ಸುರೇಶ್ ಗೆಲವು ಸಾಧಿಸುವುದು ಶತಸಿದ್ದ: ಸಿಎಂ

KannadaprabhaNewsNetwork |  
Published : Mar 29, 2024, 12:53 AM IST
28ಕೆಆರ್ ಎಂಎನ್ 5.ಜೆಪಿಜಿರಾಮನಗರದ ವಿಜಯನಗರದ ಬಳಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಜನರ ಮಧ್ಯೆ ಇರುವ ಕ್ರಿಯಾಶೀಲ ರಾಜಕಾರಣಿ ಡಿ.ಕೆ.ಸುರೇಶ್ ಬೇಕೆ ಹೊರತು ವೈಟ್ ಕಾಲರ್ ರಾಜಕಾರಣಿ ಡಾ.ಸಿ.ಎನ್. ಮಂಜುನಾಥ್ ಬೇಡ ಎಂಬುದನ್ನು ಕ್ಷೇತ್ರದ ಮತದಾರರು ನಿರ್ಧರಿಸಿ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಮನಗರ: ಜನರ ಮಧ್ಯೆ ಇರುವ ಕ್ರಿಯಾಶೀಲ ರಾಜಕಾರಣಿ ಡಿ.ಕೆ.ಸುರೇಶ್ ಬೇಕೆ ಹೊರತು ವೈಟ್ ಕಾಲರ್ ರಾಜಕಾರಣಿ ಡಾ.ಸಿ.ಎನ್. ಮಂಜುನಾಥ್ ಬೇಡ ಎಂಬುದನ್ನು ಕ್ಷೇತ್ರದ ಮತದಾರರು ನಿರ್ಧರಿಸಿ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿನಿತ್ಯ ನನಗೆ ಮಾಹಿತಿ ಬರುತ್ತಿದೆ. ಈ ಆಧಾರದಲ್ಲಿ ಹೇಳುತ್ತೇನೆ. ಡಿ.ಕೆ.ಸುರೇಶ್ ಅವರು ಗೆಲವು ಸಾಧಿಸುವುದು ಶತಸಿದ್ದ. ಸಂಸದರಾದರು ಡಿ.ಕೆ.ಸುರೇಶ್ ಪಂಚಾಯಿತಿ ಸದಸ್ಯನಂತೆ ಜನ ಸಂಪರ್ಕ ಸಾಧಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ದುಡಿಯುವ ಆ ವ್ಯಕ್ತಿಯನ್ನು ಪ್ರತಿನಿಧಿಯಾಗಿ ದೆಹಲಿಗೆ ಕಳುಹಿಸಿದರೆ ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

ಈ ಕ್ಷೇತ್ರದಲ್ಲಿ ಬಿಜೆಪಿಯವರಿಗೆ ಅಭ್ಯರ್ಥಿ ಸಿಗಲಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಅಂತ ಡಾ.ಸಿ.ಎನ್. ಮಂಜುನಾಥ್ ಅವರನ್ನು ಕರೆತಂದು ನಿಲ್ಲಿಸಿದ್ದಾರೆ. ಅವರು ಸರ್ಕಾರಿ ನೌಕರಿಯಲ್ಲಿದ್ದರೆ ಹೊರತು ರಾಜಕಾರಣದಲ್ಲಿ ಇರಲಿಲ್ಲ. ಎಂದಾದರು ಜನರ ಸೇವೆ ಮಾಡಿದ್ದಾರಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಜನರ ಕಷ್ಟಸುಖಗಳಿಗೆ ಸ್ಪಂದಿಸುವ ಸುರೇಶ್ ಬೇಕೊ ಅಥವಾ ವೈಟ್ ಕಾಲರ್ ರಾಜಕಾರಣಿ ಮಂಜುನಾಥ್ ಬೇಕೊ ಎಂಬುದನ್ನು ಜನರು ತೀರ್ಮಾನ ಮಾಡಿ ಆಗಿದೆ ಎಂದು ಹೇಳಿದರು.

