
- 527 ವೀರ ಯೋಧರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಲು 30 ಕಿ.ಮೀ. ನಡಿಗೆ
ಕೊಟ್ಟಿಗೆಹಾರದಿಂದ ಶುಕ್ರವಾರ ಪಾದಯಾತ್ರೆ ಆರಂಭಿಸಿದ ಸುರೇಶ್ ಕುಮಾರ್ ಅವರನ್ನು ಸ್ಥಳೀಯರಾದ ಸಂಜಯ್ ಗೌಡ, ಅಭಿಲಾಷ್, ಸಾಗರ್ ತರುವೆ, ವಿಕ್ರಂ, ವಿನಯ್ ಸೇರಿದಂತೆ ಹಲವರು ಆತ್ಮೀಯವಾಗಿ ಬೀಳ್ಕೊಟ್ಟು ಶುಭ ಹಾರೈಸಿದರು.ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಭಾಗದ ಮುಂಡಾಜೆ ಗ್ರಾಮದಲ್ಲಿ ಪರಿಸರ ಪ್ರೇಮಿ ಸಚಿನ್ ಅವರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ 527 ಯೋಧರ ಸ್ಮರಣಾರ್ಥ 527 ವಿವಿಧ ಜಾತಿ ಮರಗಳನ್ನು ಬೆಳೆಸಿ ವಿಶಿಷ್ಟವಾದ ಕಾರ್ಗಿಲ್ ಸ್ಮಾರಕ ವನ ನಿರ್ಮಿಸಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರ ಸ್ಮರಣೆಯನ್ನು ಪರಿಸರ ಸಂರಕ್ಷಣೆ ಯೊಂದಿಗೆ ಶಾಶ್ವತಗೊಳಿಸಿರುವ ಸಚಿನ್ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸೈಕ್ಲಿಂಗ್ ಮೂಲಕ ತೆರಳಿದ್ದ ಸಂದರ್ಭದಲ್ಲಿ ಸುರೇಶ್ ಕುಮಾರ್ ಅವರಿಗೆ ಈ ಸ್ಮಾರಕ ವನದ ಪರಿಚಯವಾಗಿತ್ತು. ಯೋಧರ ನೆನಪಿಗಾಗಿ ಅಷ್ಟೇ ಸಂಖ್ಯೆಯ ಮರಗಳನ್ನು ಬೆಳೆಸಿರುವ ಸಚಿನ್ ಅವರ ಪ್ರಯತ್ನ ದಿಂದ ಪ್ರೇರಿತರಾಗಿ ಸ್ಮಾರಕ ವನಕ್ಕೆ ಖುದ್ದಾಗಿ ಭೇಟಿ ನೀಡಿ ಸಚಿನ್ ಅವರನ್ನು ಅಭಿನಂದಿಸುವ ಜತೆಗೆ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ನಿರ್ಧರಿಸಿದ್ದಾರೆ.ಈ ಕುರಿತು ಮಾತನಾಡಿದ ಸುರೇಶ್ ಕುಮಾರ್, ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ 527 ವೀರ ಯೋಧರ ಸ್ಮರಣಾರ್ಥ 527 ಮರಗಳನ್ನು ಬೆಳೆಸಿ ಸ್ಮಾರಕ ವನ ನಿರ್ಮಿಸಿರುವ ಸಚಿನ್ ಅವರ ಕಾರ್ಯ ಶ್ಲಾಘನೀಯ. ಯೋಧರ ತ್ಯಾಗ ಸ್ಮರಿಸುವ ಜತೆಗೆ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿರುವುದು ಎಲ್ಲರಿಗೂ ಮಾದರಿ. ಇಂತಹ ಅಪರೂಪದ ಕಾರ್ಯ ಕಣ್ಣಾರೆ ಕಂಡು ಸಚಿನ್ ಅವರನ್ನು ಅಭಿನಂದಿಸಬೇಕು ಹಾಗೂ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಬೇಕು ಎಂಬ ಉದ್ದೇಶದಿಂದ ಪಾದಯಾತ್ರೆ ಕೈಗೊಂಡಿದ್ದೇನೆ. ದೇಶಕ್ಕಾಗಿ ಪ್ರಾಣ ನೀಡಿದ ಯೋಧರ ಸ್ಮರಣೆ ಸದಾ ಜೀವಂತವಾಗಿರಬೇಕು ಎಂಬುದೇ ನನ್ನ ಆಶಯ ಎಂದು ತಿಳಿಸಿದರು.