ಕೊಪ್ಪಳ:
ಜಿಲ್ಲೆಯಲ್ಲಿರುವ ಮಾಜಿ ದೇವದಾಸಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಸಮೀಕ್ಷೆಯಿಂದ ಹೊರ ಉಳಿಯದಂತೆ ಹಾಗೂ ನಿಖರ ಮಾಹಿತಿ ಸಂಗ್ರಹಿಸುವ ಮೂಲಕ ಸಮೀಕ್ಷೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿ ವತಿಯಿಂದ ನಡೆದ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಹಾಗೂ ಮಾಜಿ ದೇವದಾಸಿಯರ ಮರು ಸಮೀಕ್ಷೆ ಕುರಿತ ಜಿಲ್ಲಾಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮೀಕ್ಷೆ ಸೆ. 15ರಿಂದ ಆರಂಭವಾಗಲಿದ್ದು ಅಚ್ಚುಕಟ್ಟಾಗಿ ನಿರ್ವಹಿಸಬೇಕು. 1993-94 ಮತ್ತು 2007-08 ರಲ್ಲಿ ದೇವದಾಸಿ ಮಹಿಳೆಯರ ಸಮೀಕ್ಷೆ ನಡೆಸಿದ್ದು, ಆ ಸಮೀಕ್ಷೆಯಲ್ಲಿ ಮಾಜಿ ದೇವದಾಸಿಯರು ಕೈಬಿಟ್ಟು ಹೋಗಿದ್ದಲ್ಲಿ ಈಗ ನಡೆಯುವ ಮರು ಸಮೀಕ್ಷೆಯಲ್ಲಿ ಸೇರ್ಪಡೆಯಾಗಬೇಕು. ಮರಣ ಹೊಂದಿದ್ದರೆ ಅವರ ಕುಟುಂಬದ ಸದಸ್ಯರು ಈ ಸಮೀಕ್ಷೆಯಲ್ಲಿ ಸೇರ್ಪಡೆಯಾಗಲು ಇಚ್ಚಿಸಿದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಿಗೆ ಅವರ ಮಾಹಿತಿ ನೀಡಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದ ಅವರು, ಜಿಲ್ಲೆಯಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದ ಸದಸ್ಯರು ತಮ್ಮ ಸ್ಪಷ್ಟ ಮತ್ತು ನಿಖರ ಮಾಹಿತಿಯನ್ನು ತಾಲೂಕಾಸ್ಪತ್ರೆ ಅಥವಾ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸಮೀಕ್ಷೆಗೆ ಸಹಕರಿಸಬೇಕು ಎಂದರು. ಸಮೀಕ್ಷೆಗೆ ಬೇಕಾಗುವ ಅಗತ್ಯ ಸಿದ್ಥತೆ ಕೈಗೊಳ್ಳುವಂತೆ ಇದೇ ವೇಳೆ ಅಧಿಕಾರಿಗಳಿಗೆ ತಿಳಿಸಿದರು.ಪೋಸ್ಟರ್ ಬಿಡುಗಡೆ:
ಈ ವೇಳೆ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆಯ ಪೋಸ್ಟರ್ ಹಾಗೂ ದೇವದಾಸಿಯರ ಮರು ಸಮೀಕ್ಷೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.ಸಭೆಯಲ್ಲಿ ಜಿಪಂ ಸಿಇಒ ವರ್ಣಿತ್ ನೇಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೋಗಲದ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನಾಧಿಕಾರಿ ಪೂರ್ಣಿಮಾ ಏಳುಬಾವಿ, ದೇವದಾಸಿ ಮಹಿಳೆಯರ ಮರು ಸಮೀಕ್ಷೆ ರಾಜ್ಯ ಸಮಿತಿ ಸದಸ್ಯ ಚಂದಾಲಿಂಗಪ್ಪ ಕಲಾಲಬಂಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.