ನಾಗರಾಜ್ ನ್ಯಾಮತಿ
ಲೋಕಸಭಾ ಚುನಾವಣೆ ಜೊತೆಗೇ, ಸುರಪುರ ಮತಕ್ಷೇತ್ರದ ಉಪ ಚುನಾವಣೆ ನಡೆವ ಸಾಧ್ಯತೆ ಬೆನ್ನಲ್ಲೇ, ಕಳೆದ 9 ತಿಂಗಳ ಅವಧಿಯಲ್ಲಿ ಸುಮಾರು 5 ಸಾವಿರ ಮತದಾರರು ಸೇರ್ಪಡೆಯಾಗಿರುವುದು ವಿಶೇಷವಾಗಿ ಕಂಡು ಬಂದಿದೆ.
ಸುರಪುರ ಕ್ಷೇತ್ರದಲ್ಲಿ ತಾಲೂಕಿನಲ್ಲಿ 23 ಗ್ರಾಪಂ 104 ಗ್ರಾಮಗಳು, ಹುಣಸಗಿ ತಾಲೂಕಿಗೆ 18 ಗ್ರಾಮ ಪಂಚಾಯಿತಿಗಳಿದ್ದು, 82 ಗ್ರಾಮಗಳು ಒಳಪಡುತ್ತಿವೆ. 2011ರ ಜನಗಣತಿಯನ್ನು ಆಧರಿಸಿ 2023ರ ಅಂದಾಜಿನ ಜನಗಣಿತಿಯ ಪ್ರಕಾರ 4.04ಲಕ್ಷ ಜನಸಂಖ್ಯೆ ಇದೆ. 2023ರ ವಿಧಾನಸಭಾ ಚುನಾವಣೆಯಲ್ಲಿ 2,75,419 ಮತದಾರರಿದ್ದರು. ಈಗ 2024ರ ಫೆಬ್ರವರಿ ಮಾಹಿತಿ ಪ್ರಕಾರ ಪುರುಷ-1,41,481, ಮಹಿಳೆ-1,39,607, ತೃತೀಯ ಲಿಂಗ-28 ಒಟ್ಟು 2,81,116 ಮತದಾರರಿದ್ದಾರೆ. 9 ತಿಂಗಳ ಅಂತರದಲ್ಲಿ 5,697 ಮತದಾರರು ಹೆಚ್ಚಾಗಿದ್ದಾರೆ.ಸುರಪುರ ಮತಕ್ಷೇತ್ರದ ಹಾಲಿ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರ ಹಠಾತ್ ನಿಧನದಿಂದ ತೆರವಾದ ವಿಧಾನಸಭಾ ಕ್ಷೇತ್ರಕ್ಕೆ ಲೋಕಸಭೆ ಚುನಾವಣೆ ಜೊತೆಗೇ ಉಪ ಚುನಾವಣೆ ಜರುಗುವುದು ಬಹುತೇಕ ಸ್ಪಷ್ಟವಾದಂತಿದೆ.
ಸುರಪುರ ಮತಕ್ಷೇತ್ರದಲ್ಲಿ 317 ಮತಗಟ್ಟೆ ಗುರುತಿಸಲಾಗಿದೆ. 102 ಪೋಲಿಂಗ್ ಬೂತ್‌ಗಳಲ್ಲಿ 1000ಕ್ಕಿಂತ ಹೆಚ್ಚಿರುವ ಮತದಾರರಿದ್ದಾರೆ. 215 ಮತಗಟ್ಟೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಮತದಾರರಿದ್ದಾರೆ.
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಹಸೀಲ್ದಾರ್, ಸೇರಿದಂತೆ ವಿವಿಧ ಅಧಿಕಾರಿಗಳು ಇತ್ತೀಚೆಗೆ ನಗರದ ಶ್ರೀ ಪ್ರಭು ಕಾಲೇಜಿನಲ್ಲಿರುವ ಭದ್ರತಾ ಕೊಠಡಿ ಪರಿಶೀಲಿಸಿದ್ದಾರೆ.
ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿ ಡಾ. ಸುಶೀಲಾ ಅವರು ವಿವಿಧ ಮತಗಟ್ಟೆಗಳಿಗೆ ತೆರಳಿ ಮೂಲಸೌಕರ್ಯ ಪರಿಶೀಲನೆ ನಡೆಸಿದರು. ತಾಲೂಕಿನ ಪೇಠಾ ಅಮ್ಮಾಪುರ, ಸುರಪುರ ನಗರದ ಆನಂದ ಮಹಾವಿದ್ಯಾಲಯ, ಕಬಾಡಗೇರಾ ಸೇರಿ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮೂಲಸೌಲಭ್ಯ ಪರಿಶೀಲಿಸಿದರು.
ತಹಸೀಲ್ದಾರ್ ವಿಜಯಕುಮಾರ, ಗ್ರಾಮ ಲೆಕ್ಕಿಗ ಪ್ರದೀಪ, ಗಿರೀಶ, ವಿಜಯಸಿಂಗ್, ಬಸವರಾಜ ಬಿರಾದಾರ, ಮತಗಟ್ಟೆ ಅಧಿಕಾರಿ ಸೇರಿದಂತೆ ಇತರರಿದ್ದರು.
ವಿಜಯಕುಮಾರ, ತಹಸೀಲ್ದಾರ್, ಸುರಪುರ.