ಪಟ್ಟಣ ಪಂಚಾಯಿತಿಗೆ ಸುರಯ್ಯಾ ಬಾನು ಅಧ್ಯಕ್ಷೆ

KannadaprabhaNewsNetwork | Published : Aug 27, 2024 1:34 AM

ನರಸಿಂಹರಾಜಪುರ, ಪಟ್ಟಣ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಸುರಯ್ಯಬಾನು ಹಾಗೂ ಉಪಾಧ್ಯಕ್ಷರಾಗಿ ಉಮಾಕೇಶವ್ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಉಮಾ ಕೇಶವ್ ಅವಿರೋದ ಆಯ್ಕೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪಟ್ಟಣ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಸುರಯ್ಯಬಾನು ಹಾಗೂ ಉಪಾಧ್ಯಕ್ಷರಾಗಿ ಉಮಾಕೇಶವ್ ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಪಟ್ಟಣ ಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸುರಯ್ಯಬಾನು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಉಮಾಕೇಶವ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ತನುಜಾ ಟಿ.ಸವದತ್ತಿ ಅಧ್ಯಕ್ಷರಾಗಿ ಸುರಯ್ಯಬಾನು ಮತ್ತು ಉಪಾಧ್ಯಕ್ಷರಾಗಿ ಉಮಾಕೇಶವ್ ಅವಿರೋಧ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. ಚುನಾವಣಾ ಶಿರಸ್ತೇದಾರ್ ವೇಣುಗೋಪಾಲ್ ಹಾಗೂ ಕಂದಾಯ ನಿರೀಕ್ಷಕ ಮಂಜುನಾಥ್, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಉಪಸ್ಥಿತರಿದ್ದರು. ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಹಾಗೂ ಭದ್ರಾ ಅಚ್ಚು ಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಅಭಿನಂದಿಸಿ ಮಾತನಾಡಿ, ನೂತನ ಅಧ್ಯಕ್ಷ, ಉಪಾಧ್ಯಕ್ಷರು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಬೇಕು. ಪ್ರತಿ ಯೊಬ್ಬ ಸದಸ್ಯರು ಒಮ್ಮತದ ಅಭಿಪ್ರಾಯ ನೀಡಿ ನಿಮಗೆ ಸಹಕಾರ ನೀಡಿದ್ದು ಪ್ರತಿಯೊಬ್ಬ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಕಾರ್ಯನಿರ್ವಹಿಸಬೇಕು. ಊರಿನ ಅಭಿವೃದ್ಧಿಗೆ ಶ್ರಮಿಸಬೇಕು. ನಿವೇಶನಗಳನ್ನು ನಿವೇಶನ ರಹಿತರಿಗೆ ಶೀಘ್ರವಾಗಿ ಹಂಚಲು ಕ್ರಮಕೈಗೊಳ್ಳಬೇಕು. ಪಟ್ಟಣದಲ್ಲಿ ರಸ್ತೆ ವಿಸ್ತರಣೆ ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಶ್ರಮಿಸುತ್ತಿದ್ದು ಅವರ ಸಹಕಾರ ಪಡೆಯಬೇಕು. ಪಟ್ಟಣ ಪಂಚಾಯಿತಿ ಕಚೇರಿಯನ್ನು ಜನಸ್ನೇಹಿಯಾಗಿ ರೂಪಿಸಬೇಕು. ಜನರ ಕಷ್ಟಸುಖಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಪಟ್ಟಣವನ್ನು ಮಾದರಿಯಾಗಿ ರೂಪಿಸಲು ಎಲ್ಲರ ಸಹಕಾರ ಪಡೆಯಬೇಕು. ಅಧಿಕಾರ ಶಾಶ್ವತವಲ್ಲ . ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಮೂಲಕ ಕಾಂಗ್ರೆಸ್ ಗೆ ಹೆಸರು ತಂದು ಕೊಡುವ ಕೆಲಸ ಮಾಡಬೇಕು ಎಂದರು. ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಬಿ.ರಘುವೀರ್ ಮಾತನಾಡಿ, ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರು ಪಟ್ಟಣ ಪಂಚಾಯಿತಿ ಉಳಿದ 14 ತಿಂಗಳ ಅವಧಿಯಲ್ಲಿ ಉತ್ತಮ ಕೆಲಸ ಮಾಡಬೇಕು. ಪಟ್ಟಣದ ವ್ಯಾಪ್ತಿಯಲ್ಲಿ ಗ್ರಾಮ ಠಾಣಾ ಪ್ರದೇಶ ದಲ್ಲಿ ವಾಸಿಸುತ್ತಿರುವವರಿಗೆ ಶಾಸಕರ ಸಹಕಾರದಲ್ಲಿ ಹಕ್ಕುಪತ್ರ ಹಾಗೂ ನಿವೇಶನ ರಹಿತರಿಗೆ ನಿವೇಶನ ನೀಡುವ ಮೂಲಕ ಜನಮಾನಸದಲ್ಲಿ ಉಳಿಯುವ ಶಾಶ್ವತ ಕೆಲಸ ಮಾಡಬೇಕು ಎಂದರು. ನಗರ ಕಾಂಗ್ರೆಸ್ ಘಟಕ ಅಧ್ಯಕ್ಷ ಬಿಳಾಲ್ ಮನೆ ಉಪೇಂದ್ರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು ಶಾಸಕ ಟಿ.ಡಿ.ರಾಜೇಗೌಡ, ರಾಜ್ಯ ಪ್ರವಾಸೋಧ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್, ಕಾಡಾ ಪ್ರಾಧಿಕಾರದ ಅಧ್ಯಕ್ಷ ಕೆ.ಪಿ. ಅಂಶು ಮಂತ್ ಸಹಕಾರ ಪಡೆದು ಪಟ್ಟಣವನ್ನು ಅಭಿವೃದ್ಧಿ ಪಡಿಸುವತ್ತ ಗಮನಹರಿಸಬೇಕು ಎಂದರು.ನೂತನ ಅಧ್ಯಕ್ಷ ಸುರಯ್ಯಬಾನು ಮಾತನಾಡಿ, ಪಟ್ಟಣ ಪಂಚಾಯಿತಿ ಕಾಂಗ್ರೆಸ್ ನ 9 ಸದಸ್ಯರ ವಿಶ್ವಾಸ ತೆಗೆದುಕೊಂಡು ಅವರ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತೇನೆ ಎಂದರು.ತಾಲೂಕು ಕಾಂಗ್ರೆಸ್ ಘಟಕ ಅಧ್ಯಕ್ಷ ಗೇರುಬೈಲು ನಟರಾಜ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಉಮಾಕೇಶವ್, ಸದಸ್ಯರಾದ ಆರ್.ಕುಮಾರ್ ಸ್ವಾಮಿ, ಮುನಾವರ್ ಪಾಷ, ಸೈಯದ್ ವಸೀಂ, ಶೋಜಾ, ಮುಕುಂದಾ, ಜುಬೇದಾ, ಕಾಂಗ್ರೆಸ್ ಮುಖಂಡರಾದ ಕೆ.ಎಂ.ಸುಂದರೇಶ್, ಎಸ್.ಡಿ.ರಾಜೇಂದ್ರ, ಈ.ಸಿ.ಜೋಯಿ, ಎಂ.ಆರ್‌.ರವಿಶಂಕರ್, ದೇವಂತ್ ಗೌಡ, ಸುನೀಲ್ ಕುಮಾರ್ ಮತ್ತಿತರರಿದ್ದರು.