ದೇವೇಗೌಡರ ಕುಟುಂಬವನ್ನು ಪ್ರಶ್ನಿಸಿ :

ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಅನೇಕ ವರ್ಷಗಳಿಂದ ರಾಮನಗರ ಜಿಲ್ಲೆಯನ್ನು ಪ್ರತಿನಿಧಿಸಿದೆ. ದೇವೇಗೌಡ ಮುಖ್ಯಮಂತ್ರಿಯಾಗಿ ಪ್ರಧಾನಿಯಾದರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರೂ ರಾಮನಗರ ಜಿಲ್ಲೆಯನ್ನು ಅಭಿವೃದ್ಧಿ ಮಾಡಲಿಲ್ಲ. ಇದನ್ನು ಜಿಲ್ಲೆಯ ಜನರು ಪ್ರಶ್ನೆ ಮಾಡಬೇಕು ಎಂದರು.

ಬಿಜೆಪಿಯವರು 3 ವರ್ಷ ಅಧಿಕಾರದಲ್ಲಿದ್ದಾಗ ರಾಮನಗರ ಜಿಲ್ಲೆಗೆ ಏನು ಕೊಡುಗೆ ನೀಡಲಿಲ್ಲ. ಈಗಿನ ಶಾಸಕ ಇಕ್ಬಾಲ್ ಹುಸೇನ್ ಬಂದ ಮೇಲೆ ರಾಮನಗರ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿದೆ. ನನ್ನ ಬಳಿ ವಿಶೇಷ ಅನುದಾನ ಕೇಳಿಕೊಂಡು ಅನೇಕ ಬಾರಿ ಬಂದಿದ್ದಾರೆ. ಈಗಾಗಲೇ ರಾಮನಗರ ಟೌನ್ ಗೆ 125 ಕೋಟಿ ಕೊಟ್ಟಿದ್ದೇವೆ. ಚುನಾವಣೆ ಮುಗಿದ ಮೇಲೆ ಇನ್ನೂ ಅನುದಾನ ಕೊಡುವ ಭರವಸೆ ಕೊಟಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಸಿ.ಸುಧಾಕರ್, ಮಂಕಾಳ ವೈದ್ಯ, ರಾಮಲಿಂಗಾರೆಡ್ಡಿ, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್ , ಶಾಸಕರಾದ ಕೊತ್ನೂರು ಮಂಜುನಾಥ್, ಇಕ್ಬಾಲ್ ಹುಸೇನ್ , ಬಾಲಕೃಷ್ಣ, ಬಿ.ಶಿವಣ್ಣ, ವಿಧಾನ‌ ಪರಿಷತ್ ಸದಸ್ಯ ಸುಧಾಮ ದಾಸ್, ಪುಟ್ಟಣ್ಣ, ಎಸ್ .ರವಿ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಕೆ.ರಾಜು ಇತರರು ಉಪಸ್ಥಿತರಿದ್ದರು.

ಬಾಕ್ಸ್‌........

ಅಭಿವೃದ್ಧಿ ವರ್ಸಸ್ ಸುಳ್ಳಿನ ನಡುವಿನ ಚುನಾವಣೆ: ಸಿಎಂ

ರಾಮನಗರ: ನಾವು ಅಭಿವೃದ್ಧಿ ಮಾಡುತ್ತಿದ್ದರೆ, ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಈಗ ಅಭಿವೃದ್ಧಿ ವರ್ಸಸ್ ಸುಳ್ಳಿನ ನಡುವೆ ಚುನಾವಣೆ ನಡೆಯುತ್ತಿದೆ ಎಂದು ಹೇಳಿದರು.

ನಗರದ ವಿಜಯನಗರದ ಬಳಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಬಂದ ದಿನದಿಂದಲೇ ನಾವು ಕೊಟ್ಟ ಮಾತನ್ನು ಈಡೇರಿಸುವ ಕೆಲಸ ಶುರು ಮಾಡಿದೆವು. ಎಂಟೇ ತಿಂಗಳಲ್ಲಿ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಬಿಜೆಪಿ ಇವತ್ತಿನವರೆಗೂ ಕೊಟ್ಟ ಮಾತಿನಲ್ಲಿ ಒಂದನ್ನೂ ಈಡೇರಿಸಿಲ್ಲ. ಹೀಗಾಗಿ ಬಿಜೆಪಿಗೆ ಮತ ಹಾಕಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿಕೊಳ್ಳಿ ಎಂದರು.

