ಕಾಟಾಚಾರಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜಾಗ ಸರ್ವೆ!

KannadaprabhaNewsNetwork | Published : Feb 13, 2025 12:46 AM

ಸಾರಾಂಶ

Survey of government first grade college land for Katachara!

-ಬೀದರ್-ಬೆಂಗಳೂರು ರಾಜ್ಯ ಹೆದ್ದಾರಿ ಮಧ್ಯಭಾಗದಿಂದ 25 ಮೀ. ಬಿಟ್ಟು ಸರ್ವೇ । ಜಮೀನು ಮೇಲ್ನೋಟಕ್ಕೆ ಅತಿಕ್ರಮಣ, ಉಳ್ಳವರ ಪಾಲಾದ ಜಾಗ

------

ಮಲ್ಲಯ್ಯ ಪೋಲಂಪಲ್ಲಿ

ಕನ್ನಡಪ್ರಭ ವಾರ್ತೆ ಶಹಾಪುರ

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದ ಕೋಟ್ಯಂತರ ಮೌಲ್ಯದ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಭೂಮಾಪನ ಇಲಾಖೆಯ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿದ್ದರು. ಆದರೆ, ಅಧಿಕಾರಿಗಳು ನಡೆಸಿದ ಸರ್ವೇ ಕಾರ್ಯ ಕಾಟಾಚಾರಕ್ಕಾಗಿ ಮಾಡಿದಂತಿದೆ ಎಂದು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದ ಸರ್ವೇ ನಂಬರ್‌ 504ರಲ್ಲಿ 13 ಎಕರೆ 22 ಗುಂಟೆ ಜಮೀನಿನಲ್ಲಿ ಬೀದರ್-ಬೆಂಗಳೂರು ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ರಸ್ತೆ ಎರಡು ಭಾಗದಲ್ಲಿ ಜಮೀನು ಹಂಚಿಹೋಗಿದೆ. ಅಂದಾಜು 1.5 ರಿಂದ 2 ಎಕರೆ ಜಮೀನು ಹೆದ್ದಾರಿಯ ಉತ್ತರ ದಿಕ್ಕಿನಲ್ಲಿದೆ. ಈ ಜಮೀನು ಮೇಲ್ನೋಟಕ್ಕೆ ಅತಿಕ್ರಮಣ ಮಾಡಿರುವುದು ಕಂಡು ಬಂದಿದೆ. ಕನ್ನಡಪ್ರಭದಲ್ಲಿ ಡಿ.31ರಂದು ಶಹಾಪುರ ಸರ್ಕಾರಿ ಕಾಲೇಜಿನ ಜಾಗ ಒತ್ತುವರಿ ವಿಶೇಷ ವರದಿ ಮಾಡಿತ್ತು. ಈ ಹಿನ್ನೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿರುವ ಜಮೀನು ತಾಲೂಕು ಭೂಮಾಪಕರು ಸರ್ವೇ ನಡೆಸಿದರು.

ಸರ್ವೇ ಕಾರ್ಯ: ಬೀದರ್-ಬೆಂಗಳೂರು ರಾಜ್ಯ ಹೆದ್ದಾರಿಯ ಮಧ್ಯಭಾಗದಿಂದ 25 ಮೀಟರ್ ಬಿಟ್ಟು ಸರ್ವೇ ಕಾರ್ಯ ಮಾಡಲಾಗಿದೆ. ಒಂದು ಭಾಗದಲ್ಲಿ 15 ಮೀಟರ್, ಇನ್ನೊಂದು ಭಾಗದಲ್ಲಿ 7 ಮೀಟರ್ ಜಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದ್ದಾಗಿದೆ ಎಂದು ತಾಲೂಕ ಸರ್ವೇಯರ್ ಸೂರ್ಯಕಾಂತ್ ತಿಳಿಸಿದ್ದಾರೆ.

