ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಸರ್ಕಾರಕ್ಕೆ ಪಕ್ಷ ಬೇದ ಮರೆತು ಶಾಸಕರು ಬೆಂಬಲ ನೀಡಿರುವುದ ನೋಡಿ ನನಗೆ ಆಶ್ಚರ್ಯವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು:
ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಸರ್ಕಾರಕ್ಕೆ ಪಕ್ಷ ಬೇದ ಮರೆತು ಶಾಸಕರು ಬೆಂಬಲ ನೀಡಿರುವುದ ನೋಡಿ ನನಗೆ ಆಶ್ಚರ್ಯವಾಗಿದೆ. ಇದು ನಮ್ಮ ಸರ್ಕಾರಕ್ಕೆ ಮಾತ್ರ ನೀಡಿರುವ ಬೆಂಬಲ ಅಲ್ಲ, ರಾಜ್ಯದ ಜನರ ಹಿತಕ್ಕಾಗಿ ನಿಮ್ಮ ಜೊತೆ ನಾವೂ ಇದ್ದೇವೆ ಎಂದು ನೀಡಿರುವ ಬೆಂಬಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಗೆಲುವು ಸಾಧಿಸಿದ ಕಾಂಗ್ರೆಸ್‌ನ ಐದು ಅಭ್ಯರ್ಥಿಗಳಾದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಮಳವಳ್ಳಿ ಶಿವಣ್ಣ, ಪಿ.ವಿ.ಮೋಹನ್, ವಿನಯ್ ಕಾರ್ತಿಕ್ ಮತ್ತು ತಿಪ್ಪಣ್ಣಪ್ಪ ಕಮಕನೂರು ಅವರನ್ನು ವಿಧಾನಸೌಧದಲ್ಲಿ ಅಭಿನಂದಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಒಗ್ಗಟ್ಟಾಗಿ ಬೆಂಬಲಿಸಿದ್ದಾರೆ:
ಕಾಂಗ್ರೆಸ್‌ನ ನಮ್ಮ ಹೊಸ ಸರ್ಕಾರ ಬಂದ ಮೇಲೆ ವಿಧಾನ ಪರಿಷತ್ ಚುನಾವಣೆ ಎದುರಿಸಬೇಕಾದ ಅನಿವಾರ್ಯತೆ ಎದುರಾಯಿತು. ಚುನಾವಣೆಯಲ್ಲಿ ನಮ್ಮ ಪಕ್ಷದ ಎಲ್ಲ ಶಾಸಕರು ಒಗ್ಗಟ್ಟಾಗಿ ಬೆಂಬಲಿಸಿದ್ದಾರೆ. ಜೊತೆಗೆ ಇಬ್ಬರು ಪಕ್ಷೇತರ ಶಾಸಕರು, ರೈತರ ಸಂಘದ ಶಾಸಕರು ನಮ್ಮ ಪರ ಇದ್ದರು. ಜೊತೆಗೆ ಪಕ್ಷಾತೀತವಾಗಿ ಇನ್ನೂ ಅನೇಕ ಶಾಸಕರು ನಮಗೆ ಬೆಂಬಲ ನೀಡಿದ್ದಾರೆ. ಇದು ನಮ್ಮ ಸರ್ಕಾರಕ್ಕೆ ನೀಡಿದ ಬೆಂಬಲ ಮಾತ್ರವಲ್ಲ. ಜನರ ಹಿತಕ್ಕಾಗಿ ನಮ್ಮ ಸರ್ಕಾರ ಯಾವ ಹೆಜ್ಜೆಯನ್ನಿಟ್ಟು ಮುಂದುವರೆಯುತ್ತಿದ್ದೇವೆಯೋ ಅದು ಸರಿಯಾಗಿದೆ, ಅದಕ್ಕೆ ನಾವೂ ಜೊತೆಗಿದ್ದೇವೆ ಎಂದು ಬೆಂಬಲ ನೀಡಿದ್ದಾರೆ. ಎಲ್ಲರಿಗೂ ಧನ್ಯವಾದ, ಎಲ್ಲರ ಭಾವನೆ ಅರಿತುಕೊಂಡು ಜನರ ಸೇವೆಯಲ್ಲಿ ಮುಂದುವರೆಯುತ್ತೇವೆ ಎಂದರು.
