ಬಿಜೆಪಿಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಮೀಕ್ಷೆ: ಕಾಗೇರಿ

KannadaprabhaNewsNetwork |  
Published : Jan 05, 2025, 01:30 AM IST
ವಿಶ್ವೇಶ್ವರ ಹೆಗಡೆ ಸುದ್ದಿಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜನವಿರೋಧಿಯಾಗಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಅಭಿವೃದ್ಧಿ ಎನ್ನುವುದು ಶೂನ್ಯವಾಗಿದೆ. ಸಿದ್ದರಾಮಯ್ಯ ತಾವು ಎಷ್ಟು ದಿನ ಆಡಳಿತ ನಡೆಸುತ್ತೇನೆ ಎನ್ನುವ ಚಿಂತನೆಯಲ್ಲಿದ್ದರೆ ಡಿ.ಕೆ. ಶಿವಕುಮಾರ ಅವರಿಗೆ ಆಡಳಿತ ನಡೆಸಬೇಕೋ ಬೇಡವೋ ಎನ್ನುವಂತಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಕಾರವಾರ: ರಾಜ್ಯಾದ್ಯಂತ ಗರ್ಭಿಣಿಯರ, ಬಾಣಂತಿಯರ, ಶಿಶುಗಳ ಮರಣ ಹೆಚ್ಚಾಗಿದೆ. ಆದರೆ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಹೀಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಿತಿಗತಿ ಸಮೀಕ್ಷೆ ನಡೆಸಲು ಕೆಲವೇ ದಿನದಲ್ಲಿ ಬಿಜೆಪಿ ಹೋಗುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಆಸ್ಪತ್ರೆಗಳ ಪರಿಸ್ಥಿತಿ ಅವಲೋಕಿಸಿ ರಾಜ್ಯ ಸರ್ಕಾರಕ್ಕೆ ವರದಿ ನೀಡಲಿದೆ ಎಂದ ಅವರು, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜನವಿರೋಧಿಯಾಗಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಅಭಿವೃದ್ಧಿ ಎನ್ನುವುದು ಶೂನ್ಯವಾಗಿದೆ. ಸಿದ್ದರಾಮಯ್ಯ ತಾವು ಎಷ್ಟು ದಿನ ಆಡಳಿತ ನಡೆಸುತ್ತೇನೆ ಎನ್ನುವ ಚಿಂತನೆಯಲ್ಲಿದ್ದರೆ ಡಿ.ಕೆ. ಶಿವಕುಮಾರ ಅವರಿಗೆ ಆಡಳಿತ ನಡೆಸಬೇಕೋ ಬೇಡವೋ ಎನ್ನುವಂತಿದ್ದಾರೆ. ಗುತ್ತಿಗೆದಾರರು, ಅಧಿಕಾರಿಗಳು ಸಚಿವರ, ಶಾಸಕರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಹಗರಣಗಳ ಮೇಲೆ ಹಗರಣ ನಡೆಯುತ್ತಿದೆ. ಭ್ರಷ್ಟಾಚಾರ ಮಿತಿ ಮೀರಿದೆ. ಬಸ್ ಪ್ರಯಾಣ ದರ, ವಿದ್ಯುತ್ ದರ ಏರಿಕೆ, ಅಬಕಾರಿ ಸುಂಕ, ವಾಹನ ಮೇಲಿನ ತೆರಿಗೆ ಹೆಚ್ಚಳ ಮಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಇದಕ್ಕೆ ಸಿ.ಟಿ. ರವಿ ಪ್ರಕರಣವೇ ಉದಾಹರಣೆಯಾಗಿದೆ. ಕಾನೂನಾತ್ಮಕವಾಗಿ ಕ್ರಮವಹಿಸುವ ಬದಲು ಗುಂಡಾಗಿರಿ ಮಾಡುವುದು ಅಕ್ಷಮ್ಯ ಅಪರಾಧವಾಗಿದೆ. ಅಧಿಕಾರಿಗಳು ಕಾರ್ಯಾಂಗದ ಜವಾಬ್ದಾರಿ ಮರೆತು ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಈ ಸರ್ಕಾರ ಬಂದಿರುವುದು ರಾಜ್ಯದ ಜನರಿಗೆ ಶಾಪವಾಗಿದೆ ಎಂದರು.

