ಕನ್ನಡಪ್ರಭ ವಾರ್ತೆ ಮೈಸೂರು
ಕಾನೂನು ಕ್ಷೇತ್ರದಲ್ಲಿ ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಇಲ್ಲವೆ ಸಂವಹನ ಕೊರತೆ ಉಂಟಾಗುತ್ತದೆ ಎಂದು ಭೋಪಾಲ್ ರಾಷ್ಟ್ರೀಯ ಕಾನೂನು ಶಾಲೆಯ (ಎನ್ಎಲ್ಐಯು) ಕುಲಪತಿ ಪ್ರೊ.ಎಸ್. ಸೂರ್ಯಪ್ರಕಾಶ್ ತಿಳಿಸಿದರು.ಮೈಸೂರಿನ ಕುವೆಂಪುನಗರದಲ್ಲಿರುವ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಸುರಾನಾ ಮತ್ತು ಸುರಾನಾ ಅಂತಾರಾಷ್ಟ್ರೀಯ ಅಟಾರ್ನಿ ಸಹಯೋಗದಲ್ಲಿ ಆಯೋಜಿಸಿರುವ 21ನೇ ಸುರಾನಾ ಮತ್ತು ಸುರಾನಾ ರಾಷ್ಟ್ರೀಯ ಕಾರ್ಪೊರೇಟ್ ಕಾನೂನು ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಅವರು ಶನಿವಾರ ಉದ್ಘಾಟಿಸಿ ಮಾತನಾಡಿದರು.
ವಕೀಲರು ನ್ಯಾಯಾಲಯದಲ್ಲಿ ಸಂಬಂಧಿತ ವಿಷಯವನ್ನು ಸರಿಯಾದ ರೀತಿಯಲ್ಲಿ ಮಂಡಿಸದೇ ಹೋದರೆ ವಕೀಲ ವೃತ್ತಿಯ ಉದ್ದೇಶ ಈಡೇರಿಸುವುದಿಲ್ಲ. ವಕೀಲರು ನ್ಯಾಯಾಧೀಶರಿಗೆ ಅರ್ಥವಾಗುವ ರೀತಿಯಲ್ಲಿ ವಾದ ಮಂಡಿಸದಿದ್ದರೆ ಯಶಸ್ವಿ ವಕೀಲರಾಗಲು ಸಾಧ್ಯವಿಲ್ಲ. ಹೀಗಾಗಿ, ವಕೀಲರಿಗೆ ಭಾಷಾ ಶುದ್ಧತೆ, ವಿಷಯ ಸ್ಪಷ್ಟತೆ, ವಾದವನ್ನು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಮಂಡಿಸುವ ಕೌಶಲ್ಯ ಬಹಳ ಮುಖ್ಯ ಎಂದು ಅವರು ತಿಳಿಸಿದರು.ವಿಷಯವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ವಾದ ಮಂಡಿಸುವ ಮತ್ತು ಕಾನೂನನ್ನು ವ್ಯಾಖ್ಯಾನಿಸುವ ಕೌಶಲ್ಯ ರೂಢಿಸಿಕೊಂಡರೆ ವಕೀಲ ವೃತ್ತಿಯಲ್ಲಿ ಯಶಸ್ವಿಯಾಗಲು ಸಾಧ್ಯ. ಕಾನೂನು ಮತ್ತು ಜೀವನ ಎರಡೂ ಬೇರೆ ಬೇರೆಯಲ್ಲ. ಒಂದು ಪುಟ್ಟ ಮಗು ತನಗೆ ಏನಾದರು ಬೇಕಾದರೆ ತಾಯಿಯಿಂದ ಕೇಳಿ ಪಡೆದುಕೊಳ್ಳುವುದು ಸಹ ಒಂದು ರೀತಿಯ ಮಂಡನೆಯಾಗಿರುತ್ತದೆ. ಮಗು ತನಗೆ ಬೇಕಿರುವುದನ್ನು ತಾಯಿಗೆ ಅರ್ಥವಾಗುವ ರೀತಿಯಲ್ಲಿ ಮಂಡಿಸಿದರೇ ತನಗೆ ಸುಲಭವಾಗಿ ಪಡೆಯಬಹುದು ಎಂದರು.
ಅದೇ ರೀತಿ ಪ್ರತಿದಿನ ಎಷ್ಟೋ ವಿಚಾರಗಳ ಕುರಿತಾಗಿ ಜನರು ವಾದ ಮಾಡುತ್ತಿರುತ್ತಾರೆ. ಇಲ್ಲಿ ಸರಿಯಾದ ರೀತಿಯಲ್ಲಿ ವಾದಿಸಿದರೆ ಗೆಲುವು ಸಾಧಿಸಬಹುದು. ವಕೀಲ ವೃತ್ತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಸ್ಪಷ್ಟವಾದ ಭಾಷೆಯಲ್ಲಿ ವಾದ ಮಂಡಿಸಿದರೆ ವಕೀಲ ವೃತ್ತಿಯಲ್ಲಿ ಯಶಸ್ವಿಯಾಗಬಹುದು ಎಂದು ಅವರು ಸಲಹೆ ನೀಡಿದರು.ಎನ್ಎಲ್ಐಯು ವಿಶ್ರಾಂತ ಕುಲಪತಿ ಪ್ರೊ.ವಿ. ವಿಜಯಕುಮಾರ್, ಜೆಎಸ್‌ಎಸ್ ಕಾನೂನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್. ಸುರೇಶ್, ಪ್ರಾಂಶುಪಾಲ ಡಾ.ಎಸ್. ನಟರಾಜು, ಸುರಾನಾ ಮತ್ತು ಸುರಾನಾ ಅಂತಾರಾಷ್ಟ್ರೀಯ ಅಟಾರ್ನಿ ಶೈಕ್ಷಣಿಕ ಉಪಕ್ರಮಗಳ ಮುಖ್ಯಸ್ಥ ಪ್ರೀತಮ್ ಸುರಾನಾ ಇದ್ದರು.