ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಸ್ನಾನಘಟ್ಟದ ಬಳಿ ಸಮಿತಿ ಹಿರಿಯ ಮುಖಂಡ ಕೆಎಸ್.ನಂಜುಂಡೇಗೌಡ ಹಾಗೂ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ರೈತ ಕಾರ್ಯಕರ್ತರು ಕಾವೇರಿ ನದಿಗಿಳಿದು ಪ್ರಾಧಿಕಾರಗಳು ಹಾಗೂ ರಾಜ್ಯ ಸರ್ಕಾರ, ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ಶಾಸಕರ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ನಂಜುಂಡೇಗೌಡ ಮಾತನಾಡಿ, ರಾಜ್ಯ ಸರ್ಕಾರ ರಾತ್ರೋರಾತ್ರಿ ಅಣೆಕಟ್ಟೆಯ 10 ಗೇಟ್‌ಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿ ಬಿಟ್ಟಿರುವುದು ದುರಂತ. ಆದರೆ, ಸರ್ಕಾರ ಜಿಲ್ಲಾಧಿಕಾರಿಗಳ ಮೂಲಕ ನೀರು ಬಿಟ್ಟಿಲ್ಲ ಎಂದು ಹೇಳಿಸುತ್ತಿದ್ದಾರೆ. ಇಷ್ಟರ ಮಟ್ಟಿಗೆ ಸುಳ್ಳು ಹೇಳುತ್ತಿರುವ ಸರ್ಕಾರ ನಮ್ಮನ್ನು ಹೇಗೆ ರಕ್ಷಣೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.ತಮಿಳುನಾಡಿನಲ್ಲಿ ಬೆಳೆ ಸಂರಕ್ಷಣೆಗೆ ಬಹಳಷ್ಟು ನೀರಿದ್ದು, ಜೊತೆಗೆ ಅವರಿಗೆ ವರ್ಷದಲ್ಲಿ ಮೂರು ಮಳೆಗಾಲವಿದೆ. ಇನ್ನೂ ಎರಡು ಮಳೆಗಾಲವಿದೆ ಎಂಬುದನ್ನು ಪ್ರಾಧಿಕಾರಗಳು ಅಥವಾ ಸುಪ್ರೀಂ ಕೋರ್ಟ್‌ಗೆ ಮನದಟ್ಟು ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಬಿ.ಸಿ ಕೃಷ್ಣೇಗೌಡ ಮಾತನಾಡಿ, ನೀರು ಬಿಡಲ್ಲ ಎಂದು ನಾಟಕವಾಡಿ ಇದೀಗ ಕದ್ದುಮುಚ್ಚಿ ರಾತ್ರಿ 8 ಗಂಟೆ ಸಮಯದಲ್ಲಿ ಅಣೆಕಟ್ಟೆಯ ಸುಮರು10 ಗೇಟ್‌ಗಳ ಮೂಲಕ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ. ಇದರಿಂದ ಕೊಟ್ಟ ಮಾತಿನಂತೆ ನಡೆದುಕೊಳ್ಳದ ಸಿಎಂ ಹಾಗೂ ಜಲಸಂಪನ್ಮೂಲ ಸಚಿವರು ತಲೆತಗ್ಗಿಸಿದಂತಾಗಿದೆ ಎಂದು ಕಿಡಿಕಾರಿದರು.