ಗದಗ: ವಿಶ್ವದಲ್ಲಿಯೇ ಭಾರತದ ನ್ಯಾಯಾಂಗ ಅತ್ಯುನ್ನತವಾಗಿದ್ದು. ಅಮಾಯಕರು ಶಿಕ್ಷೆಗೆ ಒಳಗಾಗಬಾರದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನೋಂದವರು, ಅಬಲೆಯರು,ದೀನ ದಲಿತರು,ಅಮಾಯಕರಿಗೆ ಪರಿಹಾರ ಒದಗಿಸುವುದೇ ಕಾನೂನಿನ ಮುಖ್ಯ ಉದ್ದೇಶವಾಗಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು.
ಅವರು ನಗರದ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಲಾದ ಮೂರು ದಿನಗಳ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಅನೇಕ ದೇಶ ಭಕ್ತರ ತ್ಯಾಗ ಬಲಿದಾನ ಹಾಗೂ ಹಲವು ವರ್ಷಗಳ ಹೋರಾಟದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ಈ ಪುಣ್ಯ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬರೂ ತಾವು ಜನಿಸಿದ ರಾಷ್ಟ್ರಕ್ಕಾಗಿ ಏನಾದರೂ ಕೊಡುಗೆ ಕೊಡುವುದು ಬಹಳ ಮುಖ್ಯವಾಗಿದೆ ಎಂದರು.ಕಾನೂನು ಸೌಲಭ್ಯ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕಾದ ಮಹತ್ತರ ಉದ್ದೇಶವಾಗಿದ್ದು, ಒಂದು ರಾಷ್ಟ್ರದ ಅಭಿವೃದ್ಧಿ ಹೊಂದಬೇಕಾದರೆ ಆ ರಾಷ್ಟ್ರದಲ್ಲಿ ಶಾಂತಿ ಕಾನೂನು ಸುವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಕಾನೂನು ಸಾಕ್ಷರತೆಯು ಬರೀ ಸಾಕ್ಷರತೆಯಾಗದೇ ಸಾರ್ವಜನಿಕರು ಯಾವುದು ತಪ್ಪು ಯಾವುದು ಸರಿ ಎಂದು ತಿಳಿವಳಿಕೆ ಹೊಂದುವಂತಾಗಬೇಕು. ಕಾನೂನಿನ ಅರಿವು ಹಾಗೂ ಸೌಲಭ್ಯಗಳು ಮನೆಮನೆಗೆ ತಲುಪಬೇಕು ಭಾರತೀಯ ನ್ಯಾಯ ಸಂಹಿತೆ-2023, ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ-2023, ಮೂರು ನೂತನ ಕಾನೂನುಗಳ ಪಕ್ಷಿ ನೋಟದ ವಿಷಯಗಳ ಕುರಿತು ವಿವರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ 100 ಗ್ರಾಮಗಳನ್ನು ವ್ಯಾಜ್ಯ ಮುಕ್ತ ಗ್ರಾಮಗಳನ್ನಾಗಿ ಮಾಡುವುದು ನಮ್ಮ ಸರ್ಕಾರದ ಮುಖ್ಯ ಉದೇಶವಾಗಿದ್ದು, ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಶಾಂತಿ ಮನೋಭಾವ ಹೊಂದಿದ ಗದಗ ಜಿಲ್ಲೆಯಲ್ಲಿ 100 ಗ್ರಾಮಗಳನ್ನು ವ್ಯಾಜ್ಯ ಮುಕ್ತ ಮಾಡಲು ಪ್ರಯತ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನ್ಯಾಯಾಂಗದ ಸಹಕಾರ ಅತ್ಯಗತ್ಯವಾಗಿದೆ ಎಂದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಐ. ಹಿರೇಮನಿ ಪಾಟೀಲ ಮಾತನಾಡಿ, ಕಾನೂನು ಕಾರ್ಯಾಗಾರದ ಸದುಪಯೋಗವನ್ನು ಯುವ ವಕೀಲರು ಪಡೆದುಕೊಳ್ಳಬೇಕೆಂದರು.
ಈ ವೇಳೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎಸ್.ಜಿ. ಪಲ್ಲೇದ, ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ವಿ.ಡಿ.ಕಾಮರೆಡ್ಡಿ, ಎಸ್.ಎಚ್. ಅಸಿಫ್ ಅಲಿ, ಎಸ್.ಎಸ್. ಮಿಟ್ಟಲಕೋಡ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎ.ಎಂ. ಹದ್ಲಿ, ಖಜಾಂಚಿ ವಿ.ಎಚ್. ಮೇರವಾಡೆ ಸೇರಿದಂತೆ ನ್ಯಾಯವಾದಿಗಳು, ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು, ಕಾನೂನು ವಿದ್ಯಾರ್ಥಿಗಳು ಇದ್ದರು.ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಬಿ.ಎಚ್. ಮಾಡಲಗೇರಿ ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಪ್ರಕಾಶ ಕಣಗಿನಹಾಳ ವಂದಿಸಿದರು. ವಕೀಲ ಎಂ.ಬಿ. ಮತ್ತೂರ ನಿರ್ವಹಿಸಿದರು.