ಬಾಣಂತಿಯರ ಸಾವು: ಅವ್ಯವಸ್ಥೆಗೆ ಬೇಕಿದೆ ಸರ್ಜರಿ

KannadaprabhaNewsNetwork | Published : Dec 19, 2024 12:30 AM

ಸಾರಾಂಶ

ರಾಯಚೂರು ಜಿಲ್ಲೆಯಲ್ಲಿ ಬಾಣಂತಿಯರ ಸಾವು ಪ್ರಕರಣಗಳು ಘಟಿಸಿದ ಹಿನ್ನೆಲೆಯಲ್ಲಿ ಜಿಪಂ ಸಿಇಒ ಪಾಂಡ್ವೆ ರಾಹುಲ್‌ ತುಕಾರಾಂ ಕ್ರಮಗಳ ಕುರಿತು ಖುದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ರಾಮಕೃಷ್ಣ ದಾಸರಿಕನ್ನಡಪ್ರಭ ವಾರ್ತೆ ರಾಯಚೂರುಜಿಲ್ಲೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳು ಇಲ್ಲಿನ ವೈದ್ಯಕೀಯ ಸೇವೆ ಅವ್ಯವಸ್ಥೆಯ ಕೊಳಕನ್ನು ಬಯಲು ಮಾಡಿದ್ದು, ಇಂತಹ ವ್ಯವಸ್ಥೆ ಸುಧಾರಣೆಗೆ ಭರ್ಜರಿ ಸರ್ಜರಿ ನಡೆಯಬೇಕು ಎನ್ನುವ ಜನಾಗ್ರಹವು ಎಲ್ಲೆಡೆ ವ್ಯಕ್ತವಾಗುತ್ತಿದೆ.ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್) ಸಂಚಾಲಿತ ಬೋಧಕ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಜನ ಸಾಮಾನ್ಯರಿಗೆ ಲಭ್ಯವಾಗುತ್ತಿರುವ ವೈದ್ಯಕೀಯ ಸೇವೆಗಳು, ಗರ್ಭೀಣಿಯರಿಗೆ, ಬಾಣಂತಿಯರಿಗೆ, ಮಕ್ಕಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಪೌಷ್ಠಿಕ ಆಹಾರ ಸೇರಿದಂತೆ ವಿವಿಧ ಯೋಜನೆಗಳಡಿ ಲಭ್ಯವಾಗುತ್ತಿರುವ ಸವಲತ್ತುಗಳು ಯಾವ ರೀತಿಯಾಗಿ ಅನುಷ್ಠಾನಗೊಳ್ಳುತ್ತಿವೆ ಎನ್ನುವ ಸಂಗತಿಗಳ ಮೇಲೆ ಆತ್ಮಾವಲೋಕನ ಮಾಡಿಕೊಳ್ಳುವ ಜರೂರು ಎದುರಾಗಿದೆ.ಕಳೆದ ಒಂಬತ್ತು ತಿಂಗಳಲ್ಲಿ ಜಿಲ್ಲೆಯಲ್ಲಿ 19ಕ್ಕು ಹೆಚ್ಚು ಬಾಣಂತಿಯರು ಮೃತಪಟ್ಟಿದ್ದರೆ, ಎರಡೂವರೆ ತಿಂಗಳಲ್ಲೇ ಹತ್ತು ಜನರು ಸಾವನಪ್ಪಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದ್ದು, ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತಕ್ಷಣ ಆಯಾ ಸಂಬಂಧಿತ ಇಲಾಖೆಗಳಲ್ಲಿನ ಲೋಪದೋಷಗಳನ್ನು ನಿವಾರಿಸಲು ಜನಪ್ರತಿನಿಧಿಗಳು, ಮೇಲಾಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕಾಗಿದೆ.ರಿಮ್ಸ್ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನಸಾಮಾನ್ಯರಿಗೆ ಆರೋಗ್ಯ ಸೇವೆಯ ಸುಧಾರಣೆ ಜೊತೆಗೆ ಅಲ್ಲಿನ ವೈದ್ಯಾಧಿಕಾರಿಗಳು, ಸಿಬ್ಬಂದಿ ಬೇಜವಾಬ್ದಾರಿತನದ ಮೇಲೆ ಚಾಟಿ ಬೀಸಬೇಕಾಗಿದ್ದು, ಗರ್ಭೀಣಿಯರಿಗೆ ಹಾಗೂ ಬಾಣಂತಿಯರಿಗೆ ಪೌಷ್ಠಿಕಾಂಶ ಆಹಾರ ವಿತರಣೆಯಷ್ಟೇ ಅಲ್ಲದೇ ಅವರ ಆರೋಗ್ಯದ ಮೇಲೂ ನಿರಂತರ ನಿಗಾ ವಹಿಸುವ ಅಗತ್ಯವಿದೆ.ರಾಯಚೂರು ತಾಲೂಕಿನ ರಬ್ಬಣಕಲ್‌ ಬಾಣಂತಿ ಈಶ್ವರಿ ಸಾವಿನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾಧಿಕಾರಿ ನಿತೀಶ್‌ ಕೆ. ಅವರು ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಆರೋಗ್ಯ ಸೇವೆಗಳ ಕುರಿತು ಪರಿಶೀಲನೆ ನಡೆಸಿದರು.