ನಾವು ನಮ್ಮ ಗ್ಯಾರಂಟಿ ಯೋಜನೆಗಳ ಮೂಲಕ ನೇರವಾಗಿ ಕನ್ನಡ ನಾಡಿನ‌ ಜನತೆಯ ಖಾತೆಗೆ ಹಣ ಜಮೆ ಮಾಡುತ್ತಿದ್ದೇವೆ. ಶೂದ್ರರು, ದಲಿತರು, ಮಹಿಳೆಯರು, ಶ್ರಮಿಕರು, ದುಡಿಯುವ ವರ್ಗಗಳ ಎಲ್ಲರ ಮನೆ ಮನೆಯನ್ನೂ ನಮ್ಮ ಗ್ಯಾರಂಟಿಗಳು ತಲುಪಿವೆ. ಇದು ನಮ್ಮ ಬದ್ಧತೆ. ನೀವು ಕೊಟ್ಟ ಒಂದೊಂದು ಓಟಿಗೂ ಘನತೆ ತಂದಿದ್ದೇವೆ ಎಂದು ಹೇಳಿದರು.

ಬಿಜೆಪಿ-ಜೆಡಿಎಸ್ ಕಾರ್ಯಕರ್ತರು, ಕುಟುಂಬಗಳಿಗೂ ನಮ್ಮ ಸರ್ಕಾರ ಹಣ ಜಮೆ ಮಾಡುತ್ತಿದೆ. ಪಕ್ಷ, ಜಾತಿ, ಧರ್ಮ ಯಾವುದನ್ನೂ ನೋಡದೆ ಇಡೀ ನಾಡಿನ ಜನತೆಗೆ ಅವರ ಕುಟುಂಬಗಳಿಗೆ ಉಚಿತ ಅಕ್ಕಿ, ಉಚಿತ ವಿದ್ಯುತ್ ಜತೆಗೆ ಮಹಿಳೆಯರ ಖಾತೆಗೆ 2 ಸಾವಿರ ರೂಪಾಯಿ, ನಿರುದ್ಯೋಗಿಗಳ ಖಾತೆಗೆ ಭತ್ಯೆಯನ್ನು ಜಮೆ ಮಾಡುತ್ತಿದೆ. ಹೀಗೆ ಕಾಂಗ್ರೆಸ್ ಪಕ್ಷ ಪ್ರತಿಯೊಬ್ಬ ಮತದಾರರ ನಂಬಿಕೆ ಉಳಿಸಿಕೊಂಡಿದೆ ಎಂದರು.

ಬಿಜೆಪಿ ಸರ್ಕಾರ ಇದ್ದಾಗಲೂ ನೀವು ತೆರಿಗೆ ಕಟ್ಟಿದ್ದೀರಿ. ಆದರೆ ಬಿಜೆಪಿ ನಿಮ್ಮ ತೆರಿಗೆ ಹಣವನ್ನು ನಿಮಗಾಗಿ ಖರ್ಚು ಮಾಡಲಿಲ್ಲ. ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ ಬೆಲೆಯನ್ನು ವಿಪರೀತ ಹೆಚ್ಚಿಸಿ ನಿಮ್ಮ ತೆರಿಗೆ ಹಣವನ್ನೂ ನಿಮಗಾಗಿ ಖರ್ಚು ಮಾಡಲಿಲ್ಲ. ಆದರೆ ನಾವು ಪ್ರತೀ ತಿಂಗಳು 4 ರಿಂದ 5 ಸಾವಿರ ರೂಪಾಯಿಯನ್ನು ಪ್ರತಿ ಅರ್ಹ ಕುಟುಂಬಗಳಿಗೆ ನಮ್ಮ ಕಾಂಗ್ರೆಸ್ ಸರ್ಕಾರ ನೀಡುತ್ತಿದೆ. ಕಾಂಗ್ರೆಸ್ ಅಂದರೆ ಬಡವರ, ಮಧ್ಯಮ ವರ್ಗದವರ ಪರವಾಗಿ ಕೆಲಸ ಮಾಡುವ ಪಕ್ಷ ಎಂದು ಸಿದ್ದರಾಮಯ್ಯ ಹೇಳಿದರು.28ಕೆಆರ್ ಎಂಎನ್ 5.ಜೆಪಿಜಿ

ರಾಮನಗರದ ವಿಜಯನಗರದ ಬಳಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