ಸುರೇಶ್ ಬಾಬು ಸೋಲಿನ ಹತಾಸೆಯಿಂದ ಸುಳ್ಳು ಆರೋಪ

KannadaprabhaNewsNetwork |  
Published : Sep 05, 2026, 02:30 AM IST
ಕುರುಗೋಡು 02 ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಜೆ.ಎನ್. ಗಣೇಶ್ | Kannada Prabha

ಸಾರಾಂಶ

ಕಾಲುವೆಗೆ ನೀರು ಒದಗಿಸುವ ವಿಚಾರದಲ್ಲಿ ನನ್ನ ಲೇವಡಿ ಮಾಡುವ ಅವರು ತಮ್ಮ ಅವಧಿಯಲ್ಲಿ ಸಿಂಧಗೇರಿ, ಕೊರ್ಲಗುಂದಿ ಸೇರಿದಂತೆ ಇತರ ಗ್ರಾಮದ ಜಮೀನಿಗೆ ನೀರು ಪೂರೈಕೆಯಾಗುತ್ತಿರಲಿಲ್ಲ ಎಂಬುವುದು ಮರೆತಿದ್ದಾರೆ.

ಕುರುಗೋಡು: ನನ್ನ ಎದುರು ಎರಡು ಬಾರಿ ಸೋತಿರುವ ಮಾಜಿ ಶಾಸಕ ಟಿ.ಎಚ್‌.ಸುರೇಶ ಬಾಬು ಹತಾಸೆಯಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ಜೆ.ಎನ್‌.ಗಣೇಶ ತಿರುಗೇಟು ನೀಡಿದ್ದಾರೆ.

ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಗಳಿಗೆ ದಾಖಲೆಗಳಿದ್ದರೆ ತೋರಿಸಲಿ ಎಂದು ಸವಾಲು ಹಾಕಿದರು.

ಕಂಪ್ಲಿ ಮತ್ತು ಕುರುಗೋಡಿನಲ್ಲಿ ಮಿನಿ ವಿಧಾನ ಸೌಧ ಕಟ್ಟಡ ಹಾಗೂ 100 ಹಾಸಿಗೆ ಆಸ್ಪತ್ರೆ ಕಟ್ಟಡಗಳು ನಾನು ಶಾಸಕನಾದ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ. ನನ್ನ ಬಳಿ ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳು ಇವೆ. ಅವರ ಬಳಿ ಇದ್ದರೆ ಬಹಿರಂಗ ಪಡಿಸಲಿ ಎಂದರು.

ಮಾಜಿ ಶಾಸಕ ಸುರೇಶ್ ಬಾಬು ಪ್ರಸ್ತುತ ಹತ್ತಾರು ಕೋಟಿ ಸಂಪಾದಿಸಿದ್ದಾರೆ. ಆದರೆ ಯಾವ ಗದ್ದೆ ನಾಟಿ ಮಾಡಿ, ಜಮೀನಲ್ಲಿ ಮಣಸಿನಕಾಯಿ ಬೆಳೆದು ಹಣ ಗಳಿಸಿದ್ದಾರೆ ಎಂಬುದು ಜನರಿಗೆ ತಿಳಿಸಲಿ.

ಕಾಲುವೆಗೆ ನೀರು ಒದಗಿಸುವ ವಿಚಾರದಲ್ಲಿ ನನ್ನ ಲೇವಡಿ ಮಾಡುವ ಅವರು ತಮ್ಮ ಅವಧಿಯಲ್ಲಿ ಸಿಂಧಗೇರಿ, ಕೊರ್ಲಗುಂದಿ ಸೇರಿದಂತೆ ಇತರ ಗ್ರಾಮದ ಜಮೀನಿಗೆ ನೀರು ಪೂರೈಕೆಯಾಗುತ್ತಿರಲಿಲ್ಲ ಎಂಬುವುದು ಮರೆತಿದ್ದಾರೆ.

ಸುರೇಶ್ ಬಾಬು ಅವಧಿಯಲ್ಲಿ ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದು ಜನರಿಗೆ ತಿಳಿಸಲಿ. ನನ್ನ ಅವಧಿಯಲ್ಲಿ ಹತ್ತಾರು ಕೆಲಸ ಮಾಡಿರುವೆ. ಜನಾರ್ದನ ರೆಡ್ಡಿ, ಶ್ರೀರಾಮುಲು, ಸುರೇಶ್ ಬಾಬು 2004 ರಿಂದ 2012 ತನಕ ಗಣಿ ಲೂಟಿ ಮಾಡಿದ್ದೆ ಇವರ ಸಾಧನೆ. ಸುರೇಶ್ ಬಾಬು ಎರಡು ಅವಧಿಗೆ ಶಾಸಕರಾಗಿದ್ದ ಸಂದರ್ಭದಲ್ಲಿ ರೈತರ ಬಗ್ಗೆ ಇಲ್ಲದ ಕಾಳಜಿ ಈಗ ಬಂದಿದೆ. ರೈತರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರೈತರ ವಿಷಯದಲ್ಲಿ ನಾನು ಎಂದು ತೋರಿಕೆ ರಾಜಕಾರಣ ಮಾಡಿಲ್ಲ. ಮಾಡುವುದು ಇಲ್ಲ. ನಾನು ಮಾಡಿದ ಅಭಿವೃದ್ಧಿ ಕುರಿತು ದಾಖಲೆ ತರುತ್ತೇನೆ. ಅವರ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕುರಿತು ದಾಖಲೆ ತರಲಿ ಬಹಿರಂಗವಾಗಿ ಚರ್ಚೆ ಮಾಡಲು ನಾನು ಸಿದ್ಧ ಎಂದರು.

ಗಂಗಾವತಿ ಶಾಸಕ ಜಿ.ಜನಾರ್ದನ ರೆಡ್ಡಿ ಹಿರಿಯರಿದ್ದಾರೆ. ಅವರು ಮಾಡಿರುವ ಆರೋಪಗಳ ಕುರಿತು ನಾನು ಮಾತನಾಡುವುದಿಲ್ಲ. ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸ ನೋಡಿ ಬಿಜೆಪಿ ಬೆಂಬಲಿಸುವ ಶೇ.30ರಷ್ಟು ಜನರು ನನಗೆ ಮತ ನೀಡಲಿದ್ದಾರೆ. ಅವರ ಆರೋಪಗಳಿಗೆ 2028ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಉತ್ತರ ನೀಡುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿಯಲ್ಲಿ ದೇವಕಿಸುತನ ಅವತಾರ ಸಂಭ್ರಮ
ಉಡುಪಿ ಕೃಷ್ಣಮಠದಲ್ಲಿ ಎಲ್ಲಿ ನೋಡಿದರಲ್ಲಿ ಕೃಷ್ಣಂದಿರು...!