ಅದೇ ರೀತಿ ಜಿಪಂ ಸಿಇಒ ಪಾಂಡ್ವೆ ರಾಹುಲ್ ತುಕಾರಾಂ ಅವರು ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿನ ಹಳ್ಳಿಗಳಿಗೆ ಭೇಟಿ ನೀಡಿ, ಮನೆ ಮನೆಗೆ ತೆರಳಿ ಗರ್ಭೀಯರಿಗೆ ಹಾಗೂ ಬಾಣಂತಿಯರಿಗೆ ಶಿಶು ಅಭಿವೃದ್ಧಿ ಯೋಜನೆಗಳಡಿ ಪೌಷ್ಟಿಕ ಆಹಾರ ವಿತರಣೆ - ರಕ್ತಹೀನತೆ ಹಾಗೂ ಅಪೌಷ್ಟಿಕತೆ ಹೋಗಲಾಡಿಸುವ ಬಗೆಗಿನ ಕ್ರಮಗಳ ಕುರತು ಪರಿಶೀಲನೆ ನಡೆಸುವುದರ ಜೊತೆಗೆ ಅಂಗನವಾಡಿ ಕೇಂದ್ರಗಳಿಂದ ಮಾತೃ ಪೂರ್ಣ ಯೋಜನೆಯಡಿ ದೊರೆಯುವ ಹಸಿರು ಕಾಳು, ಮೊಟ್ಟೆ, ಹಾಲು, ಶೇಂಗಾ ಚಿಕ್ಕಿ, ಹಕ್ಕಿ, ರವಾ, ಇನ್ನೂ ಮುಂತಾದ ಪೌಷ್ಟಿಕ ಆಹಾರ ದೊರೆಯುವ ಬಗ್ಗೆ ಖುದ್ದಾಗಿ ಸಿಇಒ ಅವರೇ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಬುರಾವ್ ಮಾತನಾಡಿ, ರಿಮ್ಸ್‌ ಬೋಧಕ ಆಸ್ಪತ್ರೆಯಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಗೌಣವಾಗಿಬಿಟ್ಟಿದೆ. ಎರಡು ತಿಂಗಳು ಅವಧಿಯಲ್ಲಿ ರಿಮ್ಸ್‌ನಲ್ಲಿ 10 ಜನ ಬಾಣಂತಿಯರು ಸೇರಿ ಸುಮಾರು 200ಕ್ಕೂ ಹೆಚ್ಚು ರೋಗಿಗಳ ಸಾವನಪ್ಪಿರುವ ಶಂಕೆಯಿದ್ದು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಇನ್ನು, ದಸಂಸ ಮುಖಂಡ ಹನುಮಂತಪ್ಪ ಕಾಕರಗಲ್ ಮಾತನಾಡಿ, ರಾಯಚೂರು ಜಿಲ್ಲೆ ದೇವದುರ್ಗ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯದಿಂದ ಬಾಣಂತಿ ಸಾವನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು, ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಎಂದರು.

Share this article