ಬಿಜೆಪಿ ಜಿಲ್ಲೆಯ ವಿಭಜನೆ ಬಗ್ಗೆ ಯಾವ ನಿರ್ಧಾರ ಮಾಡಿಲ್ಲ. ಪಕ್ಷಕ್ಕೂ ಜಿಲ್ಲೆ ವಿಭಜನೆಗೂ ಯಾವ ಸಂಬಂಧವೂ ಇಲ್ಲ. ಜಿಲ್ಲಾ ವಿಭಜನೆ ಎನ್ನುವುದು ಆಡಳಿತ್ಮಾಕವಾಗಿ ಸರ್ಕಾರ ಜನಾಭಿಪ್ರಾಯ ಸಂಗ್ರಹಿಸಿ ನಿರ್ಧಾರ ಮಾಡುವುದಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಹೇಳಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ನಗರಸಭಾಧ್ಯಕ್ಷ ರವಿರಾಜ ಅಂಕೋಲೇಕರ, ನಾಗರಾಜ ನಾಯಕ, ಸುಭಾಷ್ ಗುನಗಿ, ನಾಗೇಶ ಕುರುಡೇಕರ, ಇದ್ದರು.ಕೇಂದ್ರ ಯೋಜನೆಗಳ ಮಾಹಿತಿ: ಕೆಲವು ಯೋಜನೆಗಳ ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಕೆಲವು ಯೋಜನೆಗಳ ಅನುಷ್ಠಾನ ಸರಿಯಾಗಿಲ್ಲ. ಮುಂದಿನ ದಿನಗಳಲ್ಲಿ ಕೇಂದ್ರದ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಪ್ರಯತ್ನ ಮಾಡಬೇಕು. ಗ್ರಾಪಂ ಮಟ್ಟದಲ್ಲಿ ಜಾಗೃತಿ ಕೆಲಸ ಹಾಗೂ ಫಲಾನುಭವಿಗಳನ್ನು ಗುರುತಿಸುವ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಜಿಲ್ಲೆಯ ರೈತರಿಗೆ ಹವಾಮಾನ ಆಧಾರಿತ ಫಸಲ್ ಬಿಮಾ ಯೋಜನೆ ಸಿಗಲಿಲ್ಲ ಎನ್ನುವ ದೂರು ಬಂದಿತ್ತು. ಈ ಬಗ್ಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಹವಾಮಾನ ಅಧಿಕಾರಿಗಳೊಂದಿಗೆ ಮಾತಾಡಿದ್ದೇವೆ. ಈ ತಿಂಗಳ ಒಳಗೆ ಜಿಲ್ಲೆಯ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಸಿಗಲಿದೆ ಎಂದು ಭರವಸೆ ನೀಡಿದರು.

ಕೇಂದ್ರ ಸರ್ಕಾರದ ಸೂರ್ಯ ಘರ್ ಯೋಜನೆಯ ಲಾಭವನ್ನು ಜನರು ಪಡೆಯಬೇಕು. ಕೇವಲ ೨೫೦ ಅರ್ಜಿ ಮಾತ್ರ ಬಂದಿದೆ. ಈ ಯೋಜನೆಯಿಂದ ಜನರಿಗೆ ಸಾಕಷ್ಟು ಲಾಭವಿದೆ ಎಂದರು.

ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದಂತೆ ಸಭೆ ನಡೆಸಲಾಗಿದೆ. ಜಮೀನು ಹಸ್ತಾಂತರ, ಪರಿಹಾರ ಬಾಕಿ ಒಳಗೊಂಡು ಕೆಲವು ಆಡಳಿತಾತ್ಮಕ ಕಾರಣದಿಂದ ಕಾಮಗಾರಿ ವಿಳಂಬವಾಗುತ್ತಿದೆ. ಇನ್ನು ಕೆಲವು ಕಡೆ ಸಾರ್ವಜನಿಕರು ಫ್ಲೈಒವರ್, ಅಂಡರ್‌ಪಾಸ್‌ನಂತಹ ಬೇಡಿಕೆ ಇಟ್ಟಿರುವುದೂ ಕಾರಣವಾಗಿದೆ. ಎಲ್ಲರೂ ಸಹಕಾರ ನೀಡಿದರೆ ಸಮಸ್ಯೆಗಳನ್ನು ಬಗೆಹರಿಸಿ ಕಾಮಗಾರಿ ಮಾಡಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಿಸಿದರು. ಡಿಸಿ ಕೆ. ಲಕ್ಷ್ಮೀಪ್ರಿಯಾ, ಸಿಇಒ ಈಶ್ವರಕುಮಾರ ಕಾಂದೂ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