ಸರ್ವೇ ಅಧಿಕಾರಿಗಳ ಪ್ರಕಾರ ಒತ್ತುವರಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದ ಸರ್ವೇ ನಂಬರ್‌ 504ರಲ್ಲಿ ಜಮೀನನ್ನು ಸರ್ವೇ ನಂಬರ್ 4 21/3 ರ ಹಕ್ಕುದಾರರು 04 ಗುಂಟೆ ಮತ್ತು ಸರ್ವೇ ನಂಬರ 421/4 ರ ಹಕ್ಕುದಾರರು 07 ಗುಂಟೆ ಹಾಗೂ ಸರ್ವೇ ನಂಬರ್ 428/1 ರ ಹಕ್ಕುದಾರರು 04 ಗುಂಟೆ ಸೇರಿ ಒಟ್ಟು 15 ಗುಂಟೆ ಜಾಗ ಒತ್ತುವರಿಯಾಗಿದೆ ಎಂದು ಸರ್ವೇ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ.

ಕಾಟಾಚಾರದ ಸರ್ವೇ:ಆರೋಪ

ರಾಜಕೀಯ ಪ್ರಭಾವ ಅಥವಾ ಇನ್ಯಾವುದೋ ಪ್ರಭಾವಕ್ಕೆ ಒಳಗಾಗಿ ಸರ್ವೇ ಅಧಿಕಾರಿಗಳು ಸರ್ಕಾರಿ ಜಮೀನು ಸರಿಯಾಗಿ ಸರ್ವೇ ಮಾಡದೆ ಕಾಟಾಚಾರಕ್ಕಾಗಿ ಸರ್ವೇ ಮಾಡಿದಂತಿದೆ. ಒಂದು ಅಡಿಗೂ ಚಿನ್ನದ ಬೆಲೆ ಇರುವ ಈ ಜಮೀನು ಉಳಿಸಬೇಕಾದ ಸರ್ಕಾರಿ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಅಳತೆ ಮಾಡಿರೋದು ಸರಿಯಾದ ಕ್ರಮವಲ್ಲ. ಸರ್ಕಾರಿ ಜಾಗವನ್ನು ಸರಿಯಾಗಿ ಅಳತೆ ಮಾಡದೆ ಹೋದರೆ ನ್ಯಾಯಾಲಯದಲ್ಲಿ ದೂರ ದಾಖಲಿಸಬೇಕಾಗುತ್ತದೆ. ಕಾಲೇಜಿಗೆ ಸೇರಿದ ಜಮೀನನ್ನು ನ್ಯಾಯಯುತವಾಗಿ ಸರಿಯಾಗಿ ಸರ್ವೇ ಮಾಡಿಕೊಡಬೇಕೆಂದು ಅಖಿಲ ಕರ್ನಾಟಕ ಕುಳುವ ಮಹಾಸಂಘದ ಜಿಲ್ಲಾಧ್ಯಕ್ಷ ಬಸವರಾಜ್ ಭಜಂತ್ರಿ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

---ಬಾಕ್ಸ್---

* ನಾಮ್‌ ಕಾ ವಾಸ್ತೆ ಸರ್ವೇ ?