ನಮ್ಮ ಪಕ್ಷದ ಶಾಸಕರ ಒಂದು ಮತವೂ ತಿರಸ್ಕೃತವಾಗಬಾರದು ಎಂದು ತರಬೇತಿ ನೀಡಲಾಗಿತ್ತು. ಇದಕ್ಕೆ ಸಹಕರಿಸಿದ ಎಲ್ಲಾ ಪದಾಧಿಕಾರಿಗಳಿಗೆ ವಿಶೇಷ ಧನ್ಯವಾದ ತಿಳಿಸುತ್ತೇನೆ. ಇದಕ್ಕೆ ದುಡಿದಂಥ ಪಕ್ಷದ ಎಲ್ಲಾ ಶಾಸಕರು, ನಾಯಕರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಹಾಗೂ ಅವರ ಜೊತೆ ಬಂದಿದ್ದ ಇತರೆ ಕಾರ್ಯದರ್ಶಿಗಳನ್ನು ನಾನು ಅಭಿನಂದಿಸುತ್ತೇನೆ. ಮಾಧ್ಯಮಗಳೂ ಸರ್ಕಾರಕ್ಕೆ ಬೆಂಬಲವಾಗಿ ಸಲಹೆ ನೀಡಿದ್ದೀರಿ. ನಿಮಗೂ ಧನ್ಯವಾದ ತಿಳಿಸುತ್ತೇನೆ ಎಂದರು.
ಅನ್ಯ ಪಕ್ಷದವರು ಯಾರು ಮತ ಹಾಕಿದ್ದಾರೋ ಗೊತ್ತಿಲ್ಲ:
ಅಡ್ಡಮತದಾನಕ್ಕಾಗಿ ಕುದುರೆ ವ್ಯಾಪಾರ ನಡೆದಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದ ಮುಖ್ಯಮಂತ್ರಿ ಅವರು, ಇಲ್ಲಿ ನಡೆದಿರುವುದು ಗುಪ್ತ ಮತದಾನ. ಯಾರು ಮತ ಹಾಕಿದ್ದಾರೋ ನನಗೆ ಗೊತ್ತಿಲ್ಲ. ಬಿಜೆಪಿ, ಜೆಡಿಎಸ್ ಸೇರಿ ಯಾವುದೇ ಪಕ್ಷದ ಆಂತರಿಕ ವಿಚಾರ ನನಗೆ ಗೊತ್ತಿಲ್ಲ. ನಮ್ಮ ಮೇಲಿನ ಆತ್ಮವಿಶ್ವಾಸದಿಂದ ಮತ ಹಾಕಿರಬಹುದು. ನಾನು ಯಾರ ಬಳಿಯೂ ಮಾತನಾಡಲು ಹೋಗಿಲ್ಲ. ಮತ ಕೇಳಿಲ್ಲ. ಹೈಕಮಾಂಡ್ ಸೂಚನೆಯಂತೆ ನಮ್ಮ ಪಕ್ಷದಿಂದ ಐವರು ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ನಮ್ಮ ಪಕ್ಷದ ಶಾಸಕರ ಸಂಖ್ಯಾಬಲ ಎಷ್ಟಿತ್ತು ಎಂಬುದು ಮಾಧ್ಯಮಗಳಿಗೆ ತಿಳಿದಿತ್ತು. ಐದೂ ಜನರು ಗೆಲ್ಲುವ ವಿಶ್ವಾಸ ನಮಗಿತ್ತು. ಅದರಂತೆ ಗೆದ್ದಿದ್ದಾರೆ ಎಂದರು.
ಮುಖ್ಯಮಂತ್ರಿ ಅವರು ನಮ್ಮ ಸಹಕಾರ ಕೋರಿದ್ದಾರೆ ಎಂದು ಬಿಜೆಪಿಯ ಉಚ್ಚಾಟಿತ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ, ಅವರನ್ನು ಉಚ್ಚಾಟನೆ ಮಾಡಿ ಕಳುಹಿಸಿದ್ದಾರಲ್ಲವೇ? ಅವರನ್ನು ದಾರಿ ಮಧ್ಯೆ ಬಿಟ್ಟು ಹೋಗಿದ್ದರು. ಪಾಪ ಅವರನ್ನು ನಡು ದಾರಿಯಲ್ಲೇ ಬಿಡಲಾಗುತ್ತದೆಯೇ? ದಾರಿ ಇಲ್ಲದವರಿಗೆ ದಾರಿ ತೋರಿಸಿ ಬನ್ನಿ ಎಂಬ ಕೆಲಸ ಮಾಡಿದ್ದೇವೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.