ಹರಪನಹಳ್ಳಿ: ವೀರಶೈವ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಎಡಿಬಿ ಪ್ರಥಮ ದರ್ಜೆ ಕಾಲೇಜು ಹಾಗೂ ಎಸ್‌ಎಸ್‌ಎಚ್ ಜೈನ್ ಪಪೂ ಕಾಲೇಜುಗಳ ಸುವರ್ಣ ಮಹೋತ್ಸವ ಹಾಗೂ ರಜತಮಹೋತ್ಸವಗಳ ಅಂಗವಾಗಿ ಸುರಸಂಭ್ರಮ ಕಾರ್ಯಕ್ರಮವನ್ನು ಸೆ. 3 ಹಾಗೂ 4ರಂದು ಅದ್ಧೂರಿಯಾಗಿ ಆಯೋಜಿಸಲಾಗಿದೆ.
ಸೆ. 3ರಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಉಜ್ಜಯಿನಿ ಶ್ರೀಗಳ ಸಾನ್ನಿಧ್ಯದಲ್ಲಿ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿಗಳ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಸೆ. 3ರ ಸಂಜೆ ಜಾನಪದ ಸಂಭ್ರಮ ಕಾರ್ಯಕ್ರಮಕ್ಕೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗುತಿ ಚಾಲನೆ ನೀಡುವರು.
ಮಧ್ಯಾಹ್ನ ಬೆಳಗಾವಿಯ ರೋಹಿಣಿ ಹಿರೇಮಠ ಅವರಿಂದ ವಚನ ಗಾಯನ, ಡಾ. ರುದ್ರಪ್ಪನವರ ನಿರ್ದೆಶನದಲ್ಲಿ ಗಿರಿಜಾ ಕಲ್ಯಾಣ ಬಯಲಾಟ ನಡೆಯುವುದು. ಸಾಹಿತ್ಯಗೋಷ್ಠಿಯಲ್ಲಿ ಸಾಹಿತಿ ಎಚ್.ಜಿ. ಸಿದ್ದರಾಮಯ್ಯ, ಮುಕುಂದರಾಜ, ವಸುಂಧರಾ ಭೂಪತಿ ,ಎಸ್.ಎಚ್. ಅನುಪಮ ಭಾಗವಹಿಸಲಿದ್ದು, ವಿಜಯನಗರ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅಧ್ಯಕ್ಷತೆ ವಹಿಸುವರು. ಸಂಜೆ ಕಾಮಿಡಿ ಕಿಲಾಡಿಯ ಗೋವಿಂದೇಗೌಡ, ರಾಘವೇಂದ್ರ, ಪ್ರಮೀಳಾ ಜೈನ್ ಹಾಗೂ ಮಿಮಿಕ್ರಿ ಗೋಪಿ ಅವರ ತಂಡದಿಂದ ಹಾಸ್ಯ ಕಾರ್ಯಕ್ರಮ ಜರುಗಲಿದೆ.ಸೆ. 4ರಂದು ನಡೆಯುವ ಸಮಾರಂಭದಲ್ಲಿ ಸಮಾರೋಪ ಭಾಷಣವನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಾ. ಮಂಜುನಾಥ ಅವರು ಮಾಡುವರು. ಲಿಂಗನಾಯಕನಹಳ್ಳಿ ಹಾಗೂ ಕೊಟ್ಟೂರು ಬಸವಲಿಂಗ ಶ್ರೀಗಳು ಸಾನ್ನಿಧ್ಯ ವಹಿಸುವರು. ಸಮಾರೋಪ ಸಮಾರಂಭದ ಮಧ್ಯದಲ್ಲಿ ಕೊಪ್ಪಳ ಗವಿಮಠದ ಶ್ರೀಗಳು ಪ್ರವಚನ ನೀಡುವರು. ಸೆ. 3ರಂದು ಬೆಳಗ್ಗೆ ನಗರದ ಹಳೆಬಸ್ ನಿಲ್ದಾಣದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದದಿಂದ ಕಾಲೇಜಿನ ವರೆಗೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯುತ್ತದೆ.
ಈ ಕಾರ್ಯಕ್ರಮದಲ್ಲಿ ಕೃಷಿಗೆ ಸಂಬಂಧಪಟ್ಟಗೋಷ್ಠಿ, ಕೃಷಿ ಸಲಕರಣೆಗಳ ಪ್ರದರ್ಶನ ಆಯೋಜಿಸಲಾಗುವುದು. ಸ್ಥಳೀಯ ಎಲ್ಲ ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಆಗಸ್ಟ್ 25 ಅಥವಾ 26ರಂದು ಆರೋಗ್ಯ ಮೇಳ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.