ಚುನಾವಣಾ ಬಾಂಡ್ ಬಗ್ಗೆ ಸುಪ್ರೀಂ ನಡೆಯಿಂದ ಬಿಜೆಪಿಗೆ ಮುಖಭಂಗ: ಕಾಂಗ್ರೆಸ್

KannadaprabhaNewsNetwork | Published : Mar 12, 2024 2:01 AM

ಸಾರಾಂಶ

ಬಿಜೆಪಿ ಸರ್ಕಾರದ ಐಟಿ ಇಡಿ ರೇಡ್‌ಗಳಿಗೆ ಹೆದರಿ ವಿವಿಧ ಸಂಸ್ಥೆಗಳು ಬಾಂಡ್‌ಗಳ ಮೂಲಕ ಬಿಜೆಪಿಗೆ ದೇಣಿಗೆ ನೀಡುತ್ತಿದ್ದವು. ಇದು ಅಕ್ರಮ ದೇಣಿಗೆಯಾದ್ದರಿಂದ ಯಾರು ನೀಡಿದರೆಂಬುದು ಗೌಪ್ಯವಾಗಿಡಲಾಗಿದೆ. ಈ ರೀತಿ ಬಾಂಡ್‌ಗಳ ಮೂಲಕ ಬೆಂಬಲ ನೀಡುವುದು ಭ್ರಷ್ಟಾಚಾರದ ಇನ್ನೊಂದು ಮುಖವಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಕನ್ನಡಪ್ರಭ ವಾರ್ತೆ ಉಡುಪಿಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ್ದು, ಇದರಿಂದ ಬಿಜೆಪಿಯ ಭ್ರಷ್ಟಾಚಾರ ಬಯಲಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಪ್ರತಿಕ್ರಿಯಿಸಿದ್ದಾರೆ.ಕಾಳಧನ ನಿಯಂತ್ರಣಕ್ಕೆ ಚುನಾವಣಾ ಬಾಂಡ್ ಯೋಜನೆ ನಿಜವಾದ ಆಯ್ಕೆ ಎಂದು ಬಿಜೆಪಿ ಸರ್ಕಾರ ಜನತೆಯನ್ನು ನಂಬಿಸಿ ಭ್ರಷ್ಟಾಚಾರವನ್ನು ಅಧಿಕೃತಗೊಳಿಸಿತ್ತು. ಆದರೆ ಸುಪ್ರೀಂಕೋರ್ಟ್, ಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಎಂದು ಘೋಷಿಸಿ ರದ್ದುಗೊಳಿಸಿ, 2019ರಿಂದ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಮಾ.6ರ ಒಳಗೆ ಸಲ್ಲಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೂಚಿಸಿತ್ತು. ಆದರೆ ಈ ಮಾಹಿತಿಯನ್ನು ನಿಗದಿತ ಅವಧಿ ಒಳಗೆ ನೀಡಲು ವಿಫಲವಾದ ಎಸ್.ಬಿ.ಐ. ಪುನಃ ಜೂ.30ರ ತನಕ ಸಮಯವಕಾಶ ಕೋರಿದೆ.ಬಿಜೆಪಿ ಸರ್ಕಾರದ ಐಟಿ ಇಡಿ ರೇಡ್‌ಗಳಿಗೆ ಹೆದರಿ ವಿವಿಧ ಸಂಸ್ಥೆಗಳು ಬಾಂಡ್‌ಗಳ ಮೂಲಕ ಬಿಜೆಪಿಗೆ ದೇಣಿಗೆ ನೀಡುತ್ತಿದ್ದವು. ಇದು ಅಕ್ರಮ ದೇಣಿಗೆಯಾದ್ದರಿಂದ ಯಾರು ನೀಡಿದರೆಂಬುದು ಗೌಪ್ಯವಾಗಿಡಲಾಗಿದೆ. ಈ ರೀತಿ ಬಾಂಡ್‌ಗಳ ಮೂಲಕ ಬೆಂಬಲ ನೀಡುವುದು ಭ್ರಷ್ಟಾಚಾರದ ಇನ್ನೊಂದು ಮುಖವಾಗಿದೆ. ಆದ್ದರಿಂದಲೇ ಸುಪ್ರೀಂಕೋರ್ಟ್ ಬಿಜೆಪಿಯ ಈ ಕಳ್ಳಾಟಕ್ಕೆ ಕಡಿವಾಣ ಹಾಕಿದೆ ಎಂದು ಕಾಂಗ್ರೆಸ್ ವಕ್ತಾರರು ಶ್ಲಾಘಿಸಿದ್ದಾರೆ.ಮೋದಿಯವರು ಈ ಕಳ್ಳಾಟವನ್ನು ಮರೆಮಾಚಲು ತಮ್ಮ ಕೈಲಾದಷ್ಟು ಪ್ರಯತ್ನ ನಡೆಸಿದರು. ಚುನಾವಣೆಯ ವರೆಗೆ ಬಾಂಡ್ ಮಾಹಿತಿ ಬಹಿರಂಗವಾಗದಂತೆ ತಡೆಯುವ ಕೇಂದ್ರ ಸರ್ಕಾರದ ಹುನ್ನಾರ ವಿಫಲವಾಗಿದೆ. ಡಿಜಿಟಲ್ ಯುಗದಲ್ಲಿ ತಕ್ಷಣ ಪಡೆಯಬಹುದಾದ ಮಾಹಿತಿ ನೀಡಲು ಎಸ್.ಬಿ.ಐ. ಸಮಯ ಕೇಳಿರುವುದು ಕೇಂದ್ರದ ಒತ್ತಡದಿಂದ ಎಂದು ಬೇರೆ ಹೇಳಬೇಕಾಗಿಲ್ಲ.ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆಯ ಬಗ್ಗೆ ಸತ್ಯವನ್ನು ತಿಳಿದುಕೊಳ್ಳುವುದು ಜನತೆ ಹಕ್ಕು ಎಂದು ಸುಪ್ರೀಂ ಕೋರ್ಟ್ ಬಿಜೆಪಿಗೆ ಚಾಟಿ ಬೀಸಿದೆ. ಎಸ್.ಬಿ.ಐ.ಗೆ ಜೂ.30ರ ವರೆಗೆ ಸಮಯ ನೀಡಲೊಪ್ಪದ ಸುಪ್ರೀಂ ಕೋರ್ಟ್, ಮಾ.13ರೊಳಗೆ ಮಾಹಿತಿ ನೀಡುವಂತೆ ಆದೇಶಿಸಿದೆ. ಸುಪ್ರೀಂ ಕೋರ್ಟಿನಿಂದ ಮೋದಿ ಸರ್ಕಾರಕ್ಕೆ ಭಾರಿ ಮುಖಭಂಗವಾಗಿದೆ. ಸುಪ್ರೀಂ ಕೋರ್ಟಿನ ಈ ದಿಟ್ಟ ನಡೆಯಿಂದ ಕೇಂದ್ರ ಸರ್ಕಾರದ ಭ್ರಷ್ಟಾಚಾರ ಜಗಜ್ಜಾಹಿರವಾಗಲಿದೆ ಎಂದು ಭಾಸ್ಕರ ರಾವ್ ಹೇಳಿದ್ದಾರೆ.

Share this article