ಕನ್ನಡಪ್ರಭ ವಾರ್ತೆ ಕೋಲಾರ
ಮಾಜಿ ಶಾಸಕ ಮಾಲೂರು ಮಂಜುನಾಥ್ ಗೌಡ ಹಾಗೂ ಮಾಜಿ ಸಂಸದ ಎಸ್. ಮುನಿಸ್ವಾಮಿ ಮತ್ತು ಮುಖಂಡರ ನಿಯೋಗದ ಮನವಿ ಮೇರೆಗೆ ಪರಿಶೀಲಿಸಿ ಡಿಸಿ ಅವರೊಂದಿಗೆ ಚರ್ಚಿಸಿ ಸತ್ಯಾಂಶ ಅರಿತು ಸಾಮಾಜಿಕ ನ್ಯಾಯ ಕೊಡಿಸಲು ಕೋಲಾರಕ್ಕೆ ಭೇಟಿ ನೀಡಿರುವುದಾಗಿ ಸುರೇಶ್ ಕುಮಾರ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನಕ್ಕೆ ಡಿಸಿರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ೧೯೫೫-೫೬ನೇ ಸಾಲಿನಲ್ಲಿ ಕೋಲಾರ ಜಿಲ್ಲೆಯ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆಂದು ದಾನಿಗಳಾದ ಶ್ರೀನಿವಾಸ್ ದಾನ ಮಾಡಿದ್ದ ೫೧ ಎಕರೆ ಭೂಮಿ ನೋಂದಣಿಯಾಗಿದ್ದು ಇದನ್ನು ಖಾತೆ ಮಾಡಲು ಶಿಕ್ಷಣಾಧಿಕಾರಿಗಳು ಸಂಬಂಧಪಟ್ಟ ತಹಸೀಲ್ದಾರ್‌ರಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಖಾತೆ ಮಾಡದೆ ಈ ಭೂಮಿಯನ್ನು ಕೆಲವು ಪಟ್ಟಭದ್ರ ಹಿತಾಸಕ್ತರು ರಿಯಲ್ ಎಸ್ಟೇಟ್ ಉದ್ಯಮಿಗಳು ಪರಭಾರೆ ಮಾಡಿಕೊಂಡು ಲಪಟಾಯಿಸಲು ಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಶೈಕ್ಷಣಿಕ ಅಭಿವೃದ್ಧಿಗೆಂದು ದಾನಿಗಳು ನೀಡಿರುವ ಜಾಗವನ್ನು ಯಾವುದೇ ಕಾರಣಕ್ಕೂ ದುರ್ಬಳಕೆಯಾಗದಂತೆ ಸಂರಕ್ಷಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ಹೇಳಿದರು.
ಮೇ ೯ರಂದು ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪೋತ್ಸವ ಕಾರ್ಯಕ್ರಮ ಬೃಹತ್ ಮಟ್ಟದಲ್ಲಿ ಆಯೋಜಿಸಿದೆ, ಉತ್ಸವದಲ್ಲಿ ಸುಮಾರು ೧೦ ಲಕ್ಷ ಮಂದಿ ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸುವ ನಿರೀಕ್ಷೆಯಿದೆ, ಕಳೆದ ೧೦೭೮-೭೯ನೇ ಸಾಲಿನಲ್ಲಿ ಯಡಿಯೂರಪ್ಪ ಸ್ಥಳೀಯ ಸಂಸ್ಥೆಯ ಸದಸ್ಯರಾಗಿದ್ದು ನಂತರದಲ್ಲಿ ಶಿಕಾರಿಪುರದ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಏಕೈಕ ಶಾಸಕರಾಗಿ ಆಡಳಿತ ಪಕ್ಷವನ್ನು ಎದುರಿಸಿದ ಧೀಮಂತ ನಾಯಕ ಎಂದು ನೆನಪಿಸಿಕೊಂಡರು.