ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಹೊರವಲಯ ಎಂಆರ್‌ಪಿ ಸಮುದಾಯ ಭವನದಲ್ಲಿ ಗೌರಿಗಣೇಶ ಮತ್ತು ಈದ್‌ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಸಾಮರಸ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಸಣ್ಣ ಪುಟ್ಟ ಘಟನೆಗಳಿಗೂ ಅವಕಾಶ ಕೊಡದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದರು.
ಪಟ್ಟಣ ವ್ಯಾಪ್ತಿಯಲ್ಲಿ ಈ ಹಿಂದೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ವಿಸರ್ಜನೆಗೂ ಮುನ್ನ ನಡೆಸಿದ ಮೆರವಣಿಗೆ ಸಂದರ್ಭದಲ್ಲಿ ಯಾವೆಲ್ಲಾ ಘಟನೆಗಳು ಸಂಭವಿಸಿವೆ ಎಂಬುದು ಗೊತ್ತಿದೆ. ಹಾಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಬೇಕು ಎಂದರು.ಗಣೇಶ ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ ದಿನಾಂಕ, ಮೆರವಣಿಗೆಯ ಮಾರ್ಗಗಳನ್ನು ಪೊಲೀಸ್ ಇಲಾಖೆ ಅನುಮತಿ ಪಡೆದು ಅದರಂತೆಯೇ ನಡೆಸಬೇಕು. ಇದರಲ್ಲಿ ಬದಲಾವಣೆಯಾದರೆ ಕಾನೂನು ಕ್ರಮ ಜರುಗಿಸಲಾಗುವುದು. ಅನುಮತಿ ಪಡೆದ ನಿಗಧಿತ ದಿನಾಂಕ ಹಾಗೂ ಮಾರ್ಗದಲ್ಲಿಯೇ ವಿಸರ್ಜನಾ ಪೂರ್ವ ಮೆರವಣಿಗೆ ಸಾಗಿದರೆ ಅದಕ್ಕೆ ತಕ್ಕಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು ಎಂದರು.
ಈದ್ ಮಿಲಾದ್ ಹಬ್ಬದಂದು ಕೂಡ ಅನ್ನದಾನ ಹಾಗೂ ಪ್ರಾರ್ಥನೆ ಮಾತ್ರ ಇರಲಿದ್ದು, ಯಾವುದೇ ಮೆರವಣಿಗೆಗೆ ಅವಕಾಶವಿವಿಲ್ಲ. ಪೊಲೀಸ್ ಇಲಾಖೆ ಜೊತೆ ಎರಡು ಸಮುದಾಯದವರು ಸಹಕರಿಸಿ ಹಬ್ಬಗಳನ್ನು ಯಶಸ್ವಿಗೊಳಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಬೇಕೆಂದು ಮನವಿ ಮಾಡಿದರು.
ಪಟ್ಟಣದಲ್ಲಿ ಕಳೆದ ವರ್ಷ ಗಣೇಶ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಯಿಂದ ಈ ಬಾರಿ ಪಟ್ಟಣದ ಸುಮಾರು 10 ಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನು 9ನೇ ದಿನಕ್ಕೆ ಸಾಮೂಹಿಕ ಮೆರವಣಿಗೆ ನಡೆಸಿ ವಿಸರ್ಜಿಸಲು ನಿರ್ಧರಿಸಿರುವುದಾಗಿ ಹಿಂದೂ ಪರ ಸಂಘಟನೆಗಳ ಮುಖಂಡರು ಮಾಹಿತಿ ನೀಡಿದರು. ಮೆರವಣಿಗೆ ಸಾಗುವ ಮಾರ್ಗವನ್ನು ಬದಲಿಸದೆ ನಿಗಧಿತ ಸಮಯದೊಳಗೆ ಗಣೇಶ ಮೂರ್ತಿಗಳನ್ನು ವಿಸರ್ಜಿಸಬೇಕು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಹೊರಗಿನವರಿಗೆ ಅವಕಾಶ ನೀಡಬೇಡಿ:
ಸಭೆಯಲ್ಲಿ ಹಿಂದೂ ಮತ್ತು ಮುಸ್ಲೀಂ ಸಮುದಾಯದ ಮುಖಂಡರಿಂದ ಮಾಹಿತಿ ಹಾಗೂ ಅಭಿಪ್ರಾಯ ಸಂಗ್ರಹಿಸಲಾಯಿತು. ಎಎಸ್ಪಿ ತಿಮ್ಮಯ್ಯ, ಉಪವಿಭಾಗಾಧಿಕಾರಿ ಶ್ರೀನಿವಾಸ್, ಡಿವೈಎಸ್ಪಿ ಬಿ.ಚಲುವರಾಜು ಮಾತನಾಡಿದರು. ತಹಸೀಲ್ದಾರ್ ಜಿ.ಆದರ್ಶ, ಸಿಪಿಐ ನಿರಂಜನ್, ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್, ಪಿಎಸ್‌ಐಗಳಾದ ರಾಜೇಂದ್ರ, ರವಿಕುಮಾರ್, ಮಾರುತಿ ಸೇರಿದಂತೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಭಾಗಗಳ ಎರಡೂ ಸಮುದಾಯದ ಮುಖಂಡರು ಇದ್ದರು.