ಸರ್ವೇ ಅಧಿಕಾರಿ ಹೇಳುವ ಪ್ರಕಾರ ರಾಜ್ಯ ಹೆದ್ದಾರಿ ಮಧ್ಯಭಾಗದಿಂದ 25 ಮೀಟರ್ ಹೆದ್ದಾರಿ ಜಾಗ ಬಿಟ್ಟು ಸರ್ವೇ ಮಾಡಬೇಕು. ಆದರೆ, ರಸ್ತೆ ಮಧ್ಯಭಾಗದಿಂದ ಅಳತೆ ಮಾಡಿ ಗುರುತು ಮಾಡಿ ಸರ್ವೇ ಅಧಿಕಾರಿಗಳು ಹಾಕಿದ ಗುರುತಿನ ಕಲ್ಲುಗಳನ್ನು ನೋಡಿದರೆ ಗೊತ್ತಾಗುತ್ತದೆ. ಈ ಅಧಿಕಾರಿ ಯಾವ ರೀತಿ ಸರ್ವೇ ಮಾಡಿದ್ದಾರೆ ಎಂದು. ಇವರು ಯಾವುದೋ ಪ್ರಭಾವಕ್ಕೆ ಒಳಗಾಗಿ ಸರ್ಕಾರಿ ಜಮೀನು ಸರಿಯಾಗಿ ಸರ್ವೇ ಮಾಡದೆ ನಾಮ್‌ ಕಾ ವಾಸ್ತೆ ಸರ್ವೇ ಮಾಡಿ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ. ಒಂದೊಂದು ಅಡಿಗೂ ಈ ಜಾಗಕ್ಕೆ ಬಂಗಾರದ ಬೆಲೆ ಇದೆ. ಇಂಥ ಬೆಲೆ ಬಾಳುವ ಜಮೀನನ್ನು ಒತ್ತುವರಿದಾರರಿಗೆ ಅನುವು ಮಾಡಿಕೊಟ್ಟಂತಿದೆ. ಈ ಜಾಗವನ್ನು ಪುನಃ ಬೇರೆ ಜಿಲ್ಲೆಯ ಸರ್ವೆಯರ್ ಗಳನ್ನು ಕರೆಯಿಸಿ ಹದ್ದುಬಸ್ತು ಮಾಡಿಕೊಡಬೇಕು ಎಂದು ಜಿಲ್ಲಾ ದಲಿತ ಹಾಗೂ ಕಾರ್ಮಿಕ ಮುಖಂಡ ನಿಂಗಣ್ಣ ನಾಟೇಕಾರ್ ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದಾರೆ.

--

ಕೋಟ್-1: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದ ಜಮೀನನ್ನು ಭೂ ಮಾಪನ ಇಲಾಖೆಯವರು ಸರ್ವೇ ಮಾಡಿ ಜಾಗ ಗುರುತಿಸಿ ಕೊಟ್ಟಿದ್ದಾರೆ.

- ಉಮಾಕಾಂತ್ ಹಳ್ಳೆ, ತಹಸೀಲ್ದಾರ್, ಶಹಾಪುರ.

-

ಕೋಟ್-2..

ಸ್ಥಳೀಯ ಸರ್ವೇ ಅಧಿಕಾರಿಗಳಿಂದ ಸರಿಯಾದ ಸರ್ವೇ ಕಾರ್ಯ ಸಾಧ್ಯವಿಲ್ಲ. ಬಂಗಾರದ ಬೆಲೆ ಇರುವ ಸರ್ಕಾರಿ ಜಮೀನನ್ನು ಸಂರಕ್ಷಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಆದರೆ, ಅಧಿಕಾರಿಗಳು ತಮ್ಮ ಜವಾಬ್ದಾರಿ ಮರೆತು ಜಮೀನು ಕಬಳಿಕೆಗೆ ಸಾಥ್ ನೀಡಿರುವ ಅನುಮಾನವಿದೆ. ಇದರ ಬಗ್ಗೆ ತನಿಖೆಯಾಗಲಿ.

- ಚಂದ್ರಶೇಖರ್ ಯಾಳಗಿ, ನಗರ ಮಂಡಲ ಬಿಜೆಪಿ ಅಧ್ಯಕ್ಷರು, ಶಹಾಪುರ.

---

12ವೈಡಿಆರ್3: ಶಹಾಪುರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಜಾಗ ಸರ್ವೇ ಮಾಡುತ್ತಿರುವ ಅಧಿಕಾರಿಗಳು.

--

12ವೈಡಿಆರ್4: ಜಮೀನಿನ ಸರ್ವೇ ನಕ್ಷೆ.

----

Share this article