ಮಂಡ್ಯ ಜಿಲ್ಲಾದ್ಯಂತ ಸೆ.10ರಿಂದ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ: ಡಾ.ಕುಮಾರ

KannadaprabhaNewsNetwork |  
Published : Aug 20, 2025, 01:30 AM IST
19ಕೆಎಂಎನ್ ಡಿ30 | Kannada Prabha

ಸಾರಾಂಶ

ಸಮೀಕ್ಷೆ ಕೈಗೊಳ್ಳಲು 7 ತಾಲೂಕಿಗೆ ಒಬ್ಬರಂತೆ ಸಮೀಕ್ಷೆದಾರರನ್ನು ನೇಮಕ ಮಾಡಲಾಗಿದೆ. ಅವರಿಗೆ ಈಗಾಗಲೇ ತರಬೇತಿ ಸಹ ನೀಡಲಾಗಿದೆ. ಸಮೀಕ್ಷೆದಾರರು ತಾಲೂಕು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲಿದೆ. ಲಿಂಗತ್ವ ಅಲ್ಪಸಂಖ್ಯಾತರು ಆಸ್ಪತ್ರೆಗೆ ಭೇಟಿ ನೀಡಿ ನಿಖರ ಮಾಹಿತಿ ನೀಡಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಸೆಪ್ಟೆಂಬರ್ 10ರಿಂದ 45 ದಿನಗಳ ಕಾಲ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ಪೂರ್ವಭಾವಿ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಪ್ರಥಮ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದರು.

ಸಮೀಕ್ಷೆ ಕೈಗೊಳ್ಳಲು 7 ತಾಲೂಕಿಗೆ ಒಬ್ಬರಂತೆ ಸಮೀಕ್ಷೆದಾರರನ್ನು ನೇಮಕ ಮಾಡಲಾಗಿದೆ. ಅವರಿಗೆ ಈಗಾಗಲೇ ತರಬೇತಿ ಸಹ ನೀಡಲಾಗಿದೆ. ಸಮೀಕ್ಷೆದಾರರು ತಾಲೂಕು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲಿದೆ. ಲಿಂಗತ್ವ ಅಲ್ಪಸಂಖ್ಯಾತರು ಆಸ್ಪತ್ರೆಗೆ ಭೇಟಿ ನೀಡಿ ನಿಖರ ಮಾಹಿತಿ ನೀಡಿ ಎಂದರು.

ಈ ಹಿಂದೆ ಜಿಲ್ಲೆಯಲ್ಲಿ ಅಶೋದಯ ಸಮಿತಿಯಿಂದ ನಡೆಸಿದ ಸಮೀಕ್ಷೆಯಲ್ಲಿ 1039 ಲಿಂಗತ್ವ ಅಲ್ಪಸಂಖ್ಯಾರನ್ನು ಗುರುತಿಸಲಾಗಿದೆ. ಇವರು ಸಮೀಕ್ಷೆಯಲ್ಲಿ ನೋಂದಾಯಿಸಿಕೊಳ್ಳುವಂತೆ ನೋಡಿಕೊಳ್ಳಿ. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಮುಖ್ಯಸ್ಥರನ್ನು ಸಂಪರ್ಕಿಸಿ ಸಮೀಕ್ಷೆ ಬಗ್ಗೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಸಮೀಕ್ಷೆಯಿಂದ ಹೊರ ಉಳಿಯದಂತೆ ನೋಡಿಕೊಳ್ಳಿ ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಲಿಂಗತ್ವ ಅಲ್ಪಸಂಖ್ಯಾತರು ವಸತಿ ಸಮಸ್ಯೆ ಬಗ್ಗೆ ತಿಳಿಸಿದಾಗ ಜಿಲ್ಲಾಧಿಕಾರಿಗಳು ಮಂಡ್ಯ ನಗರಸಭೆಯಲ್ಲಿ ನಿವೇಶನ ಹಾಗೂ ವಸತಿ ರಹಿತರ ಪಟ್ಟಿ ಸಿದ್ಧ ಪಡಿಸುತ್ತಿದ್ದು, ಮಂಡ್ಯ ನಗರ ವ್ಯಾಪ್ತಿಯಲ್ಲಿ ಬರುವ ಲಿಂಗತ್ವ ಅಲ್ಪಸಂಖ್ಯಾತರು ನಗರಸಭೆಯ ಪಟ್ಟಿಯಲ್ಲಿ ಹೆಸರು ಸೇರಿಸುವಂತೆ ತಿಳಿಸಿದರು.

ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರಿಗೆ ಯೋಜನೆಗಳನ್ನು ರೂಪಿಸಲು, ಸವಲತ್ತುಗಳನ್ನು ಒದಗಿಸುವ ದೃಷ್ಟಿಯಿಂದ ಸಮೀಕ್ಷೆ ನಡೆಸುತ್ತದೆ. ಇದು ಸ್ವಯಂ ಪ್ರೇರಿತ ಸಮೀಕ್ಷೆಯಾಗಿರುತ್ತದೆ. ಲಿಂಗತ್ವ ಅಲ್ಪಸಂಖ್ಯಾತರು ಖುದ್ದು ತಾಲೂಕು ಆಸ್ಪತ್ರೆಗೆ ಆಗಮಿಸಿ ಮಾಹಿತಿ ನೀಡಬೇಕಿದೆ. ಇದರ ಬಗ್ಗೆ ಸಮುದಾಯದಲ್ಲಿ ಹೆಚ್ಚಿನ ಪ್ರಚಾರ ಕೈಗೊಂಡು ಸಮೀಕ್ಷೆಯನ್ನು ನಡೆಸಿ ಎಂದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ಡಿ.ಎಲ್ ಒ ಡಾ:ಸೋಮಶೇಖರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಎಸ್. ಹೆಚ್, ಮಹಿಳಾ ಸಬಲೀಕರಣ ಘಟಕದ ಪುಷ್ಪ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