ಸಾಮಾಜಿಕ ನ್ಯಾಯ, ಸರ್ಕಾರದ ಕಾರ್ಯಕ್ರಮ ರೂಪಿಸಲು ಸಮೀಕ್ಷೆ ಸಹಕಾರಿ: ಶಾಸಕ ಎ.ಎಸ್.ಪೊನ್ನಣ್ಣ

KannadaprabhaNewsNetwork |  
Published : Sep 30, 2025, 12:01 AM IST
ಚಿತ್ರ : 29ಎಂಡಿಕೆ3 : ಸುದ್ದಿಗೋಷ್ಠಿಯಲ್ಲಿ ಶಾಸಕ ಎ.ಎಸ್. ಪೊನ್ನಣ್ಣ  ಮಾತನಾಡಿದರು.  | Kannada Prabha

ಸಾರಾಂಶ

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಸಂಬಂಧಿಸಿದಂತೆ ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದು ರಾಜಕೀಯ ಪ್ರೇರಿತವಾಗಿದೆ ಎಂದು ಶಾಸಕರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸರ್ಕಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ, ಮೀಸಲಾತಿ ಹಾಗೂ ಸರ್ಕಾರದ ಕಾರ್ಯಕ್ರಮ ರೂಪಿಸಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ಈ ಸಮೀಕ್ಷೆ ಬಗ್ಗೆ ಅಪ ಪ್ರಚಾರ ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಯಾವುದೇ ಅಪಪ್ರಚಾರಕ್ಕೆ ಜನರು ಒಳಗಾಗದೆ ಸಮೀಕ್ಷೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮನವಿ ಮಾಡಿದ್ದಾರೆ.

ನಗರದ ಸುದರ್ಶನ ಅತಿಥಿ ಗೃಹದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂಬಂಧಿಸಿದಂತೆ ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದು, ರಾಜಕೀಯ ಪ್ರೇರಿತವಾಗಿದೆ. ಸಂವಿಧಾನ ಅರ್ಥ ಮಾಡಿಕೊಳ್ಳುವವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸುವುದಿಲ್ಲ. ಸಂವಿಧಾನದ ಬಗ್ಗೆ ಗೌರವ ಇಲ್ಲದವರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಡಿ ಎಂದು ಬಹಿರಂಗವಾಗಿ ಹೇಳುತ್ತಾರೆ ಎಂದು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.

ಕೇಂದ್ರದವರು ಜಾತಿವಾರು ಜನಗಣತಿ ಮಾಡಲು ಮುಂದಾಗುತ್ತಿದ್ದಾರೆ. ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವುದು ಜಾತಿ ಸಮೀಕ್ಷೆಯಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಹಿಂದುಳಿದ ವರ್ಗಗಳನ್ನು ಗುರುತಿಸುವುದಾಗಿದೆ. ಯಾರೂ ಹಿಂದುಳಿದಿದ್ದಾರೆ ಅವರನ್ನು ಪತ್ತೆಹಚ್ಚಿ ಕಾನೂನು ಜಾರಿಮಾಡಿ ಕಾರ್ಯಕ್ರಮ ರೂಪಿಸುವುದು ಸರ್ಕಾರದ ಆಶಯವಾಗಿದೆ ಎಂದು ಪೊನ್ನಣ್ಣ ಹೇಳಿದರು.

ಮಳೆ ನಂತರ ಎಲ್ಲಾ ರಸ್ತೆ ದುರಸ್ತಿ ಕಾರ್ಯ:

ಮಡಿಕೇರಿ ಭಾಗಮಂಡಲ, ಭಾಗಮಂಡಲ-ನಾಪೋಕ್ಲು-ವಿರಾಜಪೇಟೆ ರಸ್ತೆ ಸೇರಿದಂತೆ ಹಲವು ರಸ್ತೆಯು ಮಳೆಗೆ ಹಾನಿಯಾಗಿದ್ದು, ಮಳೆ ನಿಂತ ನಂತರ ಸರಿಪಡಿಸಲಾಗುವುದು. ಹೆಚ್ಚಿನ ಮಳೆಯಿಂದಾಗಿ ಹಾಗೂ ಇನ್ನೂ ಸಹ ಮಳೆ ನಿಲ್ಲದಿರುವುದರಿಂದ ರಸ್ತೆ ಸರಿಪಡಿಸಲು ಸಾಧ್ಯವಾಗಿಲ್ಲ. ಮಳೆ ನಿಂತ ನಂತರ ಎಲ್ಲಾ ರಸ್ತೆಗಳನ್ನು ಸರಿಪಡಿಸಲಾಗುವುದು ಎಂದು ಎ.ಎಸ್.ಪೊನ್ನಣ್ಣ ತಿಳಿಸಿದರು.

