲ್ಲ’ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಆದರೆ ಇದಕ್ಕೆ ತಿರುಗೇಟು ನೀಡಿದ ಮೈಸೂರು ಅರಮನೆ ಪರ ವಕೀಲರು, ‘ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಸುಪ್ರೀಂಕೋರ್ಟ್‌ನ ಹಿಂದಿನ ಆದೇಶ ಪಾಲಿಸಲು 6 ವಾರ ಸಮಯ ನೀಡಿದ ಅವಧಿಯಲ್ಲೇ ಸುಗ್ರೀವಾಜ್ಞೆ ಹೊರಡಿಸಲಾಗಿದೆ ಎಂದು ವಾದಿಸಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ನ್ಯಾಯಪೀಠ, ಟಿಡಿಆರ್‌ ಹಸ್ತಾಂತರ ಕುರಿತ ನಮ್ಮ ಹಿಂದಿನ ಆದೇಶ ಮರುಪರಿಶೀಲನೆ ಪ್ರಶ್ನೆಯೇ ಇಲ್ಲ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿ ಅರ್ಜಿ ವಿಚಾರಣೆ ಮುಂದೂಡಿತು.

Share this article