ಭಗವದ್ಗೀತೆ ಧಾರ್ಮಿಕ ಗ್ರಂಥವಷ್ಟೇ ಅಲ್ಲ, ಮಾರ್ಗದರ್ಶಕ ಶಕ್ತಿ

KannadaprabhaNewsNetwork | Published : Dec 19, 2024 12:30 AM

ಸಾರಾಂಶ

ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಪ್ರಮುಖ ಅಧ್ಯಾಯಗಳ ಸಾರವನ್ನು ತಿಳಿಸಿಕೊಟ್ಟು, ಪಾರಾಯಣದ ಮಹತ್ವವನ್ನು ವಿವರಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರುಭಗವದ್ಗೀತೆ ಕೇವಲ ಒಂದು ಧಾರ್ಮಿಕ ಗ್ರಂಥವಷ್ಟೇ ಅಲ್ಲ, ಅದು ಜೀವನದ ಮಾರ್ಗದರ್ಶಕ ಶಕ್ತಿ ಎಂದು ಶ್ರೀ ಅವಧೂತದತ್ತ ಪೀಠದ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಹೇಳಿದರು.ವಿಶ್ವೇಶ್ವರನಗರದ ಮಹರ್ಷಿ ಪಬ್ಲಿಕ್ ಶಾಲೆಯ ಆವರಣದಲ್ಲಿ ಕೃಷ್ಣನ ಕರೆ ಎಂಬ ವಿಶಿಷ್ಟ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಯುವ ಪೀಳಿಗೆಯ ಮೇಲೆ ಅತ್ಯಧಿಕ ಒತ್ತಡ ಮತ್ತು ಸಂಕಷ್ಟಗಳಿವೆ. ಇಂತಹ ಸಮಯದಲ್ಲಿ ಗೀತೆಯ ಪಾಠಗಳು ಜೀವನದ ಸವಾಲುಗಳಿಗೆ ಸಮರ್ಥವಾಗಿ ನಿಲ್ಲಲು ಸಹಾಯ ಮಾಡುತ್ತದೆ. ಭಗವದ್ಗೀತೆಯಲ್ಲಿ ಅರ್ಜುನನ ಮೂಲಕ ನಮಗೆ ಜೀವನದ ತತ್ವಶಾಸ್ತ್ರವನ್ನು ಶ್ರೀಕೃಷ್ಣನು ನೀಡಿರುವುದು, ಇದನ್ನು ಪ್ರತಿ ವಿದ್ಯಾರ್ಥಿ ತನ್ನ ಜೀವನದೊಳಗೆ ಅಳವಡಿಸಿಕೊಳ್ಳಬೇಕು. ಈ ಪವಿತ್ರ ಪಾರಾಯಣದಲ್ಲಿ 6 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿರುವುದು ಅತ್ಯಂತ ಸಂತೋಷದ ವಿಷಯ. ಇವರ ಉತ್ಸಾಹ ಮುಂದಿನ ಪೀಳಿಗೆಗೆ ಭಕ್ತಿಯ ಶಕ್ತಿ, ನೈತಿಕ ಮೌಲ್ಯಗಳು ಮತ್ತು ಆಧ್ಯಾತ್ಮಿಕ ಜಾಗೃತಿ ಮೂಡಿಸುತ್ತದೆ ಎಂದು ಅವರು ಹೇಳಿದರು.ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಪ್ರಮುಖ ಅಧ್ಯಾಯಗಳ ಸಾರವನ್ನು ತಿಳಿಸಿಕೊಟ್ಟು, ಪಾರಾಯಣದ ಮಹತ್ವವನ್ನು ವಿವರಿಸಿದರು.ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ ಮಾತನಾಡಿ, ಭಗವದ್ಗೀತೆಯಂತಹ ಮಹತ್ವದ ಗ್ರಂಥಗಳನ್ನು ಯುವ ಪೀಳಿಗೆಗೆ ಪರಿಚಯಿಸುವುದು ಅವಶ್ಯಕ. ಇದು ಜೀವನದ ತತ್ವಗಳು, ಸತ್ಯಾಸತ್ಯಗಳು, ಮತ್ತು ಧಾರ್ಮಿಕ ಶ್ರದ್ಧೆಯನ್ನು ತೋರಿಸುವಲ್ಲಿಯೂ ಪಾಠವಾಗುತ್ತದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳನ್ನು ನೀಡುವ ಅದ್ಭುತ ವೇದಿಕೆಯಾಗಿದೆ. ಮಹರ್ಷಿ ಪಬ್ಲಿಕ್ ಶಾಲೆ ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸಿರುವುದು ಇತರ ಶಾಲೆಗಳಿಗೆ ಮಾದರಿಯಾಗಿದೆ. ಭಗವದ್ಗೀತಾ ಪಾರಾಯಣದ ಮೂಲಕ ಮಕ್ಕಳು ತಮ್ಮ ಜೀವನದ ಗುರಿಯನ್ನು ಸರಳ ಮತ್ತು ಶ್ರದ್ಧೆಯಿಂದ ಅನುಸರಿಸುವ ಶಕ್ತಿಯನ್ನು ಪಡೆದಿದ್ದಾರೆ. ಈ ರೀತಿಯ ಕಾರ್ಯಕ್ರಮಗಳು ಮಕ್ಕಳ ಆಂತರಿಕ ಶಕ್ತಿಯನ್ನು ಪ್ರಬೋಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.6 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ ಪವಿತ್ರ ಪಾರಾಯಣಕಾರ್ಯಕ್ರಮದ ಮುಖ್ಯ ಆಕರ್ಷಣೆ 6 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಗವದ್ಗೀತಾ ಪಾರಾಯಣವಾಗಿತ್ತು. ಮಕ್ಕಳ ಸಮೂಹದ ಸಮೂಹಪಠನವು ಆಧ್ಯಾತ್ಮಿಕ ಚೈತನ್ಯವನ್ನು ಹರಡಿತು. ಪಿತೃಹೃದಯಗಳನ್ನು ತಟ್ಟಿದ ಈ ಪಾರಾಯಣದಿಂದ ಕಾರ್ಯಕ್ರಮಕ್ಕೆ ವಿಶಿಷ್ಟ ಸೌಂದರ್ಯವಿತ್ತು.ಮುಖ್ಯಅತಿಥಿಗಳು ಮತ್ತು ಇನ್ನಿತರ ಗಣ್ಯರು ಕಾರ್ಯಕ್ರಮವನ್ನು ಪ್ರಶಂಸಿಸಿ, ಭಗವದ್ಗೀತೆಯ ಪಾಠಗಳನ್ನು ಎಲ್ಲರಿಗೂ ಪರಿಚಯಿಸಲು ಶ್ರಮ ವಹಿಸಲು ಪ್ರೇರಣೆಯಾದರು. ಎಚ್.ಎಂ. ನಾಗರಾಜ ರಾವ್, ಮುರಳೀಧರ ಶರ್ಮಾ, ಆತ್ಮನಿರತಾಮೃತ ಚೈತನ್ಯ ಸ್ವಾಮೀಜಿ, ಮಹರ್ಷಿ ಪಬ್ಲಿಕ್ ಶಾಲೆಯ ಮುಖ್ಯಸ್ಥ ಭವಾನಿ ಶಂಕರ್ ಹಾಗೂ ತೇಜಸ್ ಶಂಕರ್, ಗಣೇಶರಾವ್ ಮೊದಲಾದವರು ಭಾಗವಹಿಸಿದ್ದರು.

Share this article