ಮಳೆಗಾಲದಲ್ಲಿಯೂ ಸಹ ಗುಂಡಿ ಮುಚ್ಚುವ ತಂತ್ರಜ್ಞಾನ ಇದ್ದಲ್ಲಿ ಗುಂಡಿ ಮುಚ್ಚಲಾಗುವುದು ಎಂದು ಶಾಸಕರು ತಿಳಿಸಿದರು.

ಜನರ ಟೀಕೆಗೆ ಸ್ಪಂದಿಸುವುದು ನಮ್ಮ ಧರ್ಮವಾಗಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ 40 ಕೋಟಿ ರು. ವೆಚ್ಚದಲ್ಲಿ ರಸ್ತೆ ಸರಿಪಡಿಸಲು ಟೆಂಡರ್ ಆಗಿದ್ದು, ಮುಖ್ಯಮಂತ್ರಿ ಅವರ ವಿಶೇಷ ಅನುದಾನದಡಿ 20 ಕೋಟಿ ರು. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕರು ಹೇಳಿದರು.

ಜವಾಬ್ದಾರಿಯಿಂದ ನಡೆದುಕೊಳ್ಳಬೇಕು: ಪ್ರಜಾಪ್ರಭುತ್ವದಲ್ಲಿ ಪ್ರಬಲ ವಿರೋಧ ಪಕ್ಷ ಇರಬೇಕು. ಜೊತೆಗೆ ಪ್ರಶ್ನೆ ಮಾಡಬೇಕು. ಹಾಗೆಯೇ ಪ್ರತಿ ಪಕ್ಷದವರು ಸಹ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ಹೇಳಿದರು.ಸರ್ಕಾರದ 2013 ರಿಂದ 2018 ರವರೆಗಿನ ಅವಧಿ ಸುವರ್ಣ ಯುಗವಾಗಿದೆ. 131 ಕಿಲೋ ಮೀಟರ್ ರಸ್ತೆ ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು, ಹೆಚ್ಚಿನ ಮಳೆಯಾಗುವುದರಿಂದ 3-4 ವರ್ಷಕ್ಕೆ ರಸ್ತೆಗಳು ಗುಂಡಿ ಬೀಳುತ್ತವೆ. ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಅವಕಾಶ ಕಡಿಮೆ ಇದೆ ಎಂದು ಹೇಳಿದರು. ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರೆಗೆ 2 ಕೋಟಿ ರು.. ಮೀಸಲು. ದೇವಸ್ಥಾನ, ಮಸೀದಿ, ಚರ್ಚ್ಗಳ ಅಭಿವೃದ್ಧಿಗೆ ಕ್ರಮ, ಮದೆನಾಡು ಗ್ರಾಮದಲ್ಲಿ 8 ಎಕರೆ ಭೂಮಿಯಲ್ಲಿ ಕೊಡಗು ಗೌಡ ಸಮಾಜ ಮಡಿಕೇರಿ ಇವರಿಗೆ ‘ಸಾಂಸ್ಕೃತಿಕ ಭವನ’ ನಿರ್ಮಾಣಕ್ಕೆ ಜಾಗ ನಿಗದಿ ಮಾಡಲಾಗಿದೆ ಎಂದು ಪೊನ್ನಣ್ಣ ಅವರು ವಿವರಿಸಿದರು. ಆರೋಗ್ಯಕರ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ 2000 ಹಕ್ಕುಪತ್ರ ನೀಡಲು ಉದ್ದೇಶಿಸಲಾಗಿದೆ. ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಚರ್ಚೆ ಇರಬೇಕು. ಬಡವರು ಮುಂದೆ ಬರಬೇಕು. ಸಮಗ್ರವಾದ ಅಭಿವೃದ್ಧಿ ಕಲ್ಪನೆ, ಜನತೆ ಸೇವೆಗೆ ಅವಕಾಶ ಸಿಕ್ಕಿದೆ. ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಎ.ಎಸ್.ಪೊನ್ನಣ್ಣ ಅವರು ಹೇಳಿದರು.ಅಖಿಲ ಕೊಡವ ಸಮಾಜ, ಫೆಡರೇಷನ್ ಕೊಡವ ಸಂಘಟನೆ ಸೇರಿದಂತೆ ಪ್ರಮುಖರು ತೀರ್ಮಾನ ಮಾಡಲಿದ್ದಾರೆ ಎಂದು ಎ..ಎಸ್.ಪೊನ್ನಣ್ಣ ಅವರು ಪ್ರತಿಕ್ರಿಯಿಸಿದರು. ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ, ಪ್ರಮುಖರಾದ ಕೊಲ್ಯದ ಗಿರೀಶ್, ಟಾಟು ಮೊಣ್ಣಪ್ಪ, ತೆನ್ನಿರಾ ಮೈನಾ, ಪಟ್ಟಡ ರಂಜಿ ಪೂಣಚ್ಚ, ಹಂಸ, ಇಸ್ಮಾಯಿಲ್, ಸೂರಜ್ ಇತರರು ಇದ್ದರು.

ಬಿಜೆಪಿ ಪ್ರಕಟಣೆ ತಿರಸ್ಕರಿಸಿ!

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಕೊಡಗು ಬಿಜೆಪಿ ನೀಡಿರುವ ಪ್ರಕಟಣೆಯನ್ನು ಜನರು ತಿರಸ್ಕರಿಸಬೇಕು. ಧರ್ಮದ ಕಾಲಂ ನಲ್ಲಿ ಈ ರೀತಿಯೇ ನಮೂದಿಸಿ ಎಂದು ಬಿಜೆಪಿ ಪ್ರಚಾರ ಮಾಡಿರುವುದು ಸಂವಿಧಾನಕ್ಕೆ ಮಾಡಿರುವ ಅಪಚಾರ. ಆ ಮೂಲಕ ಕೊಡವ ಜನಾಂಗಕ್ಕೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಧರ್ಮ ಹಾಗೂ ಜಾತಿಗಳ ಬಗ್ಗೆ ಆಯಾ ಸಮುದಾಯದವರು, ಮುಖಂಡರು, ಸಮಾಜಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದರೆ ಬಿಜೆಪಿ ಅದರಲ್ಲೂ ರಾಜಕೀಯ ಮಾಡಿ ಮುಗ್ದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಪೊನ್ನಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಕ್ಷಮೆಯಾಚಿಸಬೇಕು!

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದ ತನಿಖಾ ವರದಿಗೆ ಬಿ ರಿಪೋರ್ಟ್ ನೀಡಲಾಗಿದೆ. ಅಂದು ಪ್ರತಿಭಟನೆ ಮಾಡಿದ ಬಿಜೆಪಿ ಈಗ ಏನು ಮಾಡುತ್ತಿದೆ. ವಿನಯ್ ಸಾವಿಗೆ ನಾವು ಕಾರಣ ಎಂದು ಅಪಪ್ರಚಾರ ಮಾಡಿ ಸಾವಿನಲ್ಲೂ ರಾಜಕೀಯ ಮಾಡಿದ ಬಿಜೆಪಿಯವರು ಕ್ಷಮೆಯಾಚಿಸಬೇಕೆಂದು ಶಾಸಕ ಎ.ಎಸ್. ಪೊನ್ನಣ್ಣ ಒತ್ತಾಯಿಸಿದರು.

ಪ್ರಕರಣದಲ್ಲಿ ಎ.ಎಸ್‌ ಪೊನ್ನಣ್ಣ , ಡಾ.ಮಂತರ್‌ ಗೌಡ ಹಾಗೂ ತೆನ್ನೀರಾ ಮೈನಾ ಅವರ ಪಾತ್ರ ಇದೆ ಎಂಬ ಆರೋಪ ನಿರಾಧಾರ ಎಂಬುದು ಸಾಬೀತಾಗಿದೆ. ಅಂದು ಬಿಜೆಪಿ ರಾಜ್ಯ ನಾಯಕರು ಸೇರಿದಂತೆ ಜಿಲ್ಲಾ ಮುಖಂಡರು ವಿನಯ್‌ ಸಾವಿನಲ್ಲೂ ರಾಜಕೀಯ ಮಾಡಿದರು.

ಸಾವಿನಲ್ಲೂ ರಾಜಕೀಯ ಮಾಡಿದ ಬಿಜೆಪಿ ನಾಯಕರು ಕ್ಷಮೆ ಕೇಳಲಿ. ಮೃತ ವಿನಯ್‌ ಕುಟುಂಬಸ್ಥರ ಜೊತೆ ನಿಲ್ಲದ ಬಿಜೆಪಿ ನಾಯಕರು ಸಾವಿನಲ್ಲೂ ರಾಜಕೀಯ ಮಾಡಿ ತೆರಳಿದರು. ಇದೀಗ ಮೃತ ವಿನಯ್‌ ಕುಟುಂಬಕ್ಕೆ ಅಗತ್ಯ ಸಹಕಾರ ನಾನೇ ಮಾಡಬೇಕು ಎಂದು ಪೊನ್ನಣ್ಣ ಹೇಳಿದರು.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