ಕೊಪ್ಪಳ: ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಸುರೇಶ ಭೂಮರಡ್ಡಿ ಸೋಮವಾರ ಬೆಂಗಳೂರಿನಲ್ಲಿ ಪಕ್ಷದ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.ಈ ಮೂಲಕ ಜಿಲ್ಲೆಯಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಪಕ್ಷದ ಸಂಘಟನೆಯ ಹೊಣೆಯನ್ನು ಸುರೇಶ ಭೂಮರಡ್ಡಿ ಹೆಗಲಿಗೆ ನೀಡಲಾಗಿದೆ.ಕಾಂಗ್ರೆಸ್ ಪಕ್ಷದ ಕೊಪ್ಪಳ ಬ್ಲಾಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಸುರೇಶ ಭೂಮರಡ್ಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸೇರ್ಪಡೆಯಾದರು. ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸಿ.ವಿ. ಚಂದ್ರಶೇಖರ ಅವರನ್ನು ಬೆಂಬಲಿಸಿ, ಚುನಾವಣೆಯಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದ್ದರು. ಈಗ ಅವರನ್ನೇ ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ವೀರೇಶ ಮಹಾಂತಯ್ಯನಮಠ ಅಧಿಕಾರ ವಹಿಸಿಕೊಂಡು, ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದರು.ರಾಜ್ಯ ಕಾರ್ಯಾದರ್ಶಿಯಾಗಿ ವೀರೇಶ ಮಹಾಂತಯ್ಯನಮಠ ಇರುವಾಗಲೇ ಅವರಿಗೆ ಕೊಪ್ಪಳ ಜಿಲ್ಲಾಧ್ಯಕ್ಷ ಸ್ಥಾನ ನೀಡಿ, ಪಕ್ಷ ಸಂಘಟನೆಯ ಹೊಣೆ ನೀಡಿತ್ತು. ಈಗ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಸುರೇಶ ಭೂಮರಡ್ಡಿ ಅವರಿಗೆ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿ, ಅಧಿಕಾರ ಹಸ್ತಾಂತರಿಸಿದೆ.ದಿಢೀರ್ ನಿರ್ಧಾರ:ಬೆಂಗಳೂರಿನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಜಿಲ್ಲಾಧ್ಯಕ್ಷರನ್ನಾಗಿ ಸುರೇಶ ಭೂಮರಡ್ಡಿ ಅವರನ್ನು ಮಾಜಿ ಸಿಎಂ ಕುಮಾರಸ್ವಾಮಿ ಘೋಷಿಸಿದರು. ಬಳಿಕ ಪಕ್ಷದ ಧ್ವಜ ನೀಡುವ ಮೂಲಕ ಹಿಂದಿನ ಅಧ್ಯಕ್ಷರಿಂದ ಅಧಿಕಾರ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಸಿ.ವಿ. ಚಂದ್ರಶೇಖರ, ಅಲ್ಕೋಡ ಹನುಮಂತಪ್ಪ, ವೀರೇಶ ಮಹಾಂತಯ್ಯನಮಠ ಇದ್ದರು.ಅಚ್ಚರಿಯ ಬೆಳವಣಿಗೆ:ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಪರಾಭವಗೊಂಡ ಹಾಗೂ ಪಕ್ಷದ ಕೋರ್ ಕಮಿಟಿ ಸದಸ್ಯರಾದ ಸಿ.ವಿ. ಚಂದ್ರಶೇಖರ ಬಿಜೆಪಿ ಸೇರುತ್ತಾರೆ ಎನ್ನುವ ವದಂತಿ ಹರಡಿದ ಬೆನ್ನಲ್ಲೇ ಈಗ ಸುರೇಶ ಭೂಮರಡ್ಡಿ ಹೆಗಲಿಗೆ